₹16000 ಕೋಟಿಯ 2 ಗ್ರಾಮೀಣ ಯೋಜನೆಗೆ ಸಿಎಂ ಚಾಲನೆ

KannadaprabhaNewsNetwork |  
Published : Nov 21, 2026, 01:45 AM IST
Vidhanasoudha 1.jpg | Kannada Prabha

ಸಾರಾಂಶ

ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆ ಮೂಲಕ 10,000 ಕೋಟಿ ರು. ವೆಚ್ಚದಲ್ಲಿ ಗ್ರಾಮೀಣ ರಸ್ತೆ ಸಂಪರ್ಕ ಹಾಗೂ ‘ಮುಖ್ಯಮಂತ್ರಿ ಗ್ರಾಮೀಣಾಭಿವೃದ್ಧಿ ಯೋಜನೆ’ ಮೂಲಕ 6,000 ಕೋಟಿ ರು. ವೆಚ್ಚದಲ್ಲಿ ಗ್ರಾಮಗಳ ಆಂತರಿಕ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿ ಮೂಲಸೌಕರ್ಯ ಒದಗಿಸುವ ಮಹತ್ವದ ಯೋಜನೆಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಶುಕ್ರವಾರ ಚಾಲನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು:

ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆ ಮೂಲಕ 10,000 ಕೋಟಿ ರು. ವೆಚ್ಚದಲ್ಲಿ ಗ್ರಾಮೀಣ ರಸ್ತೆ ಸಂಪರ್ಕ ಹಾಗೂ ‘ಮುಖ್ಯಮಂತ್ರಿ ಗ್ರಾಮೀಣಾಭಿವೃದ್ಧಿ ಯೋಜನೆ’ ಮೂಲಕ 6,000 ಕೋಟಿ ರು. ವೆಚ್ಚದಲ್ಲಿ ಗ್ರಾಮಗಳ ಆಂತರಿಕ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿ ಮೂಲಸೌಕರ್ಯ ಒದಗಿಸುವ ಮಹತ್ವದ ಯೋಜನೆಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಶುಕ್ರವಾರ ಚಾಲನೆ ನೀಡಿದ್ದಾರೆ.

ರಾಜ್ಯದ ಗ್ರಾಮೀಣ ಪ್ರದೇಶಗಳ ಚಿತ್ರಣ ಬದಲಿಸುವ ಉದ್ದೇಶದಿಂದ 15 ಸಾವಿರ ಕಿ.ಮೀ. ರಸ್ತೆ ಅಭಿವೃದ್ಧಿಗೆ ನಾಂದಿ ಹಾಡಿದ್ದೇವೆ. ಇಷ್ಟು ಬೃಹತ್ ಮೊತ್ತದ ಅನುದಾ‌ನ ನೀಡಿರುವುದು ಗುತ್ತಿಗೆದಾರರ ಉದ್ದಾರಕ್ಕೆ, ಜೇಬು ತುಂಬಿಸಲು ಅಲ್ಲ, ಗ್ರಾಮೀಣ ಜನರ ಬದುಕು ಬದಲಿಸಲು ಎಂದು ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ, ‘ಈ ಹಣದಲ್ಲಿ ಒಂದು ರುಪಾಯಿ ಕೂಡ ದುರುಪಯೋಗ ಆಗಬಾರದು. ಕಾಮಗಾರಿಗಳಲ್ಲಿ ಪಾರದರ್ಶಕತೆ ಮತ್ತು ಗುಣಮಟ್ಟ ಕಡ್ಡಾಯ. ಕಾಲಕಾಲಕ್ಕೆ ಕಾಮಗಾರಿ ವಿಡಿಯೋ, ಫೋಟೋ ಕಳುಹಿಸಬೇಕು’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕಾರ್ಯಕ್ರಮದಲ್ಲಿ ‘ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆ’ ಹಾಗೂ ‘ಮುಖ್ಯಮಂತ್ರಿ ಗ್ರಾಮೀಣಾಭಿವೃದ್ಧಿ ಯೋಜನೆ'''''''' ಗಳಿಗೆ ಚಾಲನೆ ನೀಡಿ ಮಾತನಾಡಿದರು.

ಕಡತದಲ್ಲಿ ದಾಖಲಿಸಿ:

ಪ್ರತಿಯೊಂದು ಕಾಮಗಾರಿ ಆರಂಭಿಸುವ ಮೊದಲು ಸ್ಥಳದ ವಿಡಿಯೋ ಮತ್ತು ಛಾಯಾಚಿತ್ರಗಳನ್ನು ತೆಗೆದು ಕಡತದಲ್ಲಿ ದಾಖಲಿಸಬೇಕು. ಕಾಮಗಾರಿ ಪೂರ್ಣಗೊಂಡ ಬಳಿಕದ ಚಿತ್ರಗಳನ್ನೂ ಸಂಗ್ರಹಿಸಬೇಕು. ಕಾಮಗಾರಿ ನಡೆಯುವ ಸ್ಥಳದ ನಿಖರ ನಿರ್ದೇಶಾಂಕಗಳನ್ನು ದಾಖಲಿಸಬೇಕು. ಟೆಂಡರ್ ಪ್ರಕ್ರಿಯೆ ಇಲ್ಲದೆ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳುವಂತಿಲ್ಲ. ಕಾಮಗಾರಿಗಳ ಪ್ರಗತಿಯನ್ನು ಮುಖ್ಯಮಂತ್ರಿ ಡ್ಯಾಶ್ ಬೋರ್ಡ್ ಮೂಲಕ ಪರಿಶೀಲಿಸಲಾಗುವುದು ಎಂದು ಸಿಎಂ ಹೇಳಿದರು.

ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುವ ಚಿತ್ರಗಳು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗಬೇಕು. ಪ್ರತಿ ಪಂಚಾಯಿತಿ ಮತ್ತು ಜಿಲ್ಲಾಮಟ್ಟದಲ್ಲಿ ವಾಟ್ಸ್ಆ್ಯಪ್ ಗುಂಪು ರಚಿಸಿ ಕಾಮಗಾರಿಗಳ ವಿವರಗಳನ್ನು ಹಂಚಿಕೊಳ್ಳಬೇಕು. ರಸ್ತೆ ಚೆನ್ನಾಗಿದ್ದರೂ ಮತ್ತೆ ಅದೇ ರಸ್ತೆಗೆ ಹಣ ಖರ್ಚು ಮಾಡುವುದು, ಕಾಮಗಾರಿ ಮಾಡದೆ ಬಿಲ್ ಪಡೆಯುವುದು, ಅಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹಣ ದುರುಪಯೋಗ ಮಾಡುವುದು ನನ್ನ ಗಮನಕ್ಕೆ ಬಂದಿದೆ. ಇಂತಹ ಅಕ್ರಮಗಳಿಗೆ ಇನ್ನು ಅವಕಾಶವಿಲ್ಲ ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆಯಡಿ ಸುಮಾರು 15 ಸಾವಿರ ಕಿ.ಮೀ. ರಸ್ತೆಗಳನ್ನು ಅಭಿವೃದ್ಧಿಗೆ ಉದ್ದೇಶಿಸಲಾಗಿದೆ. ರಸ್ತೆ ಮರು ಡಾಂಬರೀಕರಣ, ಜಲ್ಲಿ ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣ ಸೇರಿ ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಪ್ರತಿ ಕಿಲೋಮೀಟರ್ ಕಾಮಗಾರಿಯ ಸ್ವರೂಪಕ್ಕೆ ಅನುಗುಣವಾಗಿ 38 ರಿಂದ 70 ಲಕ್ಷ ರು. ವೆಚ್ಚ ಅಂದಾಜು ಮಾಡಲಾಗಿದೆ. ಈಗಾಗಲೇ ಪ್ರಗತಿ ಪಥ ಯೋಜನೆಯಡಿ 5 ಸಾವಿರ ಕೋಟಿ ಅನುದಾನವನ್ನೂ ನೀಡಲಾಗಿದೆ ಎಂದರು.ನಗರಗಳತ್ತ ವಲಸೆ ತಡೆಗೆ ಹಳ್ಳಿ ಅಭಿವೃದ್ಧಿ:ಜತೆಗೆ ಪಂಚಾಯಿತಿ ಮಟ್ಟದ ಅಭಿವೃದ್ಧಿಗೆ 6 ಸಾವಿರ ಕೋಟಿ ರು. ನೀಡುತ್ತಿದ್ದು, ಗ್ರಾಮೀಣಾಭಿವೃದ್ಧಿ ಇಲಾಖೆಗೆ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತದ ಅನುದಾನ ನೀಡಲಾಗುತ್ತಿದೆ. ಇದೊಂದು ದಾಖಲೆ. ಹಳ್ಳಿಗಳು ಅಭಿವೃದ್ಧಿಯಾದರೆ ಮಾತ್ರ ಕರ್ನಾಟಕದ ಸಮಗ್ರ ಅಭಿವೃದ್ಧಿ ಸಾಧ್ಯ. ಗ್ರಾಮೀಣ ಪ್ರದೇಶಗಳಿಂದ ಈಗಾಗಲೇ ಶೇ.47ರಷ್ಟು ಜನಸಂಖ್ಯೆ ನಗರಗಳಿಗೆ ಸ್ಥಳಾಂತರಗೊಂಡಿದ್ದು, ಮುಂದಿನ ದಿನಗಳಲ್ಲಿ ಈ ಪ್ರಮಾಣ ಶೇ.76ಕ್ಕೆ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ವಲಸೆ ತಡೆಯಲು ಹಳ್ಳಿಗಳಲ್ಲೇ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ಸರ್ಕಾರದ ಆದ್ಯತೆ ಎಂದು ಶಿವಕುಮಾರ್‌ ತಿಳಿಸಿದರು.

ಭೂ ಗ್ಯಾರಂಟಿ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿನ ಆಸ್ತಿ ದಾಖಲೆಗಳನ್ನು ಸರಿಪಡಿಸಿ ಅರ್ಹರಿಗೆ ಖಾತಾ ಒದಗಿಸುವ ಕೆಲಸಕ್ಕೆ ಆದ್ಯತೆ ನೀಡಬೇಕು.ನಕಲಿ ನೋಂದಣಿಗಳಿಗೆ ಅವಕಾಶ ನೀಡಬಾರದು ಎಂದರು.

ಪ್ರತಿ ಕ್ಷೇತ್ರಕ್ಕೆ 100 ಕೋಟಿ ರು.:

ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ರಸ್ತೆಗಳು ನಮ್ಮ ಸಂಸ್ಕೃತಿ ಬಿಂಬಿಸುತ್ತವೆ. ಶಾಸಕರು ಪ್ರತಿ ಕ್ಷೇತ್ರಕ್ಕೆ 10 ಕೋಟಿ ರು. ಸಿಗುತ್ತದೆ ಎಂದು ತಿಳಿದುಕೊಂಡಿದ್ದರು. ಆದರೆ ಮುಖ್ಯಮಂತ್ರಿಗಳು 100 ಕೋಟಿ ರು. ಕೊಟ್ಟಿದ್ದಾರೆ.

16,000 ಕೋಟಿ ರು. ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿದ್ದು, 15 ತಿಂಗಳ ಒಳಗಾಗಿ ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕು. ಪ್ರತಿ ಕಾಮಗಾರಿ ಮೂರು ಸಲ ಪರಿವೀಕ್ಷಣೆ ಮಾಡಬೇಕು. ಆದರ್ಷ ಗ್ರಾಮ ಮಾಡಲಿಕ್ಕೂ ಇದರಲ್ಲಿ ಅವಕಾಶ ಇದೆ. 2027ರ ಮಾರ್ಚ್‌ ಒಳಗಾಗಿ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಮಾಡುತ್ತೇವೆ ಎಂದು ಹೇಳಿದರು.

ಸಚಿವರಾದ ಬಸವಂತಪ್ಪ, ಶಾಸಕರಾದ ಟಿ.ಬಿ.ಜಯಚಂದ್ರ, ಎನ್‌.ಎಚ್.ಕೋನರೆಡ್ಡಿ, ರಹೀಂ ಖಾನ್‌, ಅಶೋಕ್‌ ಪಟ್ಟಣ್‌, ವೆಂಕಟಶಿವಾರೆಡ್ಡಿ, ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಪಂಕಜ್‌ ಕುಮಾರ್‌ ಪಾಂಡೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಆಯುಕ್ತರಾದ ಫೌಜಿಯಾ ತರನ್ನಮ್‌ ಹಾಜರಿದ್ದರು.ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡಕ್ಕೆ ಅವಕಾಶವಿಲ್ಲ: ಸಿಇಒಗಳು, ಇಒಗಳು, ಪಿಡಿಒಗಳು ಹಾಗೂ ಇತರ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಶಾಸಕರು ಅಥವಾ ಸಚಿವರಿಂದ ಅನಗತ್ಯ ಒತ್ತಡ ಬಂದರೆ ಅದನ್ನು ಗೌಪ್ಯವಾಗಿ ಜಿಲ್ಲಾಧಿಕಾರಿ ಅಥವಾ ಸಿಇಒಗಳ ಮೂಲಕ ಸರ್ಕಾರಕ್ಕೆ ತಿಳಿಸಬಹುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೀಡಿದ್ದಾರೆ.

ಅಧಿಕಾರಿಗಳು ಯಾರ ಭಯಕ್ಕೂ ಒಳಗಾಗದೆ ಕಾನೂನುಬದ್ಧವಾಗಿ ಕೆಲಸ ಮಾಡಬೇಕು. ಜಾತಿಗಿಂತ ನೀತಿ, ಪ್ರಾಮಾಣಿಕತೆ ಮತ್ತು ಕೆಲಸದ ಗುಣಮಟ್ಟಕ್ಕೆ ಸರ್ಕಾರ ಆದ್ಯತೆ ನೀಡುತ್ತದೆ. ಇನ್ನು ಸಚಿವರು ಪ್ರತಿ ತಿಂಗಳು ಎರಡು ಬಾರಿ ತಾಲೂಕುಗಳಿಗೆ ಭೇಟಿ ನೀಡಬೇಕು. ಶಾಸಕರು ಹೋಬಳಿ ಮತ್ತು ಪಂಚಾಯತಿ ಮಟ್ಟದಲ್ಲಿ ಜನರ ಸಮಸ್ಯೆಗಳನ್ನು ಆಲಿಸಬೇಕು. ನಾನೂ ಸಹ ಪ್ರತಿ ಶನಿವಾರ ಒಂದೊಂದು ಪ್ರಜಾಸೇವಾ ಕೇಂದ್ರಕ್ಕೆ ಭೇಟಿ ನೀಡುತ್ತೇನೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ಹೆದ್ದಾರಿ ದುರಸ್ತಿಗಾಗಿ ರಸ್ತೆತಡೆ
ಅನುದಾನಿತ ಶಾಲಾ ನೌಕರರಿಗೂ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹ