ಚಾಮರಾಜನಗರ ಭೇಟಿಯಿಂದ ಸಿಎಂ ಸ್ಥಾನ ಗಟ್ಟಿ : ಸಿದ್ದರಾಮಯ್ಯ

KannadaprabhaNewsNetwork |  
Published : Apr 25, 2025, 11:51 PM ISTUpdated : Apr 26, 2025, 10:56 AM IST
ಸಿಎಂ ಸಿದ್ದರಾಮಯ್ಯ | Kannada Prabha

ಸಾರಾಂಶ

ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗುತ್ತದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಚಾಮರಾಜನಗರಕ್ಕೆ ಭೇಟಿ ನೀಡಿದ್ದರಿಂದ ನನ್ನ ಸಿಎಂ ಸ್ಥಾನ ಗಟ್ಟಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

 ಚಾಮರಾಜನಗರ : ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗುತ್ತದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಚಾಮರಾಜನಗರಕ್ಕೆ ಭೇಟಿ ನೀಡಿದ್ದರಿಂದ ನನ್ನ ಸಿಎಂ ಸ್ಥಾನ ಗಟ್ಟಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಶ್ರೀ ಮಲೆಮಹದೇಶ್ವರ ಬೆಟ್ಟದಲ್ಲಿ ಶುಕ್ರವಾರ ಮಹದೇಶ್ವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆ ಎಂಬುದು ಸೇರಿ ಇಂತಹ ಮೌಢ್ಯಗಳೇ ಸಮಾಜದ ಪ್ರಗತಿಗೆ ಮಾರಕವಾಗಿದೆ. ನಾನು ಇದುವರೆಗೆ ಸುಮಾರು 20 ಬಾರಿ ಜಿಲ್ಲೆಗೆ ಬಂದಿದ್ದು, ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದೇನೆ ಎಂದು ಮಂದಹಾಸ ಬೀರಿದರು.

ಮಹದೇಶ್ವರ ಬೆಟ್ಟ ಅಭಿವೃದ್ಧಿ:

ಗುರುವಾರ ನಡೆದ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಸಭೆಯಲ್ಲಿ ಮಹದೇಶ್ವರ ಬೆಟ್ಟದಲ್ಲಿ ಶುಚಿತ್ವ, ಮದ್ಯಪಾನ ನಿಷೇಧ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೊಳಿಸಲು ನಿರ್ಣಯ ಕೈಗೊಳ್ಳಲಾಗಿದೆ. ಮೈಸೂರು ವಿಭಾಗದ ಚಾಮರಾಜನಗರ ಜಿಲ್ಲೆ ಹಿಂದುಳಿದ ಜಿಲ್ಲೆಯಾಗಿದ್ದು, ಈ ಭಾಗಕ್ಕೆ ವಿಶೇಷ ಗಮನ ನೀಡುವ ನಿಟ್ಟಿನಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗಿದೆ ಎಂದರು.

ದೇವಸ್ಥಾನದಲ್ಲಿ ವಿತರಿಸಲಾಗುವ ಲಾಡು ಪ್ರಸಾದ ಗುಣಮಟ್ಟ ಹಾಗೂ ಕಡಿಮೆ ದರದಲ್ಲಿ ನೀಡುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಮಲೆಮಹದೇಶ್ವರ ಸನ್ನಿಧಿಯ ಸುತ್ತಮುತ್ತಲ ಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕೆಂದು ನಿರ್ಣಯಿಸಲಾಗಿದೆ ಎಂದು ತಿಳಿಸಿದರು.

ಇಂದಿರಾ ಕ್ಯಾಂಟೀನ್‌ನಲ್ಲಿ  ಚೌಚೌಬಾತ್‌ ಸವಿದ ಸಿಎಂ

ಚಾಮರಾಜನಗರ ಜಿಲ್ಲಾ ಪ್ರವಾಸ ನಡೆಸಿದ ಸಿಎಂ ಸಿದ್ದರಾಯ್ಯ ಅವರು ಹನೂರು ಪಟ್ಟಣದ ಕರ್ನಾಟಕ ರಾಜ್ಯ ಸಾರಿಗೆ ಬಸ್ ನಿಲ್ದಾಣದ ಪಕ್ಕದಲ್ಲಿ ಆರಂಭಿಸಿರುವ ಇಂದಿರಾ ಕ್ಯಾಂಟೀನ್ ಅನ್ನು ಉದ್ಘಾಟಿಸಿದರು. ನಂತರ ಉಪ್ಪಿಟ್ಟು ಕೇಸರಿ ಬಾತ್ ರುಚಿ ನೋಡಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳುವ ಮೂಲಕ ಬಡ ಜನತೆಗೆ ಇಷ್ಟವಾಗುವ ರೀತಿ ಊಟ-ಉಪಹಾರ ನೀಡಬೇಕು ಎಂದು ಸೂಚಿಸಿದರು. ಬಳಿಕ ಜಿಲ್ಲಾಡಳಿತ ಭವನದ ಆವರಣದಲ್ಲಿ ಬಸವೇಶ್ವರ ಮೂರ್ತಿ ಅನಾವರಣ ಮಾಡಿದರು. ಇದೇ ವೇಳೆ ಕನಕ, ಭಗೀರಥ, ವಾಲ್ಮೀಕಿ ಪ್ರತಿಮೆ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ