- ನಾಳೆ ಸಂಪುಟದಲ್ಲಿ ಮಂಡನೆ: ಸಿಎಂ । ಸುಲಿಗೆಕೋರ ಸಂಸ್ಥೆಗಳಿಗೆ ಮೂಗುದಾರಕ್ಕೆ ಸರ್ಕಾರ ಸಜ್ಜು
ಸುಗ್ರೀವಾಜ್ಞೆಯಲ್ಲಿ ಏನಿರಲಿದೆ?- ರಾಜ್ಯದಲ್ಲಿ ವಹಿವಾಟು ನಡೆಸುವ ಪ್ರತಿ ಮೈಕ್ರೋ ಫೈನಾನ್ಸ್ ಕೂಡ ನೋಂದಣಿ ಆಗಿರಬೇಕು- ಸಾಲ ವಸೂಲಿ ಹೆಸರಿನಲ್ಲಿ ಕಾನೂನುಬಾಹಿರವಾಗಿ ಸಾಲಗಾರರನ್ನು ಶೋಷಣೆ ಮಾಡುವಂತಿಲ್ಲ- ಮೂರನೇ ಅಥವಾ ಹೊರಗುತ್ತಿಗೆ ಪಡೆದ ವ್ಯಕ್ತಿ ಮೂಲಕ ಸಾಲ ವಸೂಲಿ ಪ್ರಕ್ರಿಯೆ ನಡೆಸುವಂತಿಲ್ಲ- ಸಾಲಗಾರರಿಗೆ ಕಿರುಕುಳ ನೀಡಿದರೆ ಜಾಮೀನುರಹಿತ ಕೇಸ್. ಸಂಜೆ 6ರ ಬಳಿಕ ಸಾಲ ವಸೂಲು ಇಲ್ಲ- ರಿಸರ್ವ್ ಬ್ಯಾಂಕ್ ನಿಯಮದಂತೆ ಶೇ.17.05ಕ್ಕಿಂತ ಹೆಚ್ಚಿನ ಬಡ್ಡಿಯನ್ನು ಸಂಸ್ಥೆಗಳು ವಿಧಿಸುವಂತಿಲ್ಲ--
ಆಂಧ್ರಪ್ರದೇಶ ಮಾದರಿ ಕಾಯ್ದೆ- 2011ರಲ್ಲಿ ಆಂಧ್ರದಲ್ಲಿ ಮೈಕ್ರೋಫೈನಾನ್ಸ್ ನಿಯಂತ್ರಣಕ್ಕೆ ಕಾಯ್ದೆ ತರಲಾಗಿತ್ತು- ಹಣಕಾಸು, ಗೃಹ, ಕಂದಾಯ, ಕಾನೂನು ಅಧಿಕಾರಿಗಳಿಂದ ಆಂಧ್ರ ಕಾಯ್ದೆ ಅಧ್ಯಯನ- ಅದನ್ನೇ ಮಾದರಿಯಾಗಿಟ್ಟುಕೊಂಡು ರಾಜ್ಯದಲ್ಲೂ ಕಾನೂನು ಜಾರಿಗೆ ನಿರ್ಧಾರ- ಸದ್ಯ ಅಧಿವೇಶನ ಇಲ್ಲ. ಹೀಗಾಗಿ ಸಂಪುಟದಲ್ಲಿ ಸುಗ್ರೀವಾಜ್ಞೆ ಮಂಡಿಸಿ ಒಪ್ಪಿಗೆ
---ಸುರಪುರದಲ್ಲಿ ವ್ಯಕ್ತಿ ಆತ್ಮಹತ್ಯೆ - ಮತ್ತಿಬ್ಬರಿಂದ ಆತ್ಮಹತ್ಯೆ ಯತ್ನಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಾಲ ವಸೂಲಿಗಾರರ ಅಟ್ಟಹಾಸ ಮುಂದುವರಿದಿದ್ದು, ಕಿರುಕುಳಕ್ಕೆ ಬೇಸತ್ತು ಯಾದಗಿರಿ ಜಿಲ್ಲೆ ಸುರಪುರದಲ್ಲಿ ಮಲ್ಲು ಕಾಳಿಕಾರ್ ಎಂಬುವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮಧ್ಯೆ, ಕಿರುಕುಳಕ್ಕೆ ಬೇಸತ್ತು ಮಂಗಳವಾರ ಮಂಡ್ಯ ಹಾಗೂ ಶಿವಮೊಗ್ಗದಲ್ಲಿ ಇಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.--ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದಲ್ಲಿ ಹೆಚ್ಚುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳಕ್ಕೆ ಅಂಕುಶ ಹಾಕಲು ರಾಜ್ಯ ಸರ್ಕಾರ ಇದೀಗ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಕಿರುಕುಳ ತಡೆಗೆ ಸುಗ್ರೀವಾಜ್ಞೆ ಮೂಲಕ ಹೊಸ ಕಾಯ್ದೆ ಜಾರಿಗೊಳಿಸುವ ಸಂಬಂಧ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಿದೆ.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುವಾಗ ಈ ಸುಳಿವು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲಗಾರರನ್ನು ಶೋಷಣೆ ಮಾಡುವುದನ್ನು ತಡೆಯಲು ಕರ್ನಾಟಕ ರಾಜ್ಯ ಮೈಕ್ರೋಫೈನಾನ್ಸ್ ಸಂಸ್ಥೆಗಳ ನಿಯಂತ್ರಣ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗುತ್ತದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅದಕ್ಕೆ ಅನುಮೋದನೆ ನೀಡಲಾಗುವುದು ಎಂದು ತಿಳಿಸಿದರು.
ಆರ್‌ಬಿಐ ನಿಯಮ ಮೀರಿ ಹೆಚ್ಚುವರಿ ಬಡ್ಡಿಗೆ ಮೈಕ್ರೋಫೈನಾನ್ಸ್‌ಗಳು ಸಾಲ ನೀಡಿ, ನಂತರ ಸಾಲ ವಸೂಲಿ ನೆಪದಲ್ಲಿ ಸಾಲಗಾರರರಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರ ನಡುವೆಯೇ ಹಾವೇರಿ ಮಹಿಳೆಯರು ಮಾಂಗಲ್ಯ ಉಳಿಸಿ ಅಭಿಯಾನ ಆರಂಭಿಸಿ ಮುಖ್ಯಮಂತ್ರಿಗಳಿಗೆ ತಮ್ಮ ಮಾಂಗಲ್ಯ ಸರ ಕಳುಹಿಸಿದ್ದರು. ಅಲ್ಲದೆ, ಹಲವು ಸಾಲಗಾರರು ಆತ್ಮಹತ್ಯೆ ಮಾಡಿಕೊಳ್ಳುವುದು, ಮನೆ ಬಿಡುವುದು, ಸಾಲ ಮರುಪಾವತಿ ಮಾಡದವರನ್ನು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಮನೆಯಿಂದ ಹೊರಹಾಕುವಂಥ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.ಇದನ್ನು ಮನಗಂಡು ಸಾಲಗಾರರನ್ನು ಶೋಷಣೆ ಮಾಡುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಂಬಂಧ ಕಳೆದ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆಯನ್ನೂ ನಡೆಸಲಾಗಿತ್ತು. ಸಭೆಯಲ್ಲಿ ಸಾಲ ವಸೂಲಿ ನೆಪದಲ್ಲಿ ಸಾಲಗಾರರಿಗೆ ಕಿರುಕುಳ ನೀಡುವುದನ್ನು ತಡೆಯಲು ಹಾಗೂ ಬಲವಂತದ ಸಾಲ ವಸೂಲಿ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಲು ಅನುವಾಗುವಂತೆ ‘ಕರ್ನಾಟಕ ರಾಜ್ಯ ಮೈಕ್ರೋಫೈನಾನ್ಸ್ ಸಂಸ್ಥೆಗಳ ನಿಯಂತ್ರಣ ಕಾಯ್ದೆ’ಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ನಿರ್ಧರಿಸಲಾಗಿತ್ತು.
ಇದೀಗ ಅದಕ್ಕೆ ಸಂಬಂಧಿಸಿದ ಕಾಯ್ದೆಯ ಕರಡು ಸಿದ್ಧಗೊಂಡಿದ್ದು, ಅದರ ಆಧಾರದ ಮೇಲೆ ಅಂತಿಮ ಕಾಯ್ದೆ ಸಿದ್ಧಪಡಿಸಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಿ ಅನುಮೋದನೆ ನೀಡಲು ಸರ್ಕಾರ ಮುಂದಾಗಿದೆ.ಮುಂದಿನ ಸಂಪುಟ ಸಭೆಯಲ್ಲಿ ಒಪ್ಪಿಗೆ:
ಮೈಕ್ರೋ ಫೈನಾನ್ಸ್‌ಗಳಿಗೆ ಕಡಿವಾಣ ಹಾಕುವ ಸಂಬಂಧ 2011ರಲ್ಲೇ ಆಂಧ್ರದಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಗಳ (ಸಾಲ ನಿಯಂತ್ರಣ) ಕಾಯ್ದೆ ಜಾರಿಗೊಳಿಸಲಾಗಿದೆ. ಈ ಕಾಯ್ದೆಯನ್ನೇ ಮಾದರಿಯಾಗಿಟ್ಟುಕೊಂಡು, ರಾಜ್ಯದಲ್ಲೂ ಕಠಿಣ ಕಾನೂನು ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಈಗಾಗಲೇ ಹಣಕಾಸು ಇಲಾಖೆ, ಗೃಹ, ಕಂದಾಯ ಹಾಗೂ ಕಾನೂನು ಇಲಾಖೆ ಅಧಿಕಾರಿಗಳು ಆಂಧ್ರದ ಕಾನೂನನ್ನು ಅಧ್ಯಯನ ನಡೆಸಿ ಕಾಯ್ದೆಯ ಕರಡು ರೂಪಿಸಿದ್ದಾರೆ. ಅದನ್ನಾಧರಿಸಿ ಅಂತಿಮ ಕಾಯ್ದೆ ಸಿದ್ಧಪಡಿಸಿ ಮುಂದಿನ ಸಚಿವ ಸಂಪುಟ ಸಭೆ (ಜ.30ರಂದು ನಡೆಯಲಿದೆ)ಯಲ್ಲಿ ಮಂಡನೆಯಾಗಿ ಅನುಮೋದನೆ ಪಡೆಯಲಾಗುತ್ತದೆ.ಸದ್ಯ ವಿಧಾನಮಂಡಲ ಅಧಿವೇಶನ ನಡೆಯದ ಕಾರಣ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಸಚಿವ ಸಂಪುಟ ಸಭೆಯಲ್ಲೇ ತೀರ್ಮಾನ ತೆಗೆದುಕೊಳ್ಳಲಾಗುವುದು ಹಾಗೂ ನಂತರ ಅದನ್ನು ರಾಜ್ಯಪಾಲರ ಅನುಮೋದನೆಗಾಗಿ ಕಳುಹಿಸಲಾಗುತ್ತದೆ.ಹೊಸ ಕಾಯ್ದೆಯಲ್ಲಿ ಏನಿರಲಿದೆ?
ರಾಜ್ಯದಲ್ಲಿ ವಹಿವಾಟು ನಡೆಸುತ್ತಿರುವ ಪ್ರತಿಯೊಂದು ಮೈಕ್ರೋ ಫೈನಾನ್ಸ್ ಸಂಸ್ಥೆಯೂ ನೋಂದಣಿ ಆಗಿರಬೇಕು. ಕಾನೂನು ಬಾಹಿರವಾಗಿ ಸಾಲ ವಸೂಲಿ ಹೆಸರಲ್ಲಿ ಸಾಲಗಾರರನ್ನು ಶೋಷಣೆ ಮಾಡಬಾರದು. ಮೂರನೇ ವ್ಯಕ್ತಿ ಅಥವಾ ಹೊರಗುತ್ತಿಗೆ ಪಡೆದ ವ್ಯಕ್ತಿ ಮೂಲಕ ಸಾಲ ವಸೂಲಿ ಮಾಡುವಂತಿಲ್ಲ. ಸಾಲಗಾರರಿಗೆ ಕಿರುಕುಳ ನೀಡಿದರೆ ಜಾಮೀನು ರಹಿತ ಪ್ರಕರಣ ದಾಖಲು, ನೋಂದಣಿ ಇಲ್ಲದೆ ವಹಿವಾಟು ಮಾಡಿದವರಿಗೆ 3 ವರ್ಷವರೆಗೆ ಶಿಕ್ಷೆ ಮತ್ತು 1ಲಕ್ಷ ರು. ದಂಡ ವಿಧಿಸುವ ಬಗ್ಗೆ ಪ್ರಸ್ತಾಪಿತ ಕಾಯ್ದೆಯ ಕರಡಿನಲ್ಲಿ ಉಲ್ಲೇಖಿಸಲಾಗಿದೆ. ಅದನ್ನೇ ಅಂತಿಮ ಕಾಯ್ದೆಯಲ್ಲೂ ತಿಳಿಸಲಾಗುತ್ತದೆ. ಹಾಗೆಯೇ, ಆರ್‌ಬಿಐ ನಿಯಮದಂತೆ ಶೇ.17.05ಕ್ಕಿಂತ ಹೆಚ್ಚಿನ ಬಡ್ಡಿ ವಿಧಿಸುವಂತಿಲ್ಲ. ಅದನ್ನೂ ಈ ಕಾಯ್ದೆಯಲ್ಲಿ ತಿಳಿಸಲಾಗುತ್ತದೆ.ಅದರೊಂದಿಗೆ ಮೈಕ್ರೋಫೈನಾನ್ಸ್ ಸಂಸ್ಥೆಗಳು ಸಾಲ ನೀಡುವಾಗಲೇ ಮುಂಗಡವಾಗಿ ಬಡ್ಡಿ ಸಂಗ್ರಹಿಸುವಂತಿಲ್ಲ. ಆರು ಗಂಟೆ ಬಳಿಕ ಸಾಲ ವಸೂಲಾತಿಗೆ ತೆರಳುವಂತಿಲ್ಲ. ಮನೆಗೆ ಬೀಗ ಹಾಕುವಂಥ ಕ್ರಮ ಕೈಗೊಳ್ಳುವಂತಿಲ್ಲ. ಒಂದಕ್ಕಿಂತ ಹೆಚ್ಚು ಸ್ವಸಹಾಯ ಗುಂಪುಗಳಲ್ಲಿ ಸದಸ್ಯರಾಗಿರುವವರಿಗೆ ಎರಡು-ಮೂರು ಕಡೆ ಸಾಲ ನೀಡುವಂತಿಲ್ಲ. ಜತೆಗೆ ಒಂದು ಕುಟುಂಬಕ್ಕೆ ಮೂರಕ್ಕಿಂತ ಹೆಚ್ಚು ಸಾಲ ನೀಡುವಂತಿಲ್ಲ ಎಂಬ ನಿಯಮಗಳು ಕಾಯ್ದೆಯಲ್ಲಿ ಅಳವಡಿಸಲಾಗುತ್ತಿದೆ. ಅದರ ಜತೆಗೆ ಸಾಲಗಾರರು ಕಿರುಕುಳ ನೀಡುವುದು ಕಂಡು ಬಂದರೆ ಪೊಲೀಸರೇ ಸ್ವಯಂ ಪ್ರೇರಿತ ದೂರು ದಾಖಲಿಸಲೂ ಕಾಯ್ದೆಯಲ್ಲಿ ಅವಕಾಶ ನೀಡಲಾಗುತ್ತದೆ.
ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲಗಾರರನ್ನು ಶೋಷಣೆ ಮಾಡುವುದನ್ನು ತಡೆಯಲು ಕರ್ನಾಟಕ ರಾಜ್ಯ ಮೈಕ್ರೋಫೈನಾನ್ಸ್ ಸಂಸ್ಥೆಗಳ ನಿಯಂತ್ರಣ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗುತ್ತದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅದಕ್ಕೆ ಅನುಮೋದನೆ ನೀಡಲಾಗುವುದು- ಸಿದ್ದರಾಮಯ್ಯ, ಮುಖ್ಯಮಂತ್ರಿ--