ಮೂಲೆಗುಂಪಾದ ಶುದ್ಧ ನೀರಿನ ಘಟಕ ಕನ್ನಡಪ್ರಭ ವರದಿಗೆ ಸಿಎಂ ಕಚೇರಿ ಸ್ಪಂದನೆ

KannadaprabhaNewsNetwork | Published : Apr 2, 2025 1:00 AM

ಸಾರಾಂಶ

ಸೋಮವಾರಪೇಟೆ ತಾಲೂಕು ಪಂಚಾಯಿತಿಯಿಂದ ಅನುಪಾಲನಾ ವರದಿಯನ್ನು ಮುಖ್ಯಮಂತ್ರಿಗಳ ಕಚೇರಿಯಿಂದ ಪತ್ರ ಮುಖೇನ ಕೋರಿದ್ದು, ಸಂಚಲನ ಮೂಡಿಸಿದೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

"ಮೂಲೆಗುಂಪಾದ ಶುದ್ಧ ನೀರಿನ ಘಟಕ " ಕುರಿತು ಕನ್ನಡಪ್ರಭ ಪತ್ರಿಕೆಯಲ್ಲಿ ಮಾರ್ಚ್ 11 ರಂದು ವರದಿ ಪ್ರಕಟವಾಗಿದ್ದು, ಈ ಕುರತು ಏನು ಕ್ರಮ ಕೈಗೊಂಡಿದ್ದೀರಿ ಎಂದು ಸೋಮವಾರಪೇಟೆ ತಾಲೂಕು ಪಂಚಾಯಿತಿಯಿಂದ ಅನುಪಾಲನ ವರದಿಯನ್ನು ಮುಖ್ಯಮಂತ್ರಿಗಳ ಕಚೇರಿಯಿಂದ ಪತ್ರ ಮುಖೇನ ಕೋರಿದ್ದು, ಸಂಚಲನ ಮೂಡಿಸಿದೆ.

ವರದಿಗೆ ಸಂಬಂಧಿಸಿದಂತೆ ಮುಖ್ಯ ಮಂತ್ರಿಗಳ ಕಚೇರಿಯ ವಿಶೇಷ ಕರ್ತವ್ಯ ಅಧಿಕಾರಿ ಡಾ.ವೈಷ್ಣವಿ ಮಾರ್ಚ್ 11 ರಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾತ್ ರಾಜ್ ಅಪಾರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು ಅದರಂತೆ ಜಿ. ಪಂ., ತಾಲೂಕು ಪಂಚಾಯಿತಿ, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಲಿಖಿತ ಉತ್ತರ ಪಡೆದಿದ್ದಾರೆ. 2025-26ನೇ ಸಾಲಿನ ಪಂಚಾಯಿತಿ ನಿಧಿ ಕ್ರಿಯಾಯೋಜನೆಯಲ್ಲಿ ಅಗತ್ಯವಾದ ಅನುದಾನ ಆದ್ಯತೆಯ ಮೇರೆಗೆ ಘಟಕವನ್ನು ಮರು ಚಾಲನೆಗೊಳಿಸಲು ಕ್ರಮ ವಹಿಸಲಾಗುವುದು‌ ಎಂದು ಅಧಿಕಾರಿಗಳು ಲಿಖಿತವಾಗಿ ಉತ್ತರಿಸಿದ್ದಾರೆ.

ಸುಂಟಿಕೊಪ್ಪ ನಾಡಕಚೇರಿ ಬಳಿ ಸ್ಥಾಪಿಸಲಾಗಿದ್ದ ಶುದ್ಧ ನೀರಿನ ಘಟಕ ನಿರ್ವಹಣೆ ಇಲ್ಲದೆ ಯಾರಿಗೂ ಉಪಯೋಗಕ್ಕೆ ಬಾರದಂತಾಗಿದ್ದು, ಕಳೆದ ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿಲ್ಲ ಎಂದು ಕನ್ನಡಪ್ರಭ ವರದಿ ಪ್ರಕಟಿಸಿತ್ತು.

ಅತ್ಯಂತ ಅವಶ್ಯಕ ಮತ್ತು ದೈನದಿನ ಜೀವನದಲ್ಲಿ ಹಾಸುಹೊಕ್ಕಾಗಿರುವ ಕುಡಿಯುವ ನೀರಿನ ಯೋಜನೆಯೊಂದು ದೇವರು ಕೊಟ್ಟರು ಪೂಜಾರಿ ಕೊಡ ಎಂಬಾತಗಿರುವುದನ್ನು ಜನಪರ ಕಾಳಜಿ ಉದ್ದೇಶದಿಂದ ಮುಖ್ಯ ಮಂತ್ರಿ ಕಚೇರಿ ವರೆಗೆ ತಲುಪುವಂತೆ ಮಾಡಿದ ಪತ್ರಿಕೆಯ ಜನಪರ ಕಾಳಜಿಯನ್ನು ಮುಕ್ತ ಕಂಠದಿಂದ ಸುಂಟಿಕೊಪ್ಪದ ಸಾರ್ವಜನಿಕ ರು ಶ್ಲಾಘಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾ.ಪಂ.ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್, ಈಗಾಗಲೇ 15 ನೇ ಹಣಕಾಸು ಯೋಜನೆಯಡಿಯಲ್ಲಿ ಹಣ ಮೀಸಲು ಇರುವ ಬಗ್ಗೆ ತೀರ್ಮಾನವಾಗಿದ್ದು ಇದೀಗ ಮುಖ್ಯ ಮಂತ್ರಿಗಳ ಕಚೇರಿಯಿಂದ ಆದ್ಯತೆಯ ಮೇರೆಗೆ ಮರು ಚಾಲನೆ ದೊರೆಯಲು ಆದೇಶ ಬಂದಿರುವ ಹಿನ್ನಲೆಯಲ್ಲಿ ತುರ್ತಾಗಿ ಕ್ರಮ ಕೈಗೊಳ್ಳಲು ಮುಂದಾಗಿದೆ.

Share this article