ಇಂದು ಕುಣಿಗಲ್‌ಗೆ ಸಿಎಂ, ಡಿಸಿಎಂ ಭೇಟಿ

KannadaprabhaNewsNetwork | Published : Mar 1, 2024 2:16 AM

ಸಾರಾಂಶ

ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಹಾಗೂ ಫಲಾನುಭವಿಗಳಿಗೆ ಸವಲತ್ತು ವಿತರಿಸಲು ಮಾರ್ಚ್ 1ರಂದು ಕುಣಿಗಲ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಯುವ ಸ್ಥಳ ಪರಿವೀಕ್ಷಣೆ ಮಾಡಲು ಹಾಗೂ ಕಾರ್ಯಕ್ರಮದ ಪೂರ್ವ ಸಿದ್ಧತೆ ಕುರಿತು ಕ್ರಮವಹಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ತುಮಕೂರು

ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಹಾಗೂ ಫಲಾನುಭವಿಗಳಿಗೆ ಸವಲತ್ತು ವಿತರಿಸಲು ಮಾರ್ಚ್ 1ರಂದು ಕುಣಿಗಲ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಯುವ ಸ್ಥಳ ಪರಿವೀಕ್ಷಣೆ ಮಾಡಲು ಹಾಗೂ ಕಾರ್ಯಕ್ರಮದ ಪೂರ್ವ ಸಿದ್ಧತೆ ಕುರಿತು ಕ್ರಮವಹಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿ ಗುರುವಾರ ಬೆಳಿಗ್ಗೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ತುರ್ತು ವೀಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿದರು.

ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ವಿವಿಧ ಸರ್ಕಾರಿ ಯೋಜನೆಗಳಡಿ ಸವಲತ್ತು ಪಡೆದ ಫಲಾನುಭವಿಗಳನ್ನು ಸಂಬಂಧಿಸಿದ ಇಲಾಖೆಗಳೇ ಕರೆತರಬೇಕು. ನಿಯೋಜಿತ ನೋಡಲ್ ಅಧಿಕಾರಿಗಳು ಫಲಾನುಭವಿಗಳೊಂದಿಗೆ ಮಾರ್ಚ್ 1ರಂದು ಮಧ್ಯಾಹ್ನ 12 ಗಂಟೆಯೊಳಗಾಗಿ ಕಾರ್ಯಕ್ರಮ ನಡೆಯಲಿರುವ ಕುಣಿಗಲ್ ಪಟ್ಟಣದ ಜಿ.ಕೆ.ಬಿ.ಎಂ.ಎಸ್. ಮೈದಾನದಲ್ಲಿ ಹಾಜರಿರಬೇಕು. ಫಲಾನುಭವಿಗಳನ್ನು ಕಾರ್ಯಕ್ರಮಕ್ಕೆ ಕರೆತರುವಾಗ ಬೆಳಗಿನ ಉಪಹಾರದ ವ್ಯವಸ್ಥೆ ಮಾಡಬೇಕು. ಸಾರ್ವಜನಿಕರಿಗೆ ವಿತರಿಸಲು ೨೫ ಸಾವಿರ ಮಜ್ಜಿಗೆ ಹಾಗೂ ನೀರಿನ ಪ್ಯಾಕೆಟ್‌ಗಳನ್ನು ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಫಲಾನುಭವಿಗಳ ಅನುಕೂಲಕ್ಕಾಗಿ ಕಾರ್ಯಕ್ರಮಕ್ಕೆ ಹಾಜರಾಗಲು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯತಿಗಳಿಂದ ಬಸ್ಸಿನ ವ್ಯವಸ್ಥೆ ಮಾಡಲಾಗಿದ್ದು, ಫಲಾನುಭವಿಗಳನ್ನು ಕರೆತರಲು ನಿಯೋಜಿಸಲಿರುವ ಬಸ್ಸಿನ ಸಂಖ್ಯೆ, ಚಾಲಕರು ಹಾಗೂ ಅವರ ಮೊಬೈಲ್ ಸಂಖ್ಯೆಯ ಪಟ್ಟಿಯನ್ನು ಕೂಡಲೇ ಜಿಲ್ಲಾಡಳಿತಕ್ಕೆ ಒದಗಿಸಬೇಕೆಂದು ಕೆಎಸ್‌ಆರ್‌ಟಿಸಿ ಅಧಿಕಾರಿಗೆ ಸೂಚನೆ ನೀಡಿದರು.

ಜಿಲ್ಲೆಯ ನಗರ ಸೇರಿದಂತೆ ಎಲ್ಲ ತಾಲೂಕುಗಳ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳಿಗೆ ಆಹ್ವಾನಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಮುಖ್ಯಮಂತ್ರಿಗಳ ಕಾರ್ಯಕ್ರಮ ಮುಕ್ತಾಯವಾಗುವವರೆಗೂ ಎಲ್ಲ ಅಧಿಕಾರಿ, ನೌಕರರು ಕಡ್ಡಾಯವಾಗಿ ಹಾಜರಿರಬೇಕು. ತಪ್ಪಿದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಫಲಾನುಭವಿಗಳಿಗೆ ವಿತರಿಸಲಾಗುವ ಸವಲತ್ತುಗಳನ್ನು ಕಾರ್ಯಕ್ರಮದ ಮುನ್ನಾ ದಿನವೇ ತಂದಿಟ್ಟುಕೊಳ್ಳಬೇಕು. ಯಾವುದೇ ಗೊಂದಲ, ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆಯಿಂದ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತಿ ಸಿಇಒ ಜಿ. ಪ್ರಭು, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಸೇರಿದಂತೆ ಮತ್ತಿತರ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Share this article