ರಾಣಿಬೆನ್ನೂರು: ರಾಣಿಬೆನ್ನೂರು ಪಟ್ಟಣದ ನಗರಸಭೆ ಕ್ರೀಡಾಂಗಣದ ನಿವೇಶನ ಇನ್ನೂ ನಗರಸಭೆ ಹೆಸರಿನಲ್ಲಿದ್ದು, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಗೊಂಡಿಲ್ಲ. ಹಸ್ತಾಂತರಗೊಳ್ಳದೇ ಅದನ್ನು ಇಲಾಖೆ ವತಿಯಿಂದ ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲ. ಈ ಕುರಿತು ಹಲವಾರು ಬಾರಿ ಪತ್ರ ವ್ಯವಹಾರ ಮಾಡಲಾಗಿದ್ದು, ಇದೀಗ ಹಸ್ತಾಂತರ ಪ್ರಕ್ರಿಯೆ ಕೊನೆಯ ಹಂತದಲ್ಲಿದ್ದು, ಹಸ್ತಾಂತರಗೊಂಡ ಬಳಿಕ ಅಭಿವೃದ್ಧಿ ಕೈಗೊಳ್ಳಲಾಗುತ್ತದೆ ಎಂದು ಹಾವೇರಿ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಲತಾ ಬಿ.ಎಚ್. ಅವರು ಹೇಳಿದ್ದಾರೆ.
ಕ್ರೀಡಾಂಗಣದ ನಿವೇಶನವು ನಗರಸಭೆ ಹೆಸರಿನಲ್ಲಿದೆ. ಕ್ರೀಡಾಂಗಣ ಅಭಿವೃದ್ಧಿ ಪಡಿಸಲು ಅದು ಇಲಾಖೆಯ ಹೆಸರಿನಲ್ಲಿರಬೇಕಾಗುತ್ತದೆ. ಅದರ ಸಲುವಾಗಿ ಇಲಾಖೆ ವತಿಯಿಂದ ನಗರಸಭೆ ಆಯುಕ್ತರಿಗೆ 15-7-2025, 18-10-2025, 2-10-2026, 27-02-2026, 13-04-2026, 1-10-2026 ನಿರಂತರ ಪತ್ರ ವ್ಯವಹಾರ ನಡೆಸಲಾಗಿದೆ. ಇದೀಗ ಹಸ್ತಾಂತರ ಪ್ರಕ್ರಿಯೆ ಕೊನೆಯ ಹಂತದಲ್ಲಿದ್ದು ಶೀಘ್ರದಲ್ಲಿಯೇ ಅದು ಪೂರ್ಣಗೊಳ್ಳಲಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ರಾಜ್ಯ ವಲಯಕ್ಕೆ ಪ್ರಸಕ್ತ ಸಾಲಿನಲ್ಲಿ ಹಂಚಿಕೆಯಾದ ಬಜೆಟ್‌ನಲ್ಲಿ ರಾಣಿಬೆನ್ನೂರು ತಾಲೂಕಿನ ಕ್ರೀಡಾಂಗಣದ ಅಭಿವೃದ್ಧಿಗೆ 100 ಲಕ್ಷ ಅನುದಾನ ನೀಡಲಾಗಿದೆ. ಅದರಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವ ಸಲುವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಲತಾ ಬಿ.ಎಚ್. ಸೆ.28ರಂದು ಖುದ್ದಾಗಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೆಲವು ತುರ್ತು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಅದರ ಪ್ರಕಾರ ಉನ್ನತ ಮಟ್ಟದ ಪ್ರವೇಶ ದ್ವಾರ, ಹೊಸ ಕಂಪೌಂಡ್ ಮತ್ತು ಫೆನ್ಸಿಂಗ್, ಫ್ಲಡ್ ಲೈಟ್ ಅಳವಡಿಕೆ, ಕ್ರೀಡಾಂಗಣವನ್ನು ಸಮತಟ್ಟುಗೊಳಿಸಿ ಮರಳು ಮಿಶ್ರಿತ ಕೆಂಪು ಮಣ್ಣಿನಿಂದ 400 ಮೀಟರ್ ಅಥ್ಲೆಟಿಕ್ಸ್ ಟ್ರ್ಯಾಕ್ ನಿರ್ಮಾಣ, ಖೋ-ಖೋ, ಕಬಡ್ಡಿ, ವ್ಹಾಲಿಬಾಲ್, ಫುಟ್‌ಬಾಲ್, ಥ್ರೋಬಾಲ್ ಹಾಗೂ ವಿವಿಧ ಕ್ರೀಡಾ ಅಂಕಣಗಳನ್ನು ನಿರ್ಮಿಸುವುದು. ಮಳೆ ನೀರು ಸರಾಗವಾಗಿ ಡ್ರೈನೇಜ್‌ಗೆ ಹರಿದು ಹೋಗುವಂತೆ ಕ್ರೀಡಾಂಗಣದ ಒಳಭಾಗದಲ್ಲಿ ಸೀಪೇಜ್ ಸಿಸ್ಟಮ್ ಅಳವಡಿಸುವಂತೆ ಉಲ್ಲೇಖಿಸಲಾಗಿದೆ.