ಏಳನೇ ವೇತನ, ಹಳೇ ಪಿಂಚಣಿ ಜಾರಿಗೆ ಸಿಎಂ ಸಿದ್ಧತೆ: ಮಾಜಿ ಸಚಿವ ಆಂಜನೇಯ

KannadaprabhaNewsNetwork |  
Published : Jun 01, 2024, 12:45 AM IST
ಚಿತ್ರದುರ್ಗ ಮೂರನೇ ಪುಟದ ಬಾಟಂ | Kannada Prabha

ಸಾರಾಂಶ

ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ವಸತಿ ಶಾಲೆಯಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಪರ ಶುಕ್ರವಾರ ಮತ ಪ್ರಚಾರ ನಡೆಸಿದರು.

ಕನ್ನಡಪ್ರಭ ವಾರ್ತೆ, ಹೊಳಲ್ಕೆರೆ

ಏಳನೇ ವೇತನ ಆಯೋಗದ ವರದಿ ಹಾಗೂ ಹಳೇ ಪಿಂಚಣಿ ಜಾರಿಗೆ ಸಿಎಂ ಸಿದ್ದತೆ ನಡೆಸಿದ್ದಾರೆಂದು ಮಾಜಿ ಸಚಿವ ಹೆಚ್.ಆಂಜನೇಯ ಹೇಳಿದರು.

ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ, ಕಣಿವೆ, ಬೊಮ್ಮನಕಟ್ಟೆ, ಬಸಾಪುರ, ಬಿ.ದುರ್ಗ, ಕೋಡಿರಂಗವ್ವನಹಳ್ಳಿ ಸೇರಿದಂತೆ ವಿವಿಧ ವಸತಿ ಹಾಗೂ ಖಾಸಗಿ ಶಾಲೆಗಳಲ್ಲಿ ಶುಕ್ರವಾರ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಪರ ಮತಯಾಚಿಸಿ ಮಾತನಾಡಿದ ಅವರು ಶಿಕ್ಷರ ಹಿತ ಕಾಯಲು ಕಾಂಗ್ರೆಸ್ ಬದ್ಧವಿದೆ. ಹಿರಿಯ ನಾಯಕ ದಿವಂಗತ ಎ.ಕೃಷ್ಣಪ್ಪ ಅವರ ಕುಟುಂಬದ ಸದಸ್ಯ ಡಿ.ಟಿ.ಶ್ರೀನಿವಾಸ್ ಅನೇಕ ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಶಿಕ್ಷಕರ ಕಷ್ಟ, ಸಮಸ್ಯೆಗಳ ಅರಿವು ಇದೆ. ಆದ್ದರಿಂದ ಅವರ ಗೆಲುವು ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ರಹದಾರಿ ಆಗಲಿದೆ ಎಂದರು.

ವಿಧಾನಸಭಾ ಚುನಾವಣೆಯಲ್ಲಿ ಈಗಾಗಲೇ ಸೋತು ಸುಣ್ಣವಾಗಿರುವ ಬಿಜೆಪಿಗೆ ವಿಧಾನಪರಿಷತ್ ಚುನಾವಣೆಯಲ್ಲೂ ಸೋಲಿನ ಮುನ್ಸೂಚನೆ ದೊರೆತಿರುವ ಕಾರಣಕ್ಕೆ ವಾಮ ಮಾರ್ಗದಲ್ಲಿ ಸಾಗುತ್ತಿದೆ. ಈ ಮೂಲಕ ಶಿಕ್ಷಕ ಕ್ಷೇತ್ರದ ಪಾವಿತ್ರೃಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದೆ. ಮೂರು ಬಾರಿ ಈ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ ಅವರ ಸಾಧನೆ ಶೂನ್ಯವಾಗಿದ್ದು, ಈಗಾಗಲೇ ಬಹಳಷ್ಟು ಶಿಕ್ಷಕರು ಭ್ರಮನಿರಸನಗೊಂಡು ಸ್ವಯಂ ಪ್ರೇರಿತರಾಗಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಟೊಂಕ ಕಟ್ಟಿರುವುದು ವಿಜಯದ ಮುನ್ಸೂಚನೆ ಎಂದರು.

ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರ ಬಲವರ್ಧನೆಗೆ ಕಾಂಗ್ರೆಸ್ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಶಿಕ್ಷಕರ ನೇಮಕಾತಿ, ವೇತನ ಹೆಚ್ಚಳ, ಶಾಲಾ-ಕೊಠಡಿಗಳ ನಿರ್ಮಾಣ, ಶೌಚಗೃಹ ವ್ಯವಸ್ಥೆ ಹೀಗೆ ಅನೇಕ ಯೋಜನೆಗಳ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ. ಇನ್ನೂ ಹೆಚ್ಚಿನ ರೀತಿ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಲು, ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ವಿದ್ಯಾವಂತ ಡಿ.ಟಿ.ಶ್ರೀನಿವಾಸ್ ಅವರ ಗೆಲುವು ಅಗತ್ಯವಾಗಿದೆ ಎಂದು ಹೇಳಿದರು.

ಚಿಂತಕರ ಚಾವಡಿ ಎಂದೇ ಹೆಸರು ಮಾಡಿರುವ ವಿಧಾನ ಪರಿಷತ್‍ಗೆ ವಿದ್ಯಾವಂತರು, ಶಿಕ್ಷಣದ ಬೆಳವಣಿಗೆ ಕುರಿತು ಕಾಳಜಿ ಹೊಂದಿರುವ ಹಾಗೂ ಶಿಕ್ಷಣ ಇಲಾಖೆಯ ಸಮಸ್ಯೆಗಳ ಬಗ್ಗೆ ಸಮಗ್ರ ಅರಿವನ್ನು ಹೊಂದಿರುವ ಶ್ರೀನಿವಾಸ್ ಅವರಂತಹವರು ಸದನ ಪ್ರವೇಶಿಸುವುದು ಅಗತ್ಯವಾಗಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಹನುಮಂತಪ್ಪ, ಜಿಪಂ ಮಾಜಿ ಅಧ್ಯಕ್ಷ ಶಿವಕುಮಾರ್ ಶಿವಪುರ, ಮಾಜಿ ಉಪಾಧ್ಯಕ್ಷ ಗಂಗಾಧರ್, ಸದಸ್ಯರಾದ ರಂಗಸ್ವಾಮಿ, ಡಿ.ಕೆ.ಶಿವಮೂರ್ತಿ, ಇಂದಿರಾ ಕಿರಣ್‍ಕುಮಾರ್ ಯಾದವ್, ಒಬಿಸಿ ರಾಜ್ಯ ಉಪಾಧ್ಯಕ್ಷ ಕಿರಣ್‍ಕುಮಾರ್ ಯಾದವ್, ಚಿತ್ರಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಕಾಟಲಿಂಗಪ್ಪ, ಪ್ರಾಚಾರ್ಯ ಮಹೇಶ್ ಅಂಗಡಿ, ಸಹ ಶಿಕ್ಷಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಯುವ ನಿಧಿ’ಯಡಿ 2326 ಫಲಾನುಭವಿಗಳಿಗಷ್ಟೇ ಉದ್ಯೋಗ!
ವಿಶ್ವಸಂಸ್ಥೆಯಲ್ಲಿ ಶ್ರೀ ಶ್ರೀ ನೇತೃತ್ವದಲ್ಲಿ ಸಾಮೂಹಿಕ ಧ್ಯಾನ