ಮುಕ್ತಿಮಂದಿರದಲ್ಲಿ ಸಿಎಂ ವಿಶೇಷ ಪೂಜೆ

KannadaprabhaNewsNetwork |  
Published : Sep 02, 2026, 03:15 AM IST
ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ರಂಭಾಪುರಿ ಜಗದ್ಗುರು ಲಿಂ.ಗಂಗಾಧರ ಸ್ವಾಮಿಗಳ ಗದ್ದುಗೆಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಪೂಜೆ ಸಲ್ಲಿಸಿ ಗಂಗಾಧರ ಸ್ವಾಮಿಗಳ ದರ್ಶನ ಪಡೆದುಕೊಂಡರು.

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ರಂಭಾಪುರಿ ಜಗದ್ಗುರು ಲಿಂ.ಗಂಗಾಧರ ಸ್ವಾಮಿಗಳ ಗದ್ದುಗೆಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಪೂಜೆ ಸಲ್ಲಿಸಿ ಗಂಗಾಧರ ಸ್ವಾಮಿಗಳ ದರ್ಶನ ಪಡೆದುಕೊಂಡರು.

ಈ ವೇಳೆ ನೊಣವಿನಕೇರಿಯ ಕಾಡಸಿದ್ದೇಶ್ವರ ಮಠದ ಕರಿಬಸವ ಸ್ವಾಮಿಗಳೊಂದಿಗೆ ಪೂಜೆ ಸಲ್ಲಿಸಿದರು. ಸುಮಾರು ಹತ್ತು ನಿಮಿಷಗಳ ಕಾಲ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕರಿಬಸವ ಸ್ವಾಮಿಗಳೊಂದಿಗೆ ಲಿಂ. ಗಂಗಾಧರ ಸ್ವಾಮಿಗಳ ಗದ್ದುಗೆಯ ಬಾಗಿಲು ಹಾಕಿ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ಮುಕ್ತಿಮಂದಿರ ಧರ್ಮಕ್ಷೇತ್ರವು ನನ್ನ ಹೃದಯಕ್ಕೆ ಹತ್ತಿರವಾದ ಕ್ಷೇತ್ರವಾಗಿರುವುದರಿಂದ ಅಜ್ಜಯ್ಯನ ದರ್ಶನಕ್ಕೆ ಬಂದಿರುವೆ. ಮುಕ್ತಿಮಂದಿರವು ಗಂಗಾಧರ ಅಜ್ಜಾರು ಐಕ್ಯವಾದ ಸ್ಥಳ. ಈ ಹಿಂದೆ ನಾನು ಮುಕ್ತಿಮಂದಿರಕ್ಕೆ ಬಂದಾಗ ಅಜ್ಜನಲ್ಲಿ ಪ್ರಾರ್ಥನೆ ಮಾಡಿದ್ದೆ. ಈಗ ಅವರ ಋುಣ ತೀರಿಸುವ ಹಾಗೂ ಸೇವೆ ಮಾಡುವ ಕಾರ್ಯ ಮಾಡುತ್ತಿರುವೆ. ರಾಜ್ಯದ ಸಚಿವರು, ಶಾಸಕರು ಇಲ್ಲಿಗೆ ಆಗಮಿಸಿದ್ದಾರೆ. ಮುಂದಿನ ದಿನಗಳಲ್ಲಿ ರೈತರಿಗೆ ಒಳ್ಳೆಯ ಮಳೆ ಬೆಳೆ ಬರಲಿ ಎಂದು ಅಜ್ಜನಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ಹೇಳಿದರು.

ಈ ವೇಳೆ ಸಚಿವರಾದ ಬಸವರಾಜ ರಾಯರಡ್ಡಿ, ಎಸ್‌.ಎಸ್. ಮಲ್ಲಿಕಾರ್ಜುನ, ಶಾಸಕರಾದ ಶ್ರೀನಿವಾಸ ಮಾನೆ, ಯಾಸೀರ್‌ಖಾನ‌ ಪಠಾಣ, ಡಾ. ಚಂದ್ರು ಲಮಾಣಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ಮುಕ್ತಿಮಂದಿರದ ಪಟ್ಟಾಧಿಕಾರಿ ವಿಮಲ ರೇಣುಕ ವೀರಮುಕ್ತಿಮುನಿ ಸ್ವಾಮೀಜಿ, ಪ್ರಮುಖರಾದ ಆನಂದಸ್ವಾಮಿ ಗಡ್ಡದೇವರಮಠ, ಮಾಜಿ ಶಾಸಕರಾದ ಮೋಹನ ಲಿಂಬಿಕಾಯಿ, ಎಂ.ಎಸ್. ಅಕ್ಕಿ, ರಾಮಣ್ಣ ಲಮಾಣಿ, ಜಿ.ಎಸ್. ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ ಮತ್ತು ಫಕ್ಕೀರೇಶ ಮ್ಯಾಟಣ್ಣವರ, ಪರಮೇಶ ಲಮಾಣಿ, ಎಸ್.ಪಿ. ಬಳಿಗಾರ ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಇದ್ದರು.

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ಬರದ ಭೀತಿಯಲ್ಲಿವೆ: ಸಿಎಂ

ರಾಜ್ಯದಲ್ಲಿಯೇ ಗದಗ ಜಿಲ್ಲೆ ಅತಿ ಹೆಚ್ಚು ಬರಪೀಡಿತ ಪ್ರದೇಶವಾಗಿದೆ. ಜಿಲ್ಲೆಯ ಬಹುತೇಕ ಬೆಳೆಗಳು ಒಣಗಿ ಹೋಗಿವೆ. ಜಿಲ್ಲೆಯ ಎಲ್ಲ ತಾಲೂಕುಗಳ ರೈತರು ಸಂಕಷ್ಟದಲ್ಲಿದ್ದಾರೆ ಎನ್ನುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು.

ಮಂಗಳವಾರ ಲಕ್ಷ್ಮೇಶ್ವರ ಸಮೀಪದ ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ಭೇಟಿ ನೀಡಿ ರಂಭಾಪುರಿ ಜಗದ್ಗುರು ಲಿಂ.ವೀರಗಂಗಾಧರ ಸ್ವಾಮಿಗಳ ಗದ್ದುಗೆಗೆ ಪೂಜೆ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಗದಗ ಜಿಲ್ಲೆಯು ಅತಿ ಹೆಚ್ಚು ಬರಪೀಡಿತ ಪ್ರದೇಶವಾಗಿದೆ. ಜಿಲ್ಲೆಯ 7 ತಾಲೂಕುಗಳಲ್ಲಿ ಒಂದು ತಾಲೂಕು ಮಾತ್ರ ಬರ ಎಂದು ಘೋಷಣೆ ಮಾಡಲಾಗಿದೆ. ಈಗ ನಾನು ಹೆಲಿಕಾಪ್ಟರ್‌ನಲ್ಲಿ ಬರುವಾಗ ನೋಡಿ ಬಂದಿರುವೆ. ಗದಗ ಜಿಲ್ಲೆಯಲ್ಲಿ ಶೇ. 45ರಷ್ಟು ಮಳೆ ಕೊರತೆಯಾಗಿರುವ ವರದಿ ನೋಡಿ ನೇರವಾಗಿ ಇಲ್ಲಿಗೆ ಬಂದಿರುವೆ. ಶೇಂಗಾ, ಹತ್ತಿ, ಮೆಕ್ಕೆಜೋಳ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳು ರೈತರಿಗೆ ಸೇರದಂತಾಗಿವೆ. ಇದನ್ನು ವಿಧಾನಸಭೆಯಲ್ಲಿ ಚರ್ಚೆ ಮಾಡಲು ವಿರೋಧ ಪಕ್ಷಗಳು ಅವಕಾಶ ನೀಡುತ್ತಿಲ್ಲ. ಬಿಜೆಪಿಯವರಿಗೆ ರೈತರ ಸಂಕಷ್ಟ ಬೇಕಾಗಿಲ್ಲ. ಅವರು ರಾಜಕಾರಣ ಮಾಡಲಿ, ಜನರು ನಮಗೆ ಅವರ ಸೇವೆ ಮಾಡಲು ಅವಕಾಶ ನೀಡಿದ್ದಾರೆ. ಅವರ ಋುಣ ತೀರಿಸುವ ಕಾರ್ಯ ಮಾಡುತ್ತಿರುವೆ ಎಂದು ವಿರೋಧ ಪಕ್ಷಗಳನ್ನು ಕುಟುಕಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರದ ಮಾರ್ಗಸೂಚಿಯಂತೆ ಬರ ಘೋಷಣೆ: ಸಿಎಂ
ಕ್ಷೇತ್ರದಲ್ಲಿ 21 ಕೆಪಿಎಸ್ ಶಾಲೆಗಳ ಮಂಜೂರು-ಶಾಸಕ ಪಠಾಣ