ಮೈಸೂರು ವಿಮಾನ ನಿಲ್ದಾಣ ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯ ಮನವಿ

KannadaprabhaNewsNetwork | Published : Apr 5, 2025 12:46 AM

ಸಾರಾಂಶ

ಮೈಸೂರು ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ರಾಜ್ಯ ಸರ್ಕಾರವು 2005ರ ಅ.6 ರಂದು ಒಪ್ಪಂದ ಮಾಡಿಕೊಂಡಿದೆ. ಒಪ್ಪಂದದ ನಿಯಮ ಬಿ (2) (ವಿ) ಪ್ರಕಾರ ಕಾರ್ಯನಿಯೋಜಕರು ವಿಮಾನ ನಿಲ್ದಾಣದ ವಿಸ್ತರಣೆಗಾಗಿ ಅಗತ್ಯವಿರುವ ಹೆಚ್ಚುವರಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಯಾವುದೇ ಋಣಭಾರವಿಲ್ಲದೆ ನಿಯೋಜಿತರಿಗೆ ಉಚಿತವಾಗಿ ವರ್ಗಾಯಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಶುಕ್ರವಾರ ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಕಿಂಜರಾಪು ರಾಮಮೋಹನ ನಾಯ್ಡು ಅವರನ್ನು ಭೇಟಿಯಾಗಿ ಮೈಸೂರು, ಕಲಬುರಗಿ, ವಿಜಯಪುರ ವಿಮಾನ ನಿಲ್ದಾಣಗಳ ಅಭಿವೃದ್ಧಿ ಕುರಿತು ಚರ್ಚೆ ನಡೆಸಿ ಮನವಿ ಸಲ್ಲಿಸಿದರು.

ಮೈಸೂರು ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ರಾಜ್ಯ ಸರ್ಕಾರವು 2005ರ ಅ.6 ರಂದು ಒಪ್ಪಂದ ಮಾಡಿಕೊಂಡಿದೆ. ಒಪ್ಪಂದದ ನಿಯಮ ಬಿ (2) (ವಿ) ಪ್ರಕಾರ ಕಾರ್ಯನಿಯೋಜಕರು ವಿಮಾನ ನಿಲ್ದಾಣದ ವಿಸ್ತರಣೆಗಾಗಿ ಅಗತ್ಯವಿರುವ ಹೆಚ್ಚುವರಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಯಾವುದೇ ಋಣಭಾರವಿಲ್ಲದೆ ನಿಯೋಜಿತರಿಗೆ ಉಚಿತವಾಗಿ ವರ್ಗಾಯಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅಗತ್ಯವಿರುವ ಭೂಮಿಯನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಉಚಿತವಾಗಿ ವರ್ಗಾಯಿಸಲಾಗಿದೆ. ಒಪ್ಪಂದದ ಷರತ್ತಿನ ಪ್ರಕಾರ, ನಿಯೋಜಿತರು ಮೈಸೂರು ವಿಮಾನ ನಿಲ್ದಾಣದ ಹೆಚ್ಚಿನ ಅಭಿವೃದ್ಧಿಯ ಬಂಡವಾಳ ವೆಚ್ಚ, ಮಾರ್ಪಾಡುಗಳು, ಬಲಪಡಿಸುವಿಕೆ ಮತ್ತು ಮೇಲ್ದರ್ಜೆಗೇರಿಸುವ ಎಲ್ಲಾ ವೆಚ್ಚಗಳನ್ನು ಭರಿಸಬೇಕು. ಅದರಂತೆ, ಮೈಸೂರು ವಿಮಾನ ನಿಲ್ದಾಣದ ವಿಸ್ತರಣೆಗೆ ಅಗತ್ಯವಿರುವ ಬಂಡವಾಳ ಹಾಗೂ ಇನ್ನಿತರೆ ವೆಚ್ಚಗಳನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವೇ ಭರಿಸಬೇಕಿದೆ ಎಂದು ಅವರು ಹೇಳಿದರು.

ಈ ಹಿನ್ನೆಲೆಯಲ್ಲಿ ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ ಅಗತ್ಯವಿರುವ 240 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರವು 319.14 ಕೋಟಿಗಳ ಅನುದಾನ ಬಿಡುಗಡೆಗೊಳಿಸಿದೆ. ಭೂ ಸ್ವಾಧೀನ ಪ್ರಕ್ರಿಯೆಯು ಅಂತಿಮ ಹಂತದಲ್ಲಿದೆ ಎಂದು ಅವರು ತಿಳಿಸಿದ್ದಾರೆ.

ನವೆಂಬರ್ 2024ರಲ್ಲಿ ಕಾವೇರಿ ನೀರಾವರಿ ನಿಗಮ ನಿಯಮಿತವು(ಸಿ. ಎನ್.ಎನ್.ಎಲ್) ವಿಮಾನ ನಿಲ್ದಾಣ ವಿಸ್ತರಣೆ ಪ್ರದೇಶದಲ್ಲಿ ಎರಡು ಕಂದಕಗಳ ಮತ್ತು 7 ಕಾಲುವೆಗಳ ಸ್ಥಳಾಂತರಕ್ಕೆ ವರದಿ ಸಲ್ಲಿಸಿದ್ದು, ಇದಕ್ಕೆ 70 ಕೋಟಿ ರೂ. ವೆಚ್ಚವಾಗಲಿದೆ. ಅಂತೆಯೇ, ಕೆ. ಪಿ.ಟಿ.ಸಿಎಲ್ ಕೂಡ ಹೈ-ಟೆನ್ಷನ್ ಲೈನ್ ಗಳ ಮತ್ತು ಸೆಸ್ಕ್‌ ನ ಲೋ ಟೆನ್ಶನ್ ವೈರ್ ಗಳ ಮಾರ್ಗ ಬದಲಾವಣೆಗೆ 31.82 ಕೋಟಿಗಳ ಅಂದಾಜು ವೆಚ್ಚವಾಗಲಿದೆ ಎಂದು ತಿಳಿಸಿದ್ದು, ಒಟ್ಟಾರೆ ಈ ಕಾಮಗಾರಿಗೆ 101.82 ಕೋಟಿ ರೂ.ಗಳ ಅನುದಾನದ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಆದ್ದರಿಂದ, ರಾಜ್ಯ ಸರ್ಕಾರವು ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ 240 ಎಕರೆ ಭೂ ಸ್ವಾಧೀನಕ್ಕೆ ತಗಲುವ 319.14 ಕೋಟಿ ರೂ.ಗಳ ಭೂ ಸ್ವಾಧೀನದ ವೆಚ್ಚವನ್ನು ಭರಿಸಿದ್ದು, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ವಿಸ್ತರಣೆಯ ಅಂದಾಜು ವೆಚ್ಚ 101.84 ಕೋಟಿಗಳ ಯುಟಿಲಿಟಿ ಸ್ಥಳಾಂತರದ ಯೋಜನೆಯನ್ನು ರೂಪಿಸಿ ಶ್ರೀಘ್ರವಾಗಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಅವರು ಕೋರಿದ್ದಾರೆ.

Share this article