ಗದಗ:ಸಿದ್ದರಾಮಯ್ಯ ಅವರಿಗೆ ಅಧಿಕಾರ ಬಿಟ್ಟುಕೊಡುವ ಮನಸ್ಸಿಲ್ಲ, ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಸಮಾಜಗಳ ಮಧ್ಯೆ ಕಂದಕ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಜಾತ್ಯತೀತ ಹೆಸರಿನಲ್ಲಿ ಜಾತಿ-ಜಾತಿಗಳ ಮಧ್ಯೆ ಸಂಘರ್ಷ ಸೃಷ್ಟಿಸಿ, ಬ್ರಿಟಿಷರ ಕಾಲದ ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಮಂಗಳವಾರ ಬಿಜೆಪಿ ಹಮ್ಮಿಕೊಂಡಿದ್ದ ಜನಾಕ್ರೋಶ ಯಾತ್ರೆ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎನ್ನುವ ವಾತಾವರಣವಿದ್ದಾಗ ಕಳೆದ ಬಾರಿ ವೀರಶೈವ-ಲಿಂಗಾಯತ ಧರ್ಮ ಒಡೆದರು. ಈಗ ಸಿಎಂ ಹುದ್ದೆ ಬಿಟ್ಟುಕೊಡಬೇಕಾದ ಅನಿವಾರ್ಯತೆ ಬಂದಿದ್ದರಿಂದ ಜಾತಿ ಜನಗಣತಿಯನ್ನು ತಂದು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಬೆಲೆ ಏರಿಕೆ 6ನೇ ಗ್ಯಾರಂಟಿ: ಕಾಂಗ್ರೆಸ್ ಸರ್ಕಾರ 20 ತಿಂಗಳ ಅವಧಿಯಲ್ಲಿ ಒಟ್ಟಾರೆ 9 ರು. ಹಾಲಿನ ಬೆಲೆ ಹೆಚ್ಚಳ ಮಾಡಿದೆ. ಹೀಗಾದರೆ ಬಡವರು, ರೈತರ ಪರಿಸ್ಥಿತಿ ಏನಾಗಬೇಕು. ಬೆಲೆ ಏರಿಕೆ ಎನ್ನುವುದು ಕಾಂಗ್ರೆಸ್ ಸರಕಾರದ 6ನೇ ಗ್ಯಾರಂಟಿ ಯೋಜನೆಯಾಗಿದೆ ಎಂದು ಟೀಕಿಸಿದರು.
ಪ.ಜಾತಿ, ಪ.ಪಂಗಡದ 38.5 ಸಾವಿರ ಕೋಟಿ ರು. ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡು, ಕೇವಲ ಮುಸ್ಲಿಂ ಸಮಾಜದ ಓಲೈಕೆಯಲ್ಲಿ ನಿರತವಾಗಿದೆ ಎಂದು ಟೀಕಿಸಿದರು.ನೀರಿಗೆ ಹಾಹಾಕಾರ: ಎಚ್.ಕೆ. ಪಾಟೀಲರೆ, ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅಧಿಕಾರದಲ್ಲಿದ್ದಾಗ ಗದಗ ಜಿಲ್ಲೆಗೆ 4-5 ಸಾವಿರ ಕೋಟಿ ಅನುದಾನ ಬಿಡುಗಡೆಯಾಗಿದೆ. ಸಿದ್ದರಾಮಯ್ಯ ಬಂದ ನಂತರ ಎಷ್ಟು ನೂರು ಕೋಟಿ ರು. ಅನುದಾನ ಕೊಟ್ಟಿದ್ದಾರೆ? ಇವರ ಯೋಗ್ಯತೆಗೆ ಕುಡಿಯುವ ನೀರಿನ ಹಾಹಾಕಾರ ಸರಿ ಮಾಡಲು ಸಾಧ್ಯವಾಗಿಲ್ಲ. ಇನ್ನು ಅಭಿವೃದ್ಧಿ ನಿರೀಕ್ಷೆ ಮಾಡಲು ಹೇಗೆ ಸಾಧ್ಯ ಎಂದ ಅವರು, ಗದಗ ಜನ ಕಾಂಗ್ರೆಸ್ಸಿಗೆ ಮತ ಹಾಕಿಲ್ಲ ಎಂದು ಎಚ್.ಕೆ. ಪಾಟೀಲರು ನೀರು ಕೊಟ್ಟಿಲ್ಲ ಎಂದು ವ್ಯಂಗ್ಯವಾಡಿದರು.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಮಾತನಾಡಿ, ಸ್ವಾತಂತ್ರ್ಯ ನಂತರ ಸುದೀರ್ಘ ಅವಧಿಗೆ ಅಧಿಕಾರ ನಡೆಸಿದ ಕಾಂಗ್ರೆಸ್, ಈವರೆಗೆ ದಲಿತರನ್ನು ಮುಖ್ಯಮಂತ್ರಿ ಮಾಡಲಿಲ್ಲ. ಜಿ.ಪರಮೇಶ್ವರ, ಶ್ರೀನಿವಾಸ ಪ್ರಸಾದ, ಅಖಂಡ ಶ್ರೀನಿವಾಸಮೂರ್ತಿ ಅವರಂತ ಅನೇಕ ಹಿರಿಯ ದಲಿತ ನಾಯಕರಿಗೆ ಅನ್ಯಾಯ ಮಾಡಿದರು. ಅಂಬೇಡ್ಕರ್ ಸೋಲಿಗೂ ಕಾರಣರಾದರು. ಇದು ಅಯೋಗ್ಯರ ಕಾಂಗ್ರೆಸ್ ಎಂದು ಅಂಬೇಡ್ಕರ್ ಅವರೇ ಆರೋಪಿಸಿದ್ದರು. ಹೀಗಾಗಿ ಇದೊಂದು ದಲಿತ ವಿರೋಧಿ ಪಕ್ಷ ಎಂದರು.ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಮಾತನಾಡಿ, ನಾನು ಯಾವುದೇ ತಪ್ಪು ಮಾಡದಿದ್ದರೂ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿ ಜೈಲಿಗೆ ಕಳುಹಿಸಿದಿರಿ. ಆದರೆ ನಿಮ್ಮ ಪಾಪದ ಕರ್ಮ ನಿಮ್ಮನ್ನು ಸುಮ್ಮನೆ ಬಿಡಲ್ಲ ಎನ್ನುವುದು ಸ್ಪಷ್ಟವಾಗಿದೆ. ಬಿಜೆಪಿ ಮೈಸೂರು ವರೆಗೆ ಪಾದಯಾತ್ರೆ ಮಾಡಿತು. ಮುಡಾ ಹಗರಣದಲ್ಲಿ ಸಿಲುಕಿದಿರಿ. ಇನ್ನು ಜೈಲಿನ ಕಂಬಿ ಎಣಿಸುವ ಕಾಲ ದೂರವಿಲ್ಲ. ನೀವು ಕರ್ಮವನ್ನು ನಂಬದಿದ್ದರೂ ಕರ್ಮ ನಿಮ್ಮನ್ನು ಬಿಡುವುದಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ಸರ್ಕಾರ ಗ್ಯಾರಂಟಿ ಹೆಸರಲ್ಲಿ ಜನರ ಮರಳು ಮಾಡಿ ಅಧಿಕಾರಕ್ಕೆ ಬಂದಿದೆ ಎಂದು ಆರೋಪಿಸಿದರು.
ಮಾಜಿ ಸಚಿವ ಕಳಕಪ್ಪ ಬಂಡಿ, ಶಾಸಕ ಹರೀಶ ಪೂಂಜಾ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ,ಎನ್. ರವಿಕುಮಾರ, ಬಿಜೆಪಿ ಮುಖಂಡರಾದ ಅನಿಲ ಮೆಣಸಿನಕಾಯಿ, ಉಮೇಶಗೌಡ ಪಾಟೀಲ, ನಿರ್ಮಲಾ ಕೊಳ್ಳಿ, ಉಷಾ ದಾಸರ, ವಿಜಯಕುಮಾರ ಗಡ್ಡಿ ಇತರರು ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಸ್ವಾಗತಿಸಿದರು. ಕಾರ್ಯದರ್ಶಿ ಲಿಂಗರಾಜ ಪಾಟೀಲ ನಿರೂಪಿಸಿದರು.
ನಾಯಿ ಇರುವ ಮನೆಗಳಲ್ಲಿ ಗಣತಿ ನಡೆಸಿಲ್ಲ ಎಂದು ಕಾಂಗ್ರೆಸ್ಸಿಗರು ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ಸನ್ನು ಅಧಿಕಾರದಿಂದ ದೂರ ಇಡಬೇಕಾದರೆ ಚುನಾವಣೆ ಬರುವುದರೊಳಗೆ ಮನೆಗೊಂದು ನಾಯಿ ಸಾಕಿ. ನಾಯಿಗಳಿವೆ ಎನ್ನುವ ಬೋರ್ಡ್ ಹಾಕಿ. ಕಾಂಗ್ರೆಸ್ಸಿಗರು ನಾಯಿ ಇರುವ ಕಡೆ ಬರುವುದಿಲ್ಲ ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಹೇಳಿದರು.ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಕಾರ್ಯಕ್ರಮಗಳಿಗೆ ನಮ್ಮ ವಿರೋಧ ಇಲ್ಲ. ಆದರೆ ಜನನ ಪ್ರಮಾಣಪತ್ರದಿಂದ ಮರಣ ಪ್ರಮಾಣಪತ್ರದ ವರೆಗೆ ಸುಮಾರು 48 ಕ್ಷೇತ್ರಗಳ ಬೆಲೆ ಏರಿಕೆ ಮಾಡಿದ್ದು ಸರಿಯಲ್ಲ. ಇನ್ನು ಪ್ರತಿ ವರ್ಷ 2 ಲಕ್ಷ ಕೋಟಿ ಸಾಲ ಪಡೆಯುತ್ತಿರುವ ಕಾಂಗ್ರೆಸ್ ಸರಕಾರ, ತನ್ನ ಅಧಿಕಾರಾವಧಿ ಮುಗಿಯುವುದರ ಒಳಗೆ 10 ಲಕ್ಷ ಕೋಟಿ ಸಾಲ ರಾಜ್ಯದ ಜನರ ಮೇಲೆ ಹೇರಲಿದೆ ಶಾಸಕ ಸಿ.ಸಿ. ಪಾಟೀಲ ಹೇಳಿದರು.ತೆರೆದ ವಾಹನದಲ್ಲಿ ಮೆರವಣಿಗೆ: ಜನಾಕ್ರೋಶ ಯಾತ್ರೆ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಮುಖಂಡರು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು. ಇಲ್ಲಿನ ಹತ್ತಿಕಾಳು ಕೂಟದಿಂದ ಆರಂಭವಾದ ಯಾತ್ರೆ, ಟಾಂಗಾಕೂಟ, ಮಹೇಂದ್ರಕರ್ ವೃತ್ತದ ಮಾರ್ಗವಾಗಿ ಗಾಂಧಿ ವೃತ್ತದಲ್ಲಿ ಸಮಾವೇಶಗೊಂಡಿತು.