ಸಿಎಂ ತೇಜೋವಧೆ ಆರೋಪ: ಬಿಜೆಪಿ, ಜೆಡಿಎಸ್‌ ವಿರುದ್ಧ ಪ್ರತಿಭಟನೆ

KannadaprabhaNewsNetwork |  
Published : Aug 09, 2024, 12:53 AM IST
ಪ್ರತಿಭಟನಾ ಮೆರವಣಿಗೆ | Kannada Prabha

ಸಾರಾಂಶ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮತ್ತು ಮೂಡ ಅಕ್ರಮ ಹೆಸರಿನಲ್ಲಿ ಶೋಷಿತ ವರ್ಗಗಳ ಧ್ವನಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ನಡೆಸುತ್ತಿರುವ ಅಪಪ್ರಚಾರ ಹಾಗೂ ಪಿತೂರಿ ಖಂಡಿಸಿ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮತ್ತು ಮೂಡ ಅಕ್ರಮ ಹೆಸರಿನಲ್ಲಿ ಶೋಷಿತ ವರ್ಗಗಳ ಧ್ವನಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ನಡೆಸುತ್ತಿರುವ ಅಪಪ್ರಚಾರ ಹಾಗೂ ಪಿತೂರಿ ಖಂಡಿಸಿ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.

ಕೊಡಗು ಅಹಿಂದ ಒಕ್ಕೂಟ ಮಡಿಕೇರಿ ಹಾಗೂ ಕೊಡಗು ಜಿಲ್ಲಾ ಕುರುಬ ಸಂಘ ಹಾಗೂ ವಿವಿಧ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳ ನೂರಾರು ಕಾರ್ಯಕರ್ತರು ಇಲ್ಲಿನ ಪ್ರವಾಸಿ ಮಂದಿರ ಬಳಿಯಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ವರೆಗೆ ಮೆರವಣಿಗೆ ನಡೆಸಿದರು. ಕುಶಾಲನಗರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ರಚಿಸಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಧಿಕ್ಕಾರ ಕೂಗಿದರು.

ಶಾಸಕ ಡಾ.ಮಂತರ್ ಗೌಡ ಮಾತನಾಡಿ, ರಾಜ್ಯದ ಬಡವರು ಹಾಗೂ ಅವಕಾಶ ವಂಚಿತ ಜನರಿಗೆ ಗ್ಯಾರಂಟಿ ಯೋಜನೆಗಳ ಮೂಲಕ ಅವರ ಬದುಕಿಗೆ ನೆರವಾಗಿರುವ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಜನಪ್ರಿಯತೆ ಸಹಿಸದೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮುಡಾ ಮತ್ತಿತರ ವಿಚಾರ ಮುಂದಿಟ್ಟುಕೊಂಡು ಪಾದಯಾತ್ರೆ ಮೂಲಕ ಜನರಲ್ಲಿ ಗೊಂದಲ ಮೂಡಿಸುತ್ತಿರುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದರು.

ವಿಪಕ್ಷಗಳು ಸುಳ್ಳು ಆರೋಪಗಳನ್ನು ಮಾಡುತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಪ್ಪು ಚುಕ್ಕೆ ತರಲು ಹುನ್ನಾರ ನಡೆಸುತ್ತಿದ್ದಾರೆ. ಆದರೆ ಕಾನೂನು ನಮ್ಮ ಪರವಾಗಿದೆ ಕಾನೂನಾತ್ಮಕ ಹೋರಾಟ ನಡೆಸುವ ಮೂಲಕ ಸಿದ್ದರಾಮಯ್ಯ ಅವರಿಗೆ ಮತ್ತಷ್ಟು ಶಕ್ತಿ ತುಂಬುತ್ತೇವೆ ಎಂದು ಮಂತರ್ ಗೌಡ ಹೇಳಿದರು.

ಅಹಿಂದ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಬಿ.ಶಾಂತಪ್ಪ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಶಕ್ತಿಯಾಗಿ ಬೆಳೆದಿದ್ದಾರೆ. ಈ ಶಕ್ತಿಯನ್ನು ದಮನ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಶೋಷಿತ ವರ್ಗಗಳ ಧ್ಚನಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಧಕ್ಕೆ ತರಲು ಅವರ ಧ್ವನಿ ಉಡುಗಿಸಲು ವಿರೋಧ ಪಕ್ಷಗಳು ಪಿತೂರಿ ನಡೆಸುತ್ತಿವೆ ಎಂದು ದೂರಿದರು.

ಮುಖ್ಯಮಂತ್ರಿ ವಿರುದ್ಧ ರಾಜ್ಯದಲ್ಲಿ ಕುತಂತ್ರ ನಡೆಯುತ್ತಿದ್ದು,ಇದರ ವಿರುದ್ಧ ಬೀದಿಗೆ ಇಳಿದು ಹೋರಾಟ ನಡೆಸುವುದು ಅನಿವಾರ್ಯವಾಗಿ ಎಂದು ಹೇಳಿದರು.

ಅಹಿಂದ ಒಕ್ಕೂಟದ ಜಿಲ್ಲಾ ಸ್ಥಾಪಕಾಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಸಮಾಜದ ಕಟ್ಟ ಕಡೆಯ ಜನರಿಗೆ ಸಾಮಾಜಿಕ ನ್ಯಾಯ ದಕ್ಕಬೇಕು ಎಂಬುದು ಸಿದ್ದರಾಮಯ್ಯ ನಿಲುವು. ಆದರೆ ವಿರೋಧ ಪಕ್ಷಗಳು ಸುಳ್ಳು ಆರೋಪಗಳನ್ನು ‌ಮಾಡುವ ಮೂಲಕ ಪಾದಯಾತ್ರೆ ಹೆಸರಿನಲ್ಲಿ ರಾಜಕೀಯ ನಾಟಕವಾಡುತ್ತಿದ್ದಾರೆ. ಇದರ ಕುರಿತು ಜನರಿಗೆ ಸತ್ಯ ತಿಳಿಸಲು ಪಕ್ಷದ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿ ತಪ್ಪು ಸಂದೇಶ ಹರಡುತ್ತಿರುವ ವಿರೋಧ ಪಕ್ಷಗಳ ವರ್ತನೆಗೆ ಸಮಾಜದಲ್ಲಿ ವ್ಯಾಪಕ ವಿರೋಧ ವ್ಯಕ್ಯವಾಗುತ್ತಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ರಾಜ್ಯಪಾಲರನ್ನು ಕೇಂದ್ರ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ, ಕೆಪಿಸಿಸಿ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ.ಚಂಗಪ್ಪ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಯಾಕೂಬ್, ಜಿಲ್ಲಾ ಕ್ರೈಸ್ತ ಸಂಘದ ಅಧ್ಯಕ್ಷ ಬೇಬಿ ಮ್ಯಾಥ್ಯು, ಕೆಪಿಸಿಸಿ ಕಾರ್ಯದರ್ಶಿ ಎಚ್.ಕೆ.ನಟೇಶ್ ಗೌಡ , ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಮುಖಂಡರಾದ ಟಿ.ಪಿ.ಹಮೀದ್, ಸುನೀತಾ, ಪೃಥ್ವಿ, ಶೈಲಾ ಕುಟ್ಟಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!