ಕೊಟ್ಟೂರು: ವಿರೋಧ ಪಕ್ಷ, ಇತರರು ಎಷ್ಟೇ ಅಪಪ್ರಚಾರ ಮಾಡಿದರೂ ರಾಜ್ಯದ ಜನತೆ ಸಿಎಂ ಸಿದ್ದರಾಮಯ್ಯ ಅವರ ಜತೆ ಇರುತ್ತಾರೆ ಎಂದು ಕೂಡ್ಲಿಗಿ ಶಾಸಕ ಡಾ.ಎನ್.ಟಿ. ಶ್ರೀನಿವಾಸ ಹೇಳಿದರು.ಇಲ್ಲಿನ ಎಪಿಎಂಸಿ ಸಭಾ ಭವನದಲ್ಲಿ ಸರ್ಕಾರದಿಂದ ಎಪಿಎಂಸಿ ಆಡಳಿತಕ್ಕೆ ನಾಮ ನಿದೇರ್ಶನಗೊಂಡ ಅಧ್ಯಕ್ಷ ಉಪಾಧ್ಯಕ್ಷ ಮತ್ತು ಸದಸ್ಯರಗಳು ಮಂಗಳವಾರ ಸಂಜೆ ಆಯೋಜಿಸಿದ್ದ ಅಭಿನಂದನ ಸಮಾರಂಭದಲ್ಲಿ ಸನ್ಮಾನಿತಗೊಂಡು ಮಾತನಾಡಿದರು.
ಜನತೆಗೆ ಒಳಿತಾಗುವ ಕಾರ್ಯಗಳನ್ನು ಸರ್ಕಾರ ಕೈಗೊಳ್ಳುತ್ತಾ ಬರುತ್ತಿದೆ. ಇದರ ಮುಂದುವರಿದ ಭಾಗವಾಗಿ ರೈತರ ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗುವಂತಾಗಬೇಕು. ಯಾವುದೇ ಹಂತದಲ್ಲಿ ರೈತರಿಗೆ ತೊಂದರೆಯಾಗದಂತೆ ಎಲ್ಲ ಬಗೆಯ ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದೆ ಎಂದರು.
ಕೊಟ್ಟೂರು ಎಪಿಎಂಸಿ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಉತ್ತಮ ವಹಿವಾಟು ನಡೆಸುತ್ತಅ ಬಂದಿದೆ. ಜೊತೆಗೆ ರೈತರಿಗೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳುತ್ತಿದೆ. ಇಲ್ಲಿನ ಆಡಳಿತವನ್ನು ಜನತೆ ಮೆಚ್ಚಲು ಕಾರಣವಾಗಿದೆ ಎಂದರು.ಕೆಎಂಎಫ್ ಅಧ್ಯಕ್ಷ ಎಸ್.ಭೀಮಾ ನಾಯ್ಕ್ ಸನ್ಮಾನ ಸ್ವೀಕರಿಸಿ ಮಾತನಾಡಿ, ತಾವು ಶಾಸಕರಾಗಿದ್ದ ಅವಧಿಯಲ್ಲಿ ಕೊಟ್ಟೂರು ಎಪಿಎಂಸಿಗೆ ₹4 ಕೋಟಿ ಅನುದಾನ ನೀಡಿದ್ದೆ. ಈ ಅನುದಾನ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆ ಸಮಿತಿಗೆ ನೆರವಾಗಿದೆ. ಕೊಟ್ಟೂರು ಹೊರವಲಯದಲ್ಲಿ ಮತ್ತಷ್ಟು ದೊಡ್ಡ ಪ್ರಮಾಣದ ಹೊಸ ಎಪಿಎಂಸಿ ನಿರ್ಮಾಣ ಮಾಡಲು ಸರ್ಕಾರದ ಮೇಲೆ ಶಾಸಕ ಡಾ.ಎನ್.ಟಿ ಶ್ರೀನಿವಾಸ ಜೊತೆ ಸೇರಿ ಒತ್ತಡ ಹಾಕುವೆ ಎಂದರು.
ಉಪಾಧ್ಯಕ್ಷ ಎಂ.ಶಿವಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಕೊಟ್ಟೂರು ಎಪಿಎಂಸಿಗೆ ಅರ್ಧ ಶತಮಾನದ ಉತ್ತಮ ಇತಿಹಾಸ ಇದೆ. ಎಲ್ಲ ಬಗೆಯ ವ್ಯಾಪಾರ-ವಹಿವಾಟು ಪಾರದರ್ಶಿಕವಾಗಿ ನಡೆದು ರೈತರಿಗೆ ಮತ್ತಷ್ಟು ಬಗೆಯ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಸರ್ಕಾರದ ನೆರವು ಕೋರುವೆ ಎಂದರು.