ಸಿಎಂ ಭಂಡತನ ಬಿಟ್ಟು ರಾಜೀನಾಮೆ ನೀಡಲಿ: ದೊಡ್ಡನಗೌಡ ಪಾಟೀಲ್

KannadaprabhaNewsNetwork | Published : Oct 3, 2024 1:26 AM

ಸಾರಾಂಶ

ರಾಜ್ಯ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಈ ಹಿಂದಿನ ಯಾವ ಸರ್ಕಾರವೂ ಈ ರೀತಿಯಾಗಿ ನಡೆದುಕೊಂಡಿರಲಿಲ್ಲ.

- ರಾಜೀನಾಮೆ ನೀಡದಿದ್ದರೆ ಬಿಡುವುದಿಲ್ಲ

- ಕಾಂಗ್ರೆಸ್ ಸರ್ಕಾರದಿಂದ ದ್ವೇಷದ ರಾಜಕಾರಣ

ಕನ್ನಡಪ್ರಭ ವಾರ್ತೆ ಕೊಪ್ಪಳ

ಮುಡಾ ಹಗರಣದಲ್ಲಿ ಈಗಾಗಲೇ ಎಫ್ಐಆರ್ ಆಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಂಡತನ ಪ್ರದರ್ಶನ ಮಾಡದೆ ಕೂಡಲೇ ರಾಜೀನಾಮೆ ನೀಡುವಂತೆ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಆಗ್ರಹಿಸಿದ್ದಾರೆ.

ನಗರದ ಮೀಡಿಯಾ ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ದುಬಾರಿ ವಾಚ್ ಗಿಫ್ಟ್‌ ಪಡೆದುಕೊಂಡ ಸಮಯದಲ್ಲಿಯೂ ಇದೇ ರೀತಿ ನಡೆದುಕೊಂಡಿದ್ದೀರಿ, ಈಗಲೂ ಅದೇ ರೀತಿ ಮಾಡುವುದನ್ನು ಬಿಟ್ಟು, ಕೂಡಲೇ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.

ಮುಡಾ ಹಗರಣದಲ್ಲಿ ಯಾವುದೇ ತಪ್ಪಾಗಿಲ್ಲ, ಹಗರಣ ಆಗಿಯೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ವಾದಿಸುತ್ತಿದ್ದರು. ಆದರೆ, ಈಗ ಏಕಾಏಕಿ ಅವರ ಪತ್ನಿಯವರೇ ಸೈಟ್ ವಾಪಸ್ಸು ನೀಡಿರುವುದಕ್ಕೆ ಏನು ಕಾರಣ ಎಂದು ಪ್ರಶ್ನಿಸಿ, ತಪ್ಪಾಗದಿದ್ದರೆ ಸೈಟ್ ವಾಪಸ್ಸು ನೀಡಿದ್ದು ಯಾಕೆ ಎಂದು ಕಿಡಿಕಾರಿದರು.ದ್ವೇಷದ ರಾಜಕಾರಣ:

ರಾಜ್ಯ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಈ ಹಿಂದಿನ ಯಾವ ಸರ್ಕಾರವೂ ಈ ರೀತಿಯಾಗಿ ನಡೆದುಕೊಂಡಿರಲಿಲ್ಲ. ಇಲ್ಲಸಲ್ಲದ ಕೇಸ್ ಹಾಕಿ, ತಮ್ಮ ಅಕ್ರಮ ಮುಚ್ಚಿಕೊಳ್ಳಲು ನೋಡುತ್ತದೆ. ನಾವು ದ್ವೇಷದ ರಾಜಕಾರಣ ಮಾಡಲ್ಲ ಎನ್ನುತ್ತಲೇ ಪ್ರತಿಪಕ್ಷದವರ ಮೇಲೆ ನಿತ್ಯವೂ ಒಂದಿಲ್ಲೊಂದು ಕೇಸ್ ಹಾಕುತ್ತಿದ್ದಾರೆ ಎಂದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬೆಳಗಾವಿಯಿಂದ ಹಮ್ಮಿಕೊಂಡಿರುವ ಪಾದಯಾತ್ರೆಯ ಬಗ್ಗೆ ಹೈಕಮಾಂಡ್ ಒಪ್ಪಿಗೆ ಇದ್ದಂತೆ ಇಲ್ಲ. ಒಪ್ಪಿಗೆಯಾದರೆ ರಾಜ್ಯಾಧ್ಯಕ್ಷ ವಿಜೇಯಂದ್ರ ಭಾಗವಹಿಸುತ್ತಾರೆ. ಭಿನ್ನಮತದ ಬಗ್ಗೆ ಹೈಕಮಾಂಡ್ ನೋಡಿಕೊಳ್ಳುತ್ತದೆ. ಹೈಕಮಾಂಡ್ ನಾಯಕರು ಈ ಕುರಿತು ನಿರ್ಧಾರ ಮಾಡುತ್ತಾರೆ ಎಂದರು.

ಗಂಗಾವತಿ ವಿಭಾಗದ ಬದಲಿಗೆ ಕುಷ್ಟಗಿಯನ್ನೇ ವಿಭಾಗ ಮಾಡಲಿ ಎನ್ನುವುದು ನಮ್ಮ ಬೇಡಿಕೆ. ಈ ಕುರಿತು ಸಚಿವರು ಹೇಳಿಕೆ ನೀಡಿದ್ದಾರೆ. ಆದರೆ, ಇದಕ್ಕೆ ನಮ್ಮ ವಿರೋಧ ಇದ್ದು, ಕುಷ್ಟಗಿಯನ್ನೇ ವಿಭಾಗ ಮಾಡಿ, ಇಲ್ಲ ಕೊಪ್ಪಳ ವಿಭಾಗದಲ್ಲಿಯೇ ಇರಲಿ ಎಂದು ಹೇಳಿದರು.

ಜಿಲ್ಲಾದ್ಯಂತ ರಸ್ತೆಗಳು ಹದಗೆಟ್ಟು ಹೋಗಿವೆ. ಎಲ್ಲಿಯೂ ಸಹ ರಸ್ತೆ ಸರಿಯಾಗಿಲ್ಲ. ದುರಸ್ತಿ ಮಾಡುವುದಕ್ಕೆ ಸರ್ಕಾರದ ಬಳಿ ಹಣವೇ ಇಲ್ಲ. ಬಾಕಿ ಇರುವ ಬಹುತೇಕ ಕಾಮಗಾರಿಗಳ ಹಣ ನೀಡಲು ಆಗುತ್ತಿಲ್ಲ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ, ಮಹೇಶ ಹಾದಿಮನಿ ಇದ್ದರು.

Share this article