ನಾಡಿನ ಪವಿತ್ರ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಡಾ.ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ನಿಂದ ರಾಜ್ಯದಲ್ಲಿ ನಡೆಯುತ್ತಿರುವ ಸಮಾಜಮುಖಿ ಕಾರ್ಯಗಳು ಮಾದರಿಯಾಗಿವೆ ಎಂದು ಸ್ಥಳೀಯ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ನುಡಿದರು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ನಾಡಿನ ಪವಿತ್ರ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಡಾ.ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ನಿಂದ ರಾಜ್ಯದಲ್ಲಿ ನಡೆಯುತ್ತಿರುವ ಸಮಾಜಮುಖಿ ಕಾರ್ಯಗಳು ಮಾದರಿಯಾಗಿವೆ ಎಂದು ಸ್ಥಳೀಯ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ನುಡಿದರು.ಪಟ್ಟಣದ ನಂದಿ ಮಾರುಕಟ್ಟೆ ಹತ್ತಿರವಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ತಾಲೂಕು ಘಟಕ ಸಾಮೂಹಿಕ ಸತ್ಯನಾರಾಯಣ ಪೂಜೆಯಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಸಮಾಜ ನಿರ್ಮಿಸುವಲ್ಲಿ ಧರ್ಮಾಧಿಕಾರಿಗಳು ಮಾಡುತ್ತಿರುವ ಕೆಲಸ ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ಸಾಧ್ಯವಾಗಿದೆ. ಇವರ ಸಮಾಜ ಸೇವಾ ಕೈಂಕರ್ಯ ನಿರಂತರವಾಗಿ ನಾಡಿಗೆ ಸದಾ ಇರುವಂತಾಗಲೆಂದು ಆಶಿಸಿದರು.ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯೆ ಸಾವಿತ್ರಿ ಕಲ್ಯಾಣಶೆಟ್ಟಿ ಮಾತನಾಡಿ, ವೀರೇಂದ್ರ ಹೆಗ್ಗಡೆಯವರು ಮಹಿಳಾ ಸಬಲೀಕರಣಕ್ಕಾಗಿ ಮಾಡುತ್ತಿರುವ ಕೆಲಸ ಇಡೀ ದೇಶದಲ್ಲಿ ಮಾದರಿಯಾಗಿದೆ.ಅಂಗವಿಕಲರಿಗೆ ವಿದ್ಯಾರ್ಥಿಗಳಿಗೆ, ವೃದ್ಧರಿಗೆ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟಿನಿಂದ ಸಿಗುತ್ತಿರುವ ಸೌಲಭ್ಯಗಳು ನಿಜವಾಗಿಯೂ ಮಾದರಿಯಾಗಿವೆ. ಇದರ ಸದುಪಯೋಗವನ್ನು ಪಡೆದುಕೊಂಡ ಅದೆಷ್ಟೋ ಜನ ತಮ್ಮ ಬದುಕನ್ನು ರೂಪಿಸಿ ಕೊಂಡಿದ್ದಾರೆ ಎಂದರು.
ವಿಶ್ವ ಹಿಂದೂ ಪರಿಷತ್ ಬಜರಂಗದಳದ ಅಧ್ಯಕ್ಷ ಮಹೇಶ ಸಾಲವಾಡಗಿ ಹಾಗೂ ಜನಜಾಗೃತಿಯ ವೇದಿಕೆ ಸದಸ್ಯ ಪರಶುರಾಮ ಜಮಖಂಡಿ ಮಾತನಾಡಿ, ಧರ್ಮಸ್ಥಳ ಸಂಸ್ಥೆಯು ಗ್ರಾಮೀಣ ಅಭಿವೃದ್ಧಿಯಲ್ಲಿ ವಿಶೇಷ ಕಾರ್ಯಗಳನ್ನು ಮಾಡುತ್ತಿರುವುದು ನಾವೆಲ್ಲ ಗಮನಿಸಬಹುದಾಗಿದೆ. ಕೆರೆಗಳ ಪುನರ್ ನಿರ್ಮಾಣ ಸೇರಿದಂತೆ ಸರ್ಕಾರ ಮಾಡುವ ಕೆಲಸಗಳನ್ನು ಮಾಡುತ್ತಿದೆ ಎಂದರು.ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ಡಾ.ಅಮರೇಶ ಮಿಣಜಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯಸಭೆ ಸದಸ್ಯ ಡಾ.ವೀರೇಂದ್ರ ಹೆಗ್ಗಡೆಯವರು ದೂರದೃಷ್ಟಿಯನ್ನು ಹೊಂದಿದ ಫಲವಾಗಿ ಜನಸಾಮಾನ್ಯರಿಗೆ ಈ ಸಂಸ್ಥೆಯಿಂದ ಉತ್ತಮ ಸೇವೆ ಸಿಗುತ್ತಿವೆ. ಇದರಿಂದಾಗಿ ಅವರ ಬದುಕು ಹಸನಾಗುತ್ತಿದೆ ಎಂದರು.ಸತ್ಯನಾರಾಯಣ ಪೂಜೆ ನೆರವೇರಿಸಿದ ಅರ್ಚಕ ರವೀಂದ್ರ ಪುರೋಷತ್ತಮ ಜೋಶಿ ಮಾತನಾಡಿದರು.ಪ್ರಾಸ್ತವಿಕವಾಗಿ ಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ತಾಲೂಕು ಯೋಜನಾಧಿಕಾರಿ ಪ್ರಸನ್ನ.ಆರ್ ಮಾತನಾಡಿದರು. ಮೇಲ್ವಿಚಾರಕ ಮಂಜುನಾಥ ಎನ್.ಎಚ್. ಸ್ವಾಗತಿಸಿದರು. ಕೃಷಿ ಮೇಲ್ವಿಚಾರಕ ರಾಜು ಬೇಟಗೇರಿ ನಿರೂಪಿಸಿದರು. ಸಂಗೀತಾ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಅರ್ಚಕ ರವೀಂದ್ರ ಪುರೋಷತ್ತಮ ಜೋಶಿ ಅವರು ಸಾಮೂಹಿಕ ಸತ್ಯನಾರಾಯಣ ಪೂಜೆ ನೆರವೇರಿಸಿದರು. ಸತ್ಯನಾರಾಯಣ ಪೂಜಾ ಕೈಂಕರ್ಯದಲ್ಲಿ 71 ದಂಪತಿಗಳು ಭಾಗವಹಿಸಿದ್ದರು. ನಂತರ ಪ್ರಸಾದ ವಿತರಿಸಲಾಯಿತು.