ಕನ್ನಡಪ್ರಭ ವಾರ್ತೆ ವಿಜಯಪುರ
ಕಾಂಗ್ರೆಸ್ ಸರ್ಕಾರ ಬೆಳೆಗಳ ಖರೀದಿ ಕೇಂದ್ರಗಳ ಬದಲು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಸೇರಿ ಶಾಸಕರ ಖರೀದಿ ಕೇಂದ್ರ ತೆರೆದಿದ್ದಾರೆ ಎಂದು ಬಿಜೆಪಿ ರಾಜ್ಯ ರೈತಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಲೇವಡಿ ಮಾಡಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು, ಖರೀದಿ ಕೇಂದ್ರ ತೆರೆಯಬೇಕೆಂದು ರೈತರು ಹೋರಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಿಲ್ಲ. ಬಾಗಲಕೋಟೆಯಲ್ಲಿ ಖರೀದಿ ಕೇಂದ್ರದ ಸ್ಯಾಂಪಲ್ ತೆಗೆದಿದ್ದಾರೆ. ಅದರಲ್ಲಿ ಓಕೆಯಾದರೇ ರೈತರು ಧಾರವಾಡಕ್ಕೆ ಒಯ್ದು ಕೊಡಬೇಕು. 20 ಕ್ವಿಂಟಲ್ ಮೆಕ್ಕೆಜೋಳಕ್ಕೆ ₹10 ಸಾವಿರ ರೂಪಾಯಿ ಖರ್ಚು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ಮಳೆಯಿಂದಾಗಿ ಬೆಳೆ ನಷ್ಟವಾಗುತ್ತಿದ್ದಂತೆ ರೈತರ ಬೆಂಬಲಕ್ಕೆ ನಿಂತು ಕಳೆದ 3 ತಿಂಗಳಿನಿಂದ ನಾವು ಸಾಂಕೇತಿಕವಾಗಿ ಹೋರಾಟ ಮಾಡುತ್ತಿದ್ದೇವೆ. ವೈಜ್ಞಾನಿಕ ಸರ್ವೇ ಮಾಡಬೇಕು. ಸೂಕ್ತ ಪರಿಹಾರ ಕೊಡಬೇಕು ಎಂದು ತಾಲೂಕು ಹಾಗೂ ಜಿಲ್ಲಾ ಅಧಿಕಾರಿಗಳಿಗೆ ಮನವಿ ನೀಡಿದ್ದೇವೆ. ರಸ್ತೆತಡೆ ಮಾಡುವ ಮೂಲಕ ಹೋರಾಟ ಮಾಡಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.ಸಿದ್ದರಾಮಯ್ಯನವರು ಹೆಲಿಕಾಪ್ಟರ್‌ನಲ್ಲಿ ಬಂದು ಗಿರಕಿ ಹೊಡೆದು 14 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆಂದು ಹೇಳಿದ್ದಾರೆ. ಆದರೆ, ನಮ್ಮ ಸರ್ವೇ ಹಾಗೂ ಅಂದಾಜಿನ ಪ್ರಕಾರ ₹38 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಪ್ರತಿ ಎಕರೆಗೆ ಕೇವಲ ₹16 ಸಾವಿರ ಪರಿಹಾರ ಕೊಟ್ಟಿದ್ದಾರೆ. ಹೆಚ್ಚುವರಿಯಾಗಿ ಇನ್ನೂ ₹20 ಸಾವಿರ ಹೆಚ್ಚಿನ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.ಹಲವು ನೀರಾವರಿ ಯೋಜನೆಗಳು ಬಾಕಿ ಉಳಿದಿವೆ. ಭೂ ಸ್ವಾಧೀನ ಮಾಡಿಕೊಂಡ ಜಮೀನಿಗೆ ಪರಿಹಾರ ಕೊಟ್ಟಿಲ್ಲ. ಜಿಲ್ಲೆಯಲ್ಲಿರುವ 204 ಕೆರೆಗಳನ್ನು ನೀರು ತುಂಬಿಸುವ ಕೆಲಸ ಮಾಡಬೇಕು. ತುಂಗಭದ್ರಾ ಡ್ಯಾಂನಿಂದ 2ನೇ ಬೆಳೆಗೆ ನೀರು ಕೊಡಬೇಕು, ಇಲ್ಲ ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.ರೈತರಿಗೆ ಸಂಬಂಧಿಸಿದಂತೆ 9 ಜನ ಸಚಿವರಿದ್ದರೂ ಯಾರೊಬ್ಬರೂ ರೈತರ ಬಗ್ಗೆ ಕಾಳಜಿ ವಹಿಸುತ್ತಿಲ್ಲ, ರಾಜ್ಯದಲ್ಲಿ ಒಂದೇ ಒಂದು ಜಿಲ್ಲೆಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದಾರಾ?. ಈ ಸರ್ಕಾರ ರೈತರ ಪರವಾಗಿ ನಿಲ್ಲುವ ವಿಶ್ವಾಸವಿಲ್ಲ. ಈ ಸರ್ಕಾರ ಯಾವಾಗ ಹೋಗುತ್ತೆ ಎಂದು ರೈತರು ಕಾಯುತ್ತಿದ್ದಾರೆ. ಮುಂದಿನ ಎರಡೂವರೆ ವರ್ಷ ರೈತರ ಜೊತೆಗೂಡಿ ಸರ್ಕಾರದ ವಿರುದ್ಧ ಸಂಘರ್ಷಿತ ಹೋರಾಟ ನಡೆಸುತ್ತೇವೆ ಎಂದು ಗುಡುಗಿದರು.ಚಳಿಗಾಲದ ಅಧಿವೇಶನದಲ್ಲಿ ನಮ್ಮ ನಾಯಕರು ಪ್ರಶ್ನಿಸುತ್ತಾರೆ. ಹೊರಗೆ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ 25 ಸಾವಿರ ರೈತರೊಂದಿಗೆ ರೈತರ ನಡಿಗೆ ಸುವರ್ಣಸೌಧದ ಕಡೆಗೆ ಎಂದು ರೈತರ ಪರವಾಗಿ ಧ್ವನಿ ಎತ್ತಲಿದ್ದೇವೆ. ರಾಜ್ಯ ಸರ್ಕಾರ ರೈತರನ್ನು ಮರೆತಿರುವುದರಿಂದ ನಾವು ಹೋರಾಟಕ್ಕಿಳಿಯಬೇಕಾಗಿದೆ ಎಂದು ತಿಳಿಸಿದರು.ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ರಮೇಶ ಭೂಸನೂರ, ವಿಜುಗೌಡ ಪಾಟೀಲ, ಕಾಸುಗೌಡ ಬಿರಾದಾರ, ಸಂಜೀವ ಐಹೊಳ್ಳಿ, ರಾಜ್ಯ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ, ರೈತಮೋರ್ಚಾ ಜಿಲ್ಲಾಧ್ಯಕ್ಷ ಬಾಲರಾಜ ದಡ್ಡಿ, ಸಂಜಯ ಪಾಟೀಲ ಕನಮಡಿ, ವಿಜಯ ಜೋಶಿ ಇದ್ದರು.ರಾಜ್ಯದಲ್ಲಿ 24 ಲಕ್ಷ ಹಾಲು ಉತ್ಪಾದಕ ಕುಟುಂಬಗಳಿವೆ. ಹಾಲಿನ ದರ ಹೆಚ್ಚಿಸಿರುವ ಇವರು ಹಾಲು ಉತ್ಪಾದಕರಿಗೆ ಕೊಡಬೇಕಿರುವ 4 ತಿಂಗಳ ₹620 ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ. ಮನೆ ಬಿದ್ದಾಗ ಹಿಂದೆ ಯಡಿಯೂರಪ್ಪನವರು ಸಿಎಂ ಇದ್ದಾಗ ಎನ್.ಡಿ.ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್ ಸೇರಿ ₹6 ಲಕ್ಷ ಪರಿಹಾರ ಕೊಟ್ಟಿದ್ದರು. ಕಳೆದೆರಡೂವರೆ ವರ್ಷದಲ್ಲಿ 2.55 ಲಕ್ಷ ಮನೆಗಳು ಬಿದ್ದಿವೆ. ಅವರಿಗೆ ಈಗ ಎನ್.ಡಿ.ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್ ಸೇರಿ ₹2.40 ಲಕ್ಷ ಕೊಡ್ತಾರೆ. ಅಷ್ಟರಲ್ಲಿ ಮನೆ ನಿರ್ಮಿಸಿಕೊಳ್ಳಲು ಸಾಧ್ಯವೆ?
-ಎ.ಎಸ್.ಪಾಟೀಲ ನಡಹಳ್ಳಿ, ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷರು.