ಸಮಾನತೆ ನೆಪದಲ್ಲಿ ಸಿಎಂ ಮತಾಂತರಕ್ಕೆ ಪ್ರಚೋದನೆ: ಮುತಾಲಿಕ್ ಆರೋಪ

KannadaprabhaNewsNetwork |  
Published : Sep 15, 2025, 01:00 AM IST
14ಕೆಡಿವಿಜಿ3, 4-ದಾವಣಗೆರೆಯಲ್ಲಿ ಭಾನುವಾರ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಹಿಂದೂ ಧರ್ಮದಲ್ಲಿ ಸಮಾನತೆ ಇಲ್ಲವೆಂಬ ಕಾರಣವೊಡ್ಡಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ದಾವಣಗೆರೆಯಲ್ಲಿ ಆರೋಪಿಸಿದ್ದಾರೆ.

- ಮತಾಂತರವಾದರೆ ಸಮಾನತೆ ಸಿಗುತ್ತದಾ?

- ಗೋಮಾಂಸ ಭಕ್ಷಕ ಸಮಾಜದ ಬಾನು ದಸರಾ ಉದ್ಘಾಟನೆಗೆ ಲಾಯಕ್ಕಲ್ಲ - ಶಿವಾಜಿ ಮಹಾರಾಜರ ಶೌರ್ಯ ಪ್ರದರ್ಶಿಸುವ ಫ್ಲೆಕ್ಸ್ ತೆರವು ಅಗತ್ಯವೇನಿತ್ತು?

- ಗಣೇಶ ಮೆರವಣಿಗೆ ಮೇಲೆ ಕಲ್ಲು ಎಸೆಯೋದಕ್ಕೆ ಮಸೀದಿ, ಮದರಸಾಗಳೇ ಕಾರಣ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಹಿಂದೂ ಧರ್ಮದಲ್ಲಿ ಸಮಾನತೆ ಇಲ್ಲವೆಂಬ ಕಾರಣವೊಡ್ಡಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಆರೋಪಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಪಾದಿಸಿದಂತಹ ಸಮಾನತೆ ಇದುವರೆಗೂ ಬಂದಿಲ್ಲ ಎಂಬುದನ್ನು ಒಪ್ಪುತ್ತೇನೆ. ಹಾಗೆಂದ ಮಾತ್ರಕ್ಕೆ ಮತಾಂತರವಾದರೆ ಸಮಾನತೆ ಸಿಗುತ್ತದಾ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕಿಡಿಕಾರಿದರು.

ಹಿಂದೂ ಧರ್ಮದಿಂದ ಮತಾಂತರ ಆದವರು ಯಾಕೆ ಲಿಂಗಾಯತ ಕ್ರಿಶ್ಟಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಗೌಡ ಕ್ರಿಶ್ಟಿಯನ್‌ ಅಂತೆಲ್ಲಾ ಬರೆಸುವ ಬದಲಿದೆ, ಮತಾಂತರಗೊಂಡ ಧರ್ಮವನ್ನೇ ಬರೆಸಿ. ಮತ್ತೆ ಯಾಕೆ ಜಾತಿ ಉಲ್ಲೇಖಿಸುತ್ತೀರಿ? ಕ್ರಿಶ್ಚಿಯನ್ ಮತಕ್ಕೆ, ಧರ್ಮಕ್ಕೆ ಮತಾಂತರವಾದರೆ ಆ ಧರ್ಮಿಯರು ಪೂರ್ತಿಯಾಗಿ ಒಪ್ಪಿಕೊಳ್ಳುವುದಿಲ್ಲ. ವಿವಾಹ ಸಂಬಂಧಗಳನ್ನೂ ಮಾಡುವುದಿಲ್ಲ. ಪ್ರತ್ಯೇಕವಾಗಿಯೇ ಕಾಣುತ್ತಾರೆ. ಅಲ್ಲೂ ಸಮಾನತೆ ಸಿಗುವುದಿಲ್ಲ ಎಂದು ಹೇಳಿದರು.

ಚಾಮುಂಡೇಶ್ವರಿ ಶಾಪ ಕೊಟ್ಟೇ ಕೊಡ್ತಾಳೆ:

ಕೂಲಿ ಕೆಲಸ ಮಾಡುವ ಹಿಂದೂ ಮಹಿಳೆಯನ್ನು ಕರೆಸಿ, ಮೈಸೂರು ದಸರಾ ಉದ್ಘಾಟಿಸಿ, ತಾಯಿ ಶ್ರೀ ಚಾಮುಂಡೇಶ್ವರಿ ಪೂಜೆ ಮಾಡಿಸಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಗೌರವಿಸುತ್ತಿದ್ದೆವು. ಆದರೆ, ಗೋಮಾಂಸ ಭಕ್ಷದ ಸಮಾಜದಿಂದ ಬಂದವರನ್ನು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ. ನಿಮಗೆ ತಾಯಿ ಚಾಮುಂಡೇಶ್ವರಿ ಶಾಪ ಕೊಟ್ಟೇ ಕೊಡುತ್ತಾಳೆ ಎಂದು ಮುತಾಲಿಕ್‌ ಎಚ್ಚರಿಸಿದರು.

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ ಲಾಯಕ್ಕಲ್ಲ:

ಲೇಖಕಿ ಬಾನು ಮುಷ್ತಾಕ್‌ ಸಾಹಿತ್ಯದಲ್ಲಿ ಪಡೆವಿ ಪಡೆದಿದ್ದು, ಆ ಸಾಧನೆಗೆ ನಾವು ಅಭಿನಂದಿಸುತ್ತೇವೆ. ಗೋಮಾಂಸ ಭಕ್ಷಕ ಸಮಾಜದಿಂದ ಬಂದ ನೀವು ದಸರಾ ಉದ್ಘಾಟನೆಗೆ ಲಾಯಕ್ಕಲ್ಲ ಅಂತಲೂ ಹೇಳುತ್ತೇವೆ. ದಸರಾ ಆಚರಣೆ ಸರ್ಕಾರಿ ಕಾರ್ಯಕ್ರಮ ಅಲ್ಲವೇ ಅಲ್ಲ. ನೀವು ಅರಿಷಿಣ-ಕುಂಕುಮ ಧರಿಸಲ್ಲ. ಸರ್ಕಾರಕ್ಕೆ ಬೇರೆ ಹಿಂದೂ ಮಹಿಳೆಯರೇ ಸಿಗಲಿಲ್ಲವಾ? ರಾಜ್ಯ ಸರ್ಕಾರ ಮಾಡುತ್ತಿರುವುದು ತಪ್ಪು. ತಕ್ಷಣ‍ವೇ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಪ್ರಮೋದ ಮುತಾಲಿಕ್ ತಾಕೀತು ಮಾಡಿದರು.

ಶ್ರೀರಾಮ ಸೇನೆಯ ಶ್ರೀ ಸತ್ಯಪ್ರಮೋದೇಂದ್ರ ಸರಸ್ವತಿ ಸ್ವಾಮೀಜಿ, ಚಿತ್ರದುರ್ಗದ ಬಾಬಣ್ಣ, ಸುಂದರೇಶ ನೆರೇಗಲ್, ರವಿ ಕೋಟಿಕರ್, ಪರಶುರಾಮ ನಡುಮನಿ, ಮಣಿಕಂಠ ಸರ್ಕಾರ, ರಾಕೇಶ ಇತರರು ಇದ್ದರು.

- - -

(ಬಾಕ್ಸ್‌-1)

* ನಮ್ಮ ಹಬ್ಬದ ವೇಳೆ ಗಲಭೆ ಸೃಷ್ಟಿಸಿದ್ರೆ ಮನೆಗೆ ಹೊಕ್ಕು ಹೊಡಿತೀವಿ!

- ಹಿಂದೂ ದೇವರು, ಸಮಾಜದ ಮೇಲೆ ಪುಂಡಾಟಿಕೆ ಸಹಿಸಲ್ಲ: ಮುತಾಲಿಕ್ ಗುಟುರು ಕನ್ನಡಪ್ರಭ ವಾರ್ತೆ ದಾವಣಗೆರೆ ಹಿಂದೂಗಳ ಹಬ್ಬ, ಆಚರಣೆಗಳ ವೇಳೆ ಗಲಭೆಗಳನ್ನು ಸೃಷ್ಟಿಸಲು ಮುಸ್ಲಿಂ ಗೂಂಡಾಗಳು ಇನ್ನು ಮುಂದೆ ಪ್ರಯತ್ನಿಸಿದರೆ ಧರಣಿ, ಪ್ರತಿಭಟನೆಯಲ್ಲ, ನೀವಿರುವಲ್ಲೇ ಹೊಕ್ಕು ಹೊಡೆಯುತ್ತೇವೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಅಬ್ಬರಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದ್ದೂರಿನಲ್ಲಿ ಮುಸ್ಲಿಂ ಕಿಡಿಗೇಡಿಗಳು ಗಣೇಶೋತ್ಸವ ಮೆರವಣಿಗೆ ಮೇಲೆ ಕಲ್ಲೆಸೆದು, ಅವಮಾನ ಮಾಡಿದ್ದರಿಂದಲೇ ಅಲ್ಲಿ ಗಲಭೆಯಾಯಿತು. ಇದೇನೂ ಮೊದಲೂ ಅಲ್ಲ, ಕೊನೆಯೂ ಅಲ್ಲ. ನಮ್ಮ ಪ್ರಥಮ ಪೂಜಕನ ಮೇಲೆ ಕಲ್ಲೆಸೆಯಲು ಎಷ್ಟು ಧೈರ್ಯ ಎಂದು ಕಿಡಿಕಾರಿದರು.

ಕಾಂಗ್ರೆಸ್ ಪಕ್ಷದ ಓಟ್‌ ಬ್ಯಾಂಕ್ ರಾಜಕಾರಣದಿಂದಲೇ ಹಿಂದೂಗಳ ಹಬ್ಬಗಳಲ್ಲಿ ಗಲಭೆಗಳು ಸೃಷ್ಟಿಯಾಗುತ್ತಿವೆ. ಇದಕ್ಕೆ ಮದ್ದೂರು ಹಾಗೂ ಸಾಗರದ ಪ್ರಕರಣಗಳು ತಾಜಾ ನಿದರ್ಶನ. ಸಾಗರದಲ್ಲಿ ಮುಸ್ಲಿಂ ಬಾಲಕರು ಶ್ರೀ ಗಣೇಶನ ವಿಗ್ರಹ ಮೇಲೆ ಉಗುಳುತ್ತಾರೆ. ಈದ್ ಮಿಲಾದ್, ಬಕ್ರೀದ್ ವೇಳೆ ಯಾವುದೇ ಗಲಾಟೆ ಆಗಲಿಲ್ಲ. ಆದರೆ, ನಮ್ಮ ಹಬ್ಬಗಳ ಮೇಲೆಯೇ ಇಂತಹದ್ದೆಲ್ಲಾ ಆಗುತ್ತವೆ ಎಂದು ದೂರಿದರು.

ಗಣೇಶ ಮೆರವಣಿಗೆ ಮೇಲೆ ಕಲ್ಲು ಎಸೆಯುವುದಕ್ಕೆ ಮಸೀದಿ, ಮದರಸಾಗಳೇ ಕಾರಣ. ಕಾಂಗ್ರೆಸ್ ಸರ್ಕಾರ ಕೇವಲ ಮುಸ್ಲಿಂ ಮತಗಳಿಂದಷ್ಟೇ ಗೆದ್ದಿಲ್ಲ. ನಿಮ್ಮ ಪಕ್ಷದಲ್ಲೂ ಹಿಂದೂಗಳಿದ್ದಾರೆ. ಅಂತಹವರೂ ಪೂಜೆ ಮಾಡುತ್ತಾರೆ. ನೀವು ಹೀಗೆ ತುಷ್ಟೀಕರಣ ಮಾಡುತ್ತಿದ್ದರೆ ನಿಮ್ಮ ಮೇಲೂ ದಬ್ಬಾಳಿಕೆಯಾಗುತ್ತದೆ ಎಂದು ಕಾಂಗ್ರೆಸ್ಸಿನ ನಾಯಕರಿಗೂ ಮುತಾಲಿಕ್‌ ಎಚ್ಚರಿಕೆ ನೀಡಿದರು.

ಮದ್ದೂರಿನಲ್ಲಿ 500 ಹಿಂದೂಗಳ ಮೇಲೆ ಪೊಲೀಸರು ಕೇಸ್ ಮಾಡಿದ್ದಾರೆ. ಕಲ್ಲೆಸೆದವರು ಮತ್ತು ಅದರ ವಿರುದ್ಧ ಪ್ರತಿಭಟನೆ ಮಾಡಿದವರು ಕಾಂಗ್ರೆಸ್ ಸರ್ಕಾರಕ್ಕೆ ಒಂದೇನಾ? ಶ್ರೀರಾಮ ಸೇನೆಯು ಮದ್ದೂರಿನ ಕೇಸ್‌ಗಳನ್ನು ನಿಭಾಯಿಸುತ್ತದೆ. ಅಲ್ಲಿನ ಯಾವೊಬ್ಬ ಹಿಂದೂಗಳು ಹೆದರಬೇಕಾಗಿಲ್ಲ. ಶ್ರೀರಾಮ ಸೇನೆಯ ವಕೀಲರ ತಂಡವು ಮದ್ದೂರಿಗೆ ಭೇಟಿ ನೀಡಿ, ನಿಮ್ಮ ಪರ ಕಾನೂನು ಹೋರಾಟ ಮಾಡುತ್ತದೆ ಎಂದು ಪ್ರಮೋದ್ ಮುತಾಲಿಕ್ ಭರವಸೆ ನೀಡಿದರು.

- - -

(ಬಾಕ್ಸ್‌-2)

* ಶಿವಾಜಿ ಫ್ಲೆಕ್ಸ್ ತೆರವಿಗೆ ತೀವ್ರ ಅಸಮಾಧಾನ ದಾವಣಗೆರೆ: ಅಫ್ಜಲ್ ಖಾನ್‌ನನ್ನು ಛತ್ರಪತಿ ಶಿವಾಜಿ ಮಹಾರಾಜರು ವಧೆ ಮಾಡುವ ಐತಿಹಾಸಿಕ ಚಿತ್ರದ ಫ್ಲೆಕ್ಸನ್ನು ದಾವಣಗೆರೆಯ ಮಟ್ಟಿಕಲ್ಲು ಪ್ರದೇಶದಲ್ಲಿ ಅಳ‍ವಡಿಸಿದ್ದನ್ನು ತೆರವುಗೊಳಿಸಿದ್ದು ಖಂಡನೀಯ. ಇನ್ನು ಮುಂದೆ ಎಲ್ಲ ಹಬ್ಬಗಳಲ್ಲೂ ಅದೇ ಶಿವಾಜಿ ಮಹಾರಾಜರ ಫ್ಲೆಕ್ಸ್ ಹಾಕಿಸುತ್ತೇವೆ. ಅದು ಹೇಗೆ ತೆಗೆಯುತ್ತೀರಿ ನಾವೂ ನೋಡುತ್ತೇವೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಸವಾಲು ಹಾಕಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಛತ್ರಪತಿ ಶಿವಾಜಿ ಮಹಾರಾಜರು ಅಫ್ಜಲ್ ಖಾನ್‌ನನ್ನು ವಧೆ ಮಾಡುವ ಚಿತ್ರ ಕಾಲ್ಪನಿಕ ಅಲ್ಲ, ಅದು ಇತಿಹಾಸ. ಇಂತಹ ಐತಿಹಾಸಿಕ, ಶಿವಾಜಿ ಮಹಾರಾಜರ ಶೌರ್ಯ ಪ್ರದರ್ಶಿಸುವ ಫ್ಲೆಕ್ಸ್ ತೆರವುಗೊಳಿಸುವ ಅಗತ್ಯವೇನಿತ್ತು? ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್‌. ಮಲ್ಲಿಕಾರ್ಜುನ ಇಂದು ಸಚಿವರಾಗಿದ್ದರೆ ಅದು ಛತ್ರಪತಿ ಶಿವಾಜಿ ಮಹಾರಾಜರಿಂದ ಎಂಬುದನ್ನು ನೆನಪಿಟ್ಟುಕೊಳ್ಳಲಿ ಎಂದರು.

ಬೇಕಿದ್ದರೆ ಸಚಿವ ಮಲ್ಲಿಕಾರ್ಜುನ ಅವರಿಗೆ ಪುಸ್ತಕಗಳನ್ನು ಕೊಡುತ್ತೇನೆ, ಓದಲಿ. ಅಫ್ಜಲ್ ಖಾನ್ ಶ್ರೀ ಅಂಬಾ ಭವಾನಿ ದೇವಸ್ಥಾನ ಧ್ವಂಸ ಮಾಡಿದ. ಬಾಬರ್ ಕಾಶಿ ಶ್ರೀ ವಿಶ್ವನಾಥನ ದೇವಸ್ಥಾನ ಹಾಳುಗೆಡವಿದ. ಔರಂಗಜೇಬ ಸಾವಿರಾರು ಹಿಂದೂ ದೇವಸ್ಥಾನಗಳನ್ನು ನಾಶಪಡಿಸಿದ್ದ. ಇಂತಹವರ ಫ್ಲೆಕ್ಸ್‌ಗಳನ್ನು ಮುಸ್ಲಿಮರು ಹಾಕಿಕೊಂಡರೆ ಆಕ್ಷೇಪಾರ್ಹವಲ್ಲ. ಆದರೆ, ಶಿವಾಜಿ ಮಹಾರಾಜರು ಅಫ್ಜಲ್ ಖಾನ್‌ನನ್ನು ಕೊಂದಿದ್ದ ಫ್ಲೆಕ್ಸ್ ಹಾಕಿಸಿದರೆ ಮಾತ್ರ ಆಕ್ಷೇಪಾರ್ಹ ಹೇಗಾಗುತ್ತದೆ ಎಂದು ತರಾಟೆಗೆ ತೆಗೆದುಕೊಂಡರು.

- - -

(ಟಾಪ್ ಕೋಟ್‌) ದುಬೈನಲ್ಲಿ ಭಾರತ- ಪಾಕಿಸ್ತಾನ ಮಧ್ಯೆ ಏಷ್ಯಾಕಪ್‌ ಟಿ20 ಕ್ರಿಕೆಟ್ ಪಂದ್ಯ ನಡೆಯುತ್ತಿರುವುದು ಸರಿಯಲ್ಲ. ಪಹಲ್ಗಾಂನಲ್ಲಿ ಮೃತಪಟ್ಟ 26 ಜನರ ಕಣ್ಣೀರು ಇನ್ನೂ ಆರಿಲ್ಲ. ಇಂತಹವರು ದೇಶಾಭಿಮಾನ, ಸ್ವಾಭಿಮಾನವನ್ನೇ ಮರೆತು, ಕ್ರಿಕೆಟ್ ಆಡುತ್ತಿದ್ದಾರೆ. ಕೇವಲ ಹಣಕ್ಕೋಸ್ಕರ ಕ್ರಿಕೆಟ್ ಆಡುತ್ತಿದ್ದಾರೆ.

- ಪ್ರಮೋದ ಮುತಾಲಿಕ್‌, ರಾಷ್ಟ್ರೀಯ ಅಧ್ಯಕ್ಷ, ಶ್ರೀರಾಮ ಸೇನೆ.

- - -

-14ಕೆಡಿವಿಜಿ3, 4:

ದಾವಣಗೆರೆಯಲ್ಲಿ ಭಾನುವಾರ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ