ಕುರ್ಚಿ ಉಳಿಸಿಕೊಳ್ಳಲು ಸಿಎಂ ದೆಹಲಿಯಾತ್ರೆ: ಮಾಜಿ ಶಾಸಕ ಪಿ.ರಾಜೀವ್‌

KannadaprabhaNewsNetwork | Published : Jul 31, 2024 1:02 AM

ಸಾರಾಂಶ

ರಾಜ್ಯದ ನೆರೆಪೀಡಿದ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಿ ಜನರ ಸಂಕಷ್ಟವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕುರ್ಚಿ ಉಳಿಸಿಕೊಳ್ಳಲು ದೆಹಲಿಗೆ ತೆರಳಿದ್ದಾರೆ. ಜನರ ಜೊತೆಗೆ ನಿಲ್ಲಬೇಕಾದ ಸರ್ಕಾರ ನಿರ್ಲಕ್ಷ ವಹಿಸಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯದ ೧೨ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ರಾಜ್ಯದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ದೆಹಲಿ ಯಾತ್ರೆ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಆರೋಪಿಸಿದರು.

ರಾಜ್ಯದ ನೆರೆಪೀಡಿದ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಿ ಜನರ ಸಂಕಷ್ಟವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕುರ್ಚಿ ಉಳಿಸಿಕೊಳ್ಳಲು ದೆಹಲಿಗೆ ತೆರಳಿದ್ದಾರೆ. ಜನರ ಜೊತೆಗೆ ನಿಲ್ಲಬೇಕಾದ ಸರ್ಕಾರ ನಿರ್ಲಕ್ಷ ವಹಿಸಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಭಾರತೀಯ ಜನತಾ ಪಕ್ಷ ಜನರ ಜೊತೆಗೆ ನಿಲ್ಲಬೇಕು. ಅವರ ಸಂಕಷ್ಟಗಳಿಗೆ ಆಸರೆಯಾಗಬೇಕು ಎಂಬ ಉದ್ದೇಶದಿಂದ ೬ ತಂಡಗಳನ್ನಾಗಿ ಮಾಡಿ ರಾಜ್ಯಾದ್ಯಂತ ಪ್ರವಾಹ ಪೀಡಿತ ಪ್ರದೇಶಗಳಗೆ ತೆರಳಿ ನೆರೆಪೀಡಿತರ ನೆರವಿಗೆ ಮುಂದಾಗುವುದಾಗಿ ತಿಳಿಸಿದರು.

೫ ಲಕ್ಷ ಪರಿಹಾರಕ್ಕೆ ಒತ್ತಾಯ:

ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಪ್ರವಾಹದಿಂದಾಗಿ ಮನೆ ಕಳೆದುಕೊಂಡವರಿಗೆ ೫ ಲಕ್ಷ ರು. ಪರಿಹಾರ ನೀಡಿದ್ದರು. ಇದರಲ್ಲಿ ಎನ್‌ಡಿಆರ್‌ಎಫ್‌ನ ೯೦ ಸಾವಿರ ರು.ಅನುದಾನ ಜೊತೆಗೆ ೪.೧೦ ಲಕ್ಷ ರಾಜ್ಯ ಸರ್ಕಾರದ ಅನುದಾನ ಸೇರಿಸಿ ನೀಡಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದ ಎನ್‌ಡಿಆರ್‌ಎಫ್ ನೀಡಿರುವ ೯೦ ಸಾವಿರ ರು. ಹಣವನ್ನು ಮಾತ್ರ ನೀಡುತ್ತಿದೆ. ಹೆಚ್ಚಿನ ಅನುದಾನ ನಮ್ಮಲ್ಲಿ ಲಭ್ಯವಿಲ್ಲ ಎಂದು ಹೇಳುವುದು ಅವರ ಬೇಜವಾಬ್ದಾರಿತನ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ನೆರೆಯಿಂದ ಮನೆ ಕಳೆದುಕೊಂಡವರಿಗೆ ನೀಡಿದ್ದ ಅನುದಾನದ ಮಾದರಿಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರವೂ ನೆರೆ ಹಾವಳಿಯಿಂದ ಮನೆ ಕಳೆದುಕೊಂಡವರಿಗೆ ೫ ಲಕ್ಷ ರು.ಪರಿಹಾರ ನೀಡಬೇಕು. ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಕಾಳಜಿ ಕೇಂದ್ರಗಳನ್ನು ತಕ್ಷಣ ತೆರೆಯುವುದರೊಂದಿಗೆ ನಿರಾಶ್ರಿತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.

ಕೀಳು ಮಟ್ಟದ ರಾಜಕೀಯ:

ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಪಾದಯಾತ್ರೆಗೆ ಅನುಮತಿ ನೀಡಲಾಗದು ಎಂದು ಹೇಳುವ ಮೂಲಕ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಹಿಂದೆ ಅವರು ನಮಗೆ ನೀಡಿದ್ದರೇ ಎಂದು ಪ್ರಶ್ನಿಸಿದ್ದಾರೆ. ಹಿಂದೆ ಕೋವಿಡ್ ಸಂದರ್ಭದಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಬಿಜೆಪಿ ನೇತೃತ್ವದ ಸರ್ಕಾರ ಪಾದಯಾತ್ರೆಗೆ ಅನುಮತಿ ನೀಡಿರಲಿಲ್ಲ. ಆದರೂ ಅವರು ಪಾದಯಾತ್ರೆ ಮಾಡಿದರು ಎಂದರು.

ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ನಡೆಸಿದ ಬಳ್ಳಾರಿ ಪಾದಯಾತ್ರೆಗೆ ಅನುಮತಿ ನೀಡಿದ್ದೂ ಅಲ್ಲದೇ, ಅದಕ್ಕೆ ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ಮಾಡಿಕೊಟ್ಟಿದ್ದರು. ರಾಹುಲ್‌ ಗಾಂಧಿ ಜೋಡೋ ಯಾತ್ರೆ ಮಾಡಿದಾಗಲೂ ಬಿಜೆಪಿ ಸರ್ಕಾರಗಳು ಇರುವ ಕಡೆಗಳಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಎಲ್ಲ ರೀತಿಯ ಸಹಕಾರವನ್ನೂ ನೀಡಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ತನ್ನ ಉಳುಕುಗಳನ್ನು ಮುಚ್ಚಿಕೊಳ್ಳಲು ನಾವು ನಡೆಸುವ ಪಾದಯಾತ್ರೆ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ದೂರಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಕೆಆರ್‌ಡಿಎಲ್ ಮಾಜಿ ಅಧ್ಯಕ್ಷ ರುದ್ರೇಶ್, ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ, ಮುಖಂಡರಾದ ಕೆ.ಎಸ್. ಸಚ್ಚಿದಾನಂದ, ವಿವೇಕ್, ಸಿ.ಟಿ.ಮಂಜುನಾಥ್ ಗೋಷ್ಠಿಯಲ್ಲಿದ್ದರು.

Share this article