ಕನ್ನಡಪ್ರಭ ವಾರ್ತೆ ಕೆಂಗೇರಿ
ಮತ ನೀಡಿದ ಕ್ಷೇತ್ರದ ಅಭಿವೃದ್ಧಿ ಅನುದಾನ ಪಡೆಯುವುದಕ್ಕೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡುವುದು ತಪ್ಪಾ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಪ್ರಶ್ನಿಸಿದ್ದಾರೆ.
ಕೆಂಗೇರಿ ಉಪನಗರದ ಬ್ರಾಹ್ಮಣ ಮಹಾಸಭಾದ ಗಾಯತ್ರಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ‘ಕೆಂಗೇರಿ ಸಂಭ್ರಮ’ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೇರೆ ಶಾಸಕರಂತೆ ಕದ್ದುಮುಚ್ಚಿ ಭೇಟಿ ಮಾಡಿಲ್ಲ. ರಾಜಾರೋಷವಾಗಿ ಭೇಟಿ ಮಾಡಿ ನೂರಾರು ಕೋಟಿ ರು. ಸರ್ಕಾರದಿಂದ ಅನುದಾನ ಪಡೆದು ಕ್ಷೇತ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ ಎಂದರು.
ಇನ್ನೆರಡು ತಿಂಗಳಿನಲ್ಲಿ ಕ್ಷೇತ್ರದ ಎಲ್ಲ ಮನೆಗಳಿಗೆ ಕಾವೇರಿ ನೀರು, 450 ಹಾಸಿಗೆ ಸಾಮರ್ಥ್ಯದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ರೈಲ್ವೆ ಮೇಲ್ಸೇತುವೆ, ಮಂಚನಬೆಲೆ ಜಲಾಶಯದಿಂದ ಕುಡಿಯುವ ನೀರಿನ ಕಾಮಗಾರಿಯನ್ನು ಮುಕ್ತಾಯಗೊಳಿಸುತ್ತೇವೆ. ಆ ನಂತರ ಅಂತ್ಯೋದೆಯ ಭವನಕ್ಕೆ ಬರುತ್ತೇನೆ. ಅಲ್ಲಿಯೇ ನನ್ನ ಅಂತ್ಯ ಹಾಡುವಿರಂತೆ ಎಂದು ತಮ್ಮ ವಿರೋಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಂ.ಶಿವಕುಮಾರ್ ಮಾತನಾಡಿದರು.ಕಾಂಗ್ರೆಸ್ ಮುಖಂಡ ಬಿ.ಆರ್.ಶಿವಮಾದಯ್ಯ, ಬಿಜೆಪಿ ಮುಖಂಡ ಶಿವಕುಮಾರ್ ಗೌಡ, ಕೇಬಲ್ ಎಂ.ಹರೀಶ್ ಕುಮಾರ್ ಮಾತನಾಡಿದರು. ಪಾಲಿಕೆ ಮಾಜಿ ಸದಸ್ಯ ಆರ್ಯ ಶ್ರೀನಿವಾಸ್, ಜಿ.ವಿ.ಸುರೇಶ್, ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಕಾರ್ಮಿಕ ಮೋರ್ಚಾದ ಮಾಜಿ ಅಧ್ಯಕ್ಷ ಸೂಲಿಕೆರೆ ವಿಜಯ್ ಕುಮಾರ್, ತಾಪಂ ಮಾಜಿ ಅಧ್ಯಕ್ಷ ಬಿ.ಕೃಷ್ಣಪ್ಪ, ಬಿ.ಅನಿಲ್ ಕುಮಾರ್, ಕೆ.ಆರ್.ಮೂರ್ತಿ ಇದ್ದರು.