ಕನ್ನಡಪ್ರಭ ವಾರ್ತೆ ಹಾಸನ
ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಕ್ರೀಡಾಂಗಣದಲ್ಲಿ ಇಂದು (ಡಿ.6) ಬೆಳಿಗ್ಗೆ ೧೧ ಗಂಟೆಗೆ ನಡೆಯಲಿರುವ ಸರ್ಕಾರದ ಸೇವೆಗಳ ಸಮರ್ಪಣಾ ಸಮಾವೇಶದ ಸಿದ್ಧತೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರು ಶುಕ್ರವಾರ ಪರಿಶೀಲಿಸಿದರು.ಕಾರ್ಯಕ್ರಮದ ವೇದಿಕೆ, ತಾಂತ್ರಿಕ ಸೌಲಭ್ಯಗಳು, ಸಾರ್ವಜನಿಕ ವ್ಯವಸ್ಥೆಗಳು, ಭದ್ರತಾ ಕ್ರಮಗಳು ಸೇರಿದಂತೆ ವಿವಿಧ ಆಯಾಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆಯುವ ಮೂಲಕ ಸಚಿವರು ಅಗತ್ಯ ಸೂಚನೆಗಳನ್ನು ನೀಡಿದರು. ಇನ್ನು ಕಾರ್ಯಕ್ರಮವು ಸರಿಯಾಗಿ ೧೧ ಗಂಟೆಗೆ ಪ್ರಾರಂಭ ಮಾಡುವಂತೆ ಸೂಚಿಸಿದರು. ಬೃಹತ್ ವೇದಿಕೆಯಲ್ಲಿ ೫೦ ಸಾವಿರಕ್ಕೂ ಹೆಚ್ಚಿನ ಜನರು ಪಾಲ್ಗೊಳ್ಳುವ ನಿರೀಕ್ಷೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಪೊಲೀಸ್ ಅಧೀಕ್ಷಕ ಮಹಮ್ಮದ್ ಸುಜೀತಾ, ಜಿಪಂ ಸಿಇಒ ಬಿ.ಆರ್. ಪೂರ್ಣಿಮಾ ಹಾಗೂ ವಿಧಾನ ಪರಿಷತ್ತು ಮಾಜಿ ಸದಸ್ಯ ಗೋಪಾಲಸ್ವಾಮಿ ಸೇರಿದಂತೆ ಹಲವು ಇಲಾಖೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.ಸವಲತ್ತು ಸಮರ್ಪಣಾ ಕಾರ್ಯಕ್ರಮ:
ಹೆಲಿಕಾಪ್ಟರ್ ಮೂಲಕ ಹಾಸನದ ಬೂವನಹಳ್ಳಿ ಹೆಲಿಪ್ಯಾಡ್‌ಗೆ ಬೆ. ೧೧.೩೦ಕ್ಕೆ ಆಗಮಿಸುವ ಮುಖ್ಯಮಂತ್ರಿ ಅವರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ವತಿಯಿಂದ ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಆಯೋಜಿಸಿರುವ ಸರ್ಕಾರಿ ಸೇವೆಗಳ ಸಮರ್ಪಣಾ ಸಮಾವೇಶ ಉದ್ಘಾಟನಾ ಕಾರ್ಯಕ್ರಮ ೫೦ ಸಾವಿರಕ್ಕೂ ಹೆಚ್ಚು ಕುಟುಂಬಗಳ ಸಂಭ್ರಮದ ಕ್ಷಣ ಕಂದಾಯ ಇಲಾಖೆ ದರಖಾಸ್ತು ಪೋಡಿ, ಪೌತಿಖಾತೆ, ಕಂದಾಯ ಗ್ರಾಮ ೯೪ಸಿ ಹಕ್ಕು ಪತ್ರಗಳ ವಿತರಣೆ ಮತ್ತು ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸವಲತ್ತು ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು.ನಂತರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಂಜೆ ೪ ಗಂಟೆಗೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳುವರು.
ನಗರವನ್ನು ಆವರಿಸಿದ ಫ್ಲೆಕ್ಸ್‌ಗಳು:ಇಂದು ನಡೆಯಲಿರುವ ಸರ್ಕಾರದ ಸೇವೆಗಳ ಸಮರ್ಪಣಾ ಸಮಾವೇಶದ ಹಿನ್ನೆಲೆಯಲ್ಲಿ ಹಾಸನ ನಗರ ರಾಜಕೀಯ ನಾಯಕರ ಫ್ಲೆಕ್ಸ್‌ಗಳಿಂದ ಕಂಗೊಳಿಸುತ್ತಿದೆ. ನಗರದೆಲ್ಲೆಡೆ ಹಾಕಲಾಗಿರುವ ಬೃಹತ್ ಫ್ಲೆಕ್ಸ್‌ಗಳು ಮತ್ತು ಕಟೌಟ್‌ಗಳಲ್ಲಿ ಕಾಂಗ್ರೆಸ್ ಮುಖಂಡರ ಜೊತೆಗೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರ ಭಾವಚಿತ್ರಗಳೂ ರಾರಾಜಿಸುತ್ತಿರುವುದು ಗಮನ ಸೆಳೆಯುತ್ತಿದೆ.
ಸಮಾವೇಶಕ್ಕೆ ಮುನ್ನವೇ ನಗರದಲ್ಲಿ ರಾಜಕೀಯ ತಾಪಮಾನ ಏರಿಕೆಯಾಗಿದೆ. ನಗರದ ಬಿ.ಎಂ.ರಸ್ತೆ, ಎನ್.ಆರ್. ವೃತ್ತ, ಡೇರಿ ವೃತ್ತ, ಮಹಾವೀರ ವೃತ್ತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ದೊಡ್ಡ ಗಾತ್ರದ ಫ್ಲೆಕ್ಸ್‌ಗಳು ಕಾಣಿಸಿಕೊಂಡಿವೆ. ಫ್ಲೆಕ್ಸ್‌ಗಳಲ್ಲಿ ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಸಂಸದ ಶ್ರೇಯಸ್ ಎಂ. ಪಟೇಲ್, ಶಾಸಕರು ಕೆ.ಎಂ. ಶಿವಲಿಂಗೇಗೌಡ, ಗೋಪಾಲಸ್ವಾಮಿ, ಹುಡಾ ಅಧ್ಯಕ್ಷ ಪಟೇಲ್ ಶಿವಪ್ಪ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವು ನಾಯಕರುಗಳ ಭಾವಚಿತ್ರಗಳು ಅಲಂಕರಿಸಿವೆ. ವಿಶೇಷವೆಂದರೆ, ಕಾಂಗ್ರೆಸ್ ಪಕ್ಷದ ಸಮಾವೇಶದ ಹೊರತಾಗಿಯೂ, ಜೆಡಿಎಸ್ ಮುಖಂಡ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ, ಶಾಸಕ ಎಚ್.ಪಿ. ಸ್ವರೂಪ್, ಮಾಜಿ ಶಾಸಕ ಎ. ಮಂಜು, ಸಿಮೆಂಟ್ ಮಂಜು, ಎಚ್.ಕೆ. ಸುರೇಶ್ ಸೇರಿದಂತೆ ಜೆಡಿಎಸ್ ನಾಯಕರ ಚಿತ್ರಗಳೂ ಬೃಹತ್ ಫ್ಲೆಕ್ಸ್‌ಗಳಲ್ಲಿ ಕಾಣಿಸಿಕೊಂಡಿವೆ. ಕೆಲವು ಕಡೆಗಳಲ್ಲಿ ಬಿಜೆಪಿ ನಾಯಕರ ಚಿತ್ರಗಳೂ ಸೇರಿಕೊಂಡಿರುವುದು ಸೋಜಿಗ. ಆದರೆ ಶನಿವಾರ ನಡೆಯುವ ಈ ಸಮಾವೇಶದಲ್ಲಿ ಜೆಡಿಎಸ್ ಮತ್ತು ಬಿಜೆಪಿಯ ಶಾಸಕರು ಹಾಗೂ ಮುಖಂಡರು ಪಾಲ್ಗೊಳ್ಳುವರಾ ಎಂಬುದು ಕುತೂಹಲ ಮೂಡಿದೆ.