ಕನ್ನಡಪ್ರಭ ವಾರ್ತೆ ಬೆಂಗಳೂರು
ಶನಿವಾರ ಚಲ್ಲಘಟ್ಟದಲ್ಲಿ ಬಿಡಿಎ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ದಿನಾಚರಣೆ ಹಾಗೂ 10.7 ಕಿ.ಮೀ ಉದ್ದದ ಎಸ್.ಎಂ.ಕೃಷ್ಣ ದಶಪಥ ರಸ್ತೆ (ಎಂ.ಎ.ಆರ್) ಉದ್ಘಾಟಿಸಿದ ಮಾತನಾಡಿದ ಅವರು, 10 ಪಥಗಳ ನೂತನ ರಸ್ತೆ ಮುಂದೆ 123 ಕಿ.ಮೀ ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ ಆಗಿ ಬೆಳೆಯಲಿದೆ. ಮೊದಲ ಹಂತದ ರಸ್ತೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಎಲೆಕ್ಟ್ರಾನಿಕ್ ಸಿಟಿವರೆಗೆ ರಸ್ತೆ ವಿಸ್ತರಿಸಲು ಸದ್ಯದಲ್ಲೇ ಅಧಿಸೂಚನೆ ಹೊರಡಿಸುತ್ತೇವೆ. ಈ ರಸ್ತೆ ಇಲ್ಲವಾದರೆ ಬೆಂಗಳೂರು ಉಳಿಯಲು ಸಾಧ್ಯವಿಲ್ಲ ಎಂದರು.
ಭೂಮಿ ಕಳೆದುಕೊಳ್ಳುವ ಜಮೀನು ಮಾಲೀಕರಿಗೆ ಶೇ.35 ವಾಣಿಜ್ಯ ಭೂಮಿ ಅಥವಾ, ಶೇ.40ರಷ್ಟು ವಸತಿ ಪ್ರದೇಶ ಭೂಮಿ ಅಥವಾ ಟಿಡಿಆರ್ ನೀಡಲು ಸರ್ಕಾರ ಮುಂದಾಗಿದೆ. ಭೂ ಮಾಲೀಕರು ತಮಗೆ ಬೇಕಾಗಿರುವುದನ್ನು ಆಯ್ಕೆ ಮಾಡಿಕೊಳ್ಳಬಹುದು. ರಸ್ತೆಗಾಗಿ ಜಮೀನು ನೀಡಿದವರ ಸ್ಮರಣಾರ್ಥ ಉಪಕಾರ ಸ್ಮರಣೆ ಫಲಕ ನಿರ್ಮಿಸುತ್ತೇವೆ. ಆ ಮೂಲಕ ಈ ರಸ್ತೆಗಾಗಿ ಜಮೀನು ನೀಡಿದವರ ಹೆಸರನ್ನು ಶಾಶ್ವತವಾಗಿ ಉಳಿಸುವ ಕೆಲಸವನ್ನು ಸರ್ಕಾರ ಮುಂದಿನ ದಿನಗಳಲ್ಲಿ ಮಾಡಲಿದೆ ಎಂದು ತಿಳಿಸಿದರು.ಹೆಬ್ಬಾಳದ ಬಳಿ ಕಡಿಮೆ ಅಂತರದ ಕಿರು ಸುರಂಗ ರಸ್ತೆ ನಿರ್ಮಾಣ ಕಾಮಗಾರಿಗೆ ಭಾನುವಾರ ಚಾಲನೆ ನೀಡುತ್ತೇವೆ. ಬೆಂಗಳೂರು ಜಾಗತಿಕ ನಗರ. ಇಲ್ಲಿನ ಸಂಚಾರ ದಟ್ಟಣೆ ನಿವಾರಣೆಗೆ ದೊಡ್ಡ ಸುರಂಗ ರಸ್ತೆ ನಿರ್ಮಾಣ ಸೇರಿದಂತೆ 1.5 ಲಕ್ಷ ಕೋಟಿ ರು. ಮೌಲ್ಯದ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ. ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಕಮೀಷನರೇಟ್ ಸ್ಥಾಪಿಸಿ ಅಧಿಕಾರಗಳನ್ನು ನಿಯೋಜಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.ತುಮಕೂರಿನಲ್ಲೂ ಟೌನ್‌ಶಿಪ್: ಅಭಿವೃದ್ಧಿ ಕಾರ್ಯಗಳಿಗಾಗಿ ಭೂಮಿ ಕಳೆದುಕೊಂಡವರ ಬಗ್ಗೆ ನಮಗೆ ಕಾಳಜಿ ಇದೆ. ಕೆಂಗೇರಿ ಹಾಗೂ ಯಲಹಂಕ ಪಟ್ಟಣ ನಿರ್ಮಾಣ ಮಾಡಿದ್ದು ಹೇಗೆ? ಸಚಿವ ಪರಮೇಶ್ವರ್ ಅವರು ತುಮಕೂರಿನಲ್ಲಿ ಟೌನ್ ಶಿಪ್ ನಿರ್ಮಿಸಲು ಮುಂದಾಗಿದ್ದಾರೆ. ಅದು ಕೂಡ ಭೂಮಿಯಲ್ಲವೇ? ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು. ಬೆಂಗಳೂರು ವಿವಿಯಲ್ಲಿ ಕೆಂಪೇಗೌಡ ಅಧ್ಯಯನ ಕೇಂದ್ರ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಕೆ.ಎಚ್ ಮುನಿಯಪ್ಪ ಅವರ ಕ್ಷೇತ್ರದಲ್ಲಿ 9.5 ಎಕರೆ ಜಾಗ ನೀಡಿದ್ದು, ಅಲ್ಲಿ ಕೆಂಪೇಗೌಡ ಅಧ್ಯಯನ ಕೇಂದ್ರ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಹುತ್ರಿದುರ್ಗದಲ್ಲಿ 10 ಕೋಟಿ ರು. ಮೊತ್ತದ ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. ನಾಡಪ್ರಭು ಕೆಂಪೇಗೌಡರು ದೂರದೃಷ್ಟಿಯ ಮಹಾನ್ ಚೇತನ, ಕೆರೆಗಳನ್ನು ಕಟ್ಟಿದ ಭಗೀರಥ. ದೇವಾಲಯಗಳನ್ನು ನಿರ್ಮಿಸಿದ ದೈವ ಭಕ್ತ. ವಿವಿಧ ಪೇಟೆಗಳನ್ನು ನಿರ್ಮಿಸಿ ಎಲ್ಲಾ ಸಮುದಾಯದವರಿಗೆ ಆದ್ಯತೆ ನೀಡಿ ಆರ್ಥಿಕ ಶಕ್ತಿ ತುಂಬಿದ, ಕೆಚ್ಚೆದೆಯ ಹಾಗೂ ಸರ್ವ ಜನಾಂಗದ ನಾಯಕ ಎಂದು ಮುಖ್ಯಮಂತ್ರಿ ಬಣ್ಣಿಸಿದರು.
ವಿರೋಧ ಪಕ್ಷದವರು ಸರ್ಕಾರಕ್ಕೆ, ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾದ ಸಲಹೆ-ಸೂಚನೆಗಳನ್ನು ನೀಡಬೇಕು. ಬೆಂಗಳೂರಿನ ಬೆಳವಣಿಗೆ ಮತ್ತು ಕರ್ನಾಟಕದ ಅಭಿವೃದ್ಧಿಗೆ ಸಹಕಾರ ನೀಡುವ ಮನೋಭಾವವನ್ನು ಜನರು ನಿರೀಕ್ಷಿಸುತ್ತಿದ್ದಾರೆ. ವಿನಾಕಾರಣ ಅಭಿವೃದ್ಧಿ ಕಾರ್ಯಗಳಿಗೆ ವಿರೋಧಿಸುವ ಚಿಂತನೆಗಳನ್ನು ರಾಜ್ಯದ ಜನ ಒಪ್ಪುವುದಿಲ್ಲ ಎಂದು ಪರಮೇಶ್ವರ್ ನುಡಿದರು.
ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಮಾತನಾಡಿ, ಬಿಡಿಎನಲ್ಲಿ ಅನೇಕ ಬದಲಾವಣೆಗಳನ್ನು ತಂದಿದ್ದೇವೆ. ಜಮೀನು ನೀಡಿದ ರೈತರಿಗೆ ಹೆಚ್ಚಿನ ಸೌಲಭ್ಯ ನೀಡುತ್ತಿದ್ದೇವೆ. ಕೆಂಪೇಗೌಡ ಲೇಔಟ್‌ನ ಶೇ.95ರಷ್ಟು ಕೆಲಸ ಮುಗಿಸಿದ್ದೇವೆ. ಹಸಿರು ಬೆಂಗಳೂರು ನಿರ್ಮಾಣಕ್ಕಾಗಿ 60 ಸಾವಿರಕ್ಕೂ ಹೆಚ್ಚು ಜನ ಸೇರಿ 15 ಲಕ್ಷ ಗಿಡ ನೆಡುವ ಮಹತ್ವದ ಕೆಲಸ ಮಾಡುತ್ತಿದ್ದೇವೆ. ಎಸ್.ಎಂ. ಕೃಷ್ಣ ಹೆಸರಿನಲ್ಲಿ ನಿರ್ಮಿಸಿರುವ ಈ ರಸ್ತೆಯಿಂದ ಈ ಭಾಗದಲ್ಲಿ ಮತ್ತಷ್ಟು ಅಭಿವೃದ್ಧಿ ಆಗಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಜೆ. ಜಾರ್ಜ್, ಕೆ.ಎಚ್. ಮುನಿಯಪ್ಪ, ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ಶಾಸಕ ಎಸ್.ಟಿ. ಸೋಮಶೇಖರ್, ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ, ನಿಶ್ಚಲಾನಂದನಾಥ ಸ್ವಾಮೀಜಿ ಹಾಜರಿದ್ದರು.