ಸಿಎಂ ಸಿದ್ದರಾಮಯ್ಯ ಸಿಂಗಟಾಲೂರ ಯೋಜನೆಯ ಹರಿಕಾರ

KannadaprabhaNewsNetwork |  
Published : Dec 15, 2024, 02:03 AM IST
ಪೋಟೊ ಕ್ಯಾಪ್ಸನ್ :ಸಿಂಗಟಾಲೂರ ಏತನೀರಾವರಿ ಯೋಜನೆ ಮೂಲಕ ಡಂಬಳ‌ ಕೆರೆಯ ಭರ್ತಿಯಾದ ಹಿನ್ನೆಲೆಯಲ್ಲಿ ಅಡಕೆ ತೋಟ, ಬಾಳೆ ತೋಟ, ಡ್ರ್ಯಾಗನ್, ಪೇರಲ್ ತೋಟಗಳು ಬೆಳದು ನಿಂತಿರುವುದು.ಪೋಟೊ ಕ್ಯಾಪ್ಸನ್: ಡಂಬಳ ಕೆರೆಗೆ ಇತ್ತೀಚೆಗೆ ಭಾಗಿನ ಅರ್ಪಿಸಿ ಕೆರೆ ವಿಕ್ಷಣೆ ಮಾಡುತ್ತಿರುವ ಸಚಿವ ಎಚ್.ಕೆ.ಪಾಟೀಲ್, ಶಾಸಕ ಜಿ.ಎಸ್.ಪಾಟೀಲ್, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ.ಪೋಟೊ ಕ್ಯಾಪ್ಸನ್: ಗೋಣಿಬಸಪ್ಪ ಕೊರ್ಲಹಳ್ಳಿಪೋಟೊ ಕ್ಯಾಪ್ಸನ್: ಜಿ.ಎಸ್.ಪಾಟೀಲ್ ಶಾಸಕ | Kannada Prabha

ಸಾರಾಂಶ

2013ರ ಚುನಾವಣೆ ಪೂರ್ವ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿಯುವಂತೆ ಜನತೆ ಆಶೀರ್ವದಿಸಿದರೆ ಯೋಜನೆ ಪೂರ್ಣಗೊಳಿಸಿ ಈ ಭಾಗದ ರೈತರಿಗೆ ನೀರು ಒದಗಿಸುವ ಭರವಸೆ

ರಿಯಾಜಅಹ್ಮದ ಎಂ ದೊಡ್ಡಮನಿ ಡಂಬಳ

ಬರದ ನಾಡು ಗದಗ ಜಿಲ್ಲೆಯ ಮುಂಡರಗಿ ಹಾಗೂ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕುಗಳ ರೈತರ ಜೀವನಾಡಿಯಾಗಿರುವ ಸಿಂಗಟಾಲೂರ ಏತ ನೀರಾವರಿ ಯೋಜನೆ ಅರ್ಪಿಸಿ ರೈತರಿಗೆ ವರದಾನವಾಗಿಸಿದ ಕೀರ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾತ್ರರಾಗಿದ್ದಾರೆ.

ಅನಿಶ್ಚಿತತೆಯಿಂದ ಬರ ಮನೆ ಮಾಡಿ ಬತ್ತಿ ಬಿಕೋ ಎನ್ನುತ್ತಿರುವ ಕೆರೆಗಳು, ಬಿಕೋ ಎನ್ನುತ್ತಿದ್ದ ಹಳ್ಳಕೊಳ್ಳ, ಬರದ ಬವಣೆಯಿಂದ ಬೇಸತ್ತು ಗೋವಾ, ಬೆಂಗಳೂರು, ಮಂಗಳೂರು, ಕಾರವಾರಗೆ ಗುಳೆ ಹೋಗುವುದು ಅನಿವಾರ್ಯವಾಗಿತ್ತು. ಬರದ ಬವಣೆಯಿಂದ ಬೇಸತ್ತು ಕೆಲ ರೈತರು ಆತ್ಮಹತ್ಯೆ ದಾರಿ ಹಿಡಿದಿದ್ದರು. ಹೋರಾಟಗಾರರು, ರೈತ ಸಂಘಟನೆಗಳು ಹೋರಾಟ ಮಾಡಿ ಯೋಜನೆ ಜಾರಿಗೆ ಚಾತಕ ಪಕ್ಷಿಯಂತೆ ಕಾಯ್ದು ಕುಳಿತುಕೊಂಡಿದ್ದರು.

2013ರ ಚುನಾವಣೆ ಪೂರ್ವ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿಯುವಂತೆ ಜನತೆ ಆಶೀರ್ವದಿಸಿದರೆ ಯೋಜನೆ ಪೂರ್ಣಗೊಳಿಸಿ ಈ ಭಾಗದ ರೈತರಿಗೆ ನೀರು ಒದಗಿಸುವ ಭರವಸೆ ನೀಡಿದ್ದರು.

2013ರಲ್ಲಿ ಕಾಂಗ್ರೆಸ್‌ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಸಚಿವ ಎಚ್‌.ಕೆ. ಪಾಟೀಲ, ರೋಣ ಶಾಸಕ ಜಿ.ಎಸ್‌. ಪಾಟೀಲ ಹಾಗೂ ಅಂದು ಶಿರಹಟ್ಟಿ ಶಾಸಕರಾಗಿದ್ದ ರಾಮಕೃಷ್ಣ ದೊಡ್ಡಮನಿಯವರ ಆಸೆಯಂತೆ ಸಿಂಗಟಾಲೂರ ಹುಲಿಗುಡ್ಡ ಏತ ನೀರಾವರಿಯನ್ನು 6 ಟಿಎಂಸಿ‌ಯಿಂದ 18ಟಿಎಂಸಿಗೆ ಹೆಚ್ಚುವರಿಯಾಗಿ ಮೇಲ್ದರ್ಜೆಗೇರಿಸಿ ಯೋಜನೆ ಪೂರ್ಣಗೊಳಿಸಿದ್ದು ರಾಜಕೀಯ ಇತಿಹಾಸ ಪುಟದಲ್ಲಿ ಸೇರ್ಪಡೆಗೊಂಡಿದೆ.

ರೈತರಲ್ಲಿ ಹರ್ಷ: ಕೊಟ್ಟ ಮಾತು ಈಡೇರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಎಚ್‌.ಕೆ.ಪಾಟೀಲ ಈ ಭಾಗದ ಶಾಸಕ ಜಿ.ಎಸ್‌ ಪಾಟೀಲರ ಕಾರ್ಯ ಸಾಧನೆಗೆ ರೈತರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ಸಿಂಗಟಾಲೂರ ಯೋಜನೆ ಮೂಲಕ ಕಾಲುವೆ ನೀರು ಹರಿಸಿದ್ದರಿಂದ ಈ ಭಾಗದಲ್ಲಿ ಬತ್ತಿದ ಡಂಬಳ ಕೆರೆ, ತಾಮ್ರಗುಂಡಿ ಕೆರೆ, ಬಸಾಪೂರ ಕೆರೆ, ಹಿರೇವಡ್ಡಟ್ಟಿ ಕೆರೆ, ಜಂತ್ಲಿ ಶಿರೂರ ಕೆರೆ, ಪೇಠಾ ಆಲೂರ ಕೆರೆ, ಗದಗ ಭೀಷ್ಮ ಕೆರೆಗಳಲ್ಲಿ ನೀರು ತುಂಬಿ ಮೈದುಂಬಿ ನಿಂತಿವೆ. ಈಗ ಯೋಜನೆಯಿಂದ ಹಳ್ಳಕೊಳ್ಳ, ಬೋರವೆಲ್ಲ, ಬಾವಿಗಳಲ್ಲಿ ನೀರು ಚಿಮ್ಮುತ್ತಿವೆ.

ಹೊಸ ಬೆಳೆಗಳ ಅವಿಷ್ಕಾರ: ಸಿಂಗಟಾಲೂರ ಯೋಜನೆಯಡಿ ಕಾಲುವೆಗಳಲ್ಲಿ ನೀರು ಹರಿಯುತ್ತಿದ್ದಂತೆ ಡಂಬಳ ಭಾಗದ ರೈತರು ಈರುಳ್ಳಿ, ಗೋವಿನ ಜೋಳ, ಸೂರ್ಯಕಾಂತಿ ಬೆಳೆಗಳ ಜತೆಗೆ ತೋಟದ ಬೆಳೆಗಳಾದ ಪೇರಲೆ, ಬಾಳೆ, ಅಡಕೆ, ಕಬ್ಬು, ಡ್ರ್ಯಾಗನ್‌ ಸೇರಿದಂತೆ ತರಕಾರಿಗಳನ್ನು ಬೆಳೆದು ರೈತರು ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ.

ನೀರಾವರಿ ತಜ್ಞ ಕೆ.ಸಿ. ರಡ್ಡಿ ನೀಡಿದ್ದ ಸಿಂಗಟಾಲೂರ ಏತ ನೀರಾವರಿ ಯೋಜನೆ ನೀರು ಬಳಸಿಕೊಳ್ಳಲು ಅಡ್ಡಿ ಪಡಿಸುವ ವರದಿ ಧಿಕ್ಕರಿಸಿ ಅಂದು ಜಲಸಂಪನ್ಮೂಲ ಸಚಿವರಾಗಿದ್ದ ಎಚ್‌.ಕೆ. ಪಾಟೀಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ಜಿ.ಎಸ್‌. ಪಾಟೀಲರು ಈ ಭಾಗದ ರೈತರ ಪಾಲಿಗೆ ಭಗೀರಥರಾಗಿದ್ದಾರೆ.

ಮಾಜಿ ಸಚಿವ ಎಸ್.ಎಸ್. ಪಾಟೀಲ್ ಮತ್ತು ಎಂ.ಪಿ. ಪ್ರಕಾಶರ ಪರಿಶ್ರಮದ ಫಲವಾಗಿ ಸಿಂಗಟಾಲೂರು ಯೋಜನೆ ಪ್ರಾರಂಭವಾಗಿದ್ದು, ಮಾಜಿ ಮುಖ್ಯಮಂತ್ರಿಗಳಾಗಿದ್ದ ವೀರಪ್ಪ ಮೊಯ್ಲಿ, ಎಚ್.ಡಿ. ದೇವೇಗೌಡ, ಜೆ.ಎಚ್. ಪಾಟೀಲ್, ಎಸ್‌.ಎಂ. ಕೃಷ್ಣ, ಧರ್ಮಸಿಂಗ್‌, ಎಚ್.ಡಿ. ಕುಮಾರಸ್ವಾಮಿ, ಯಡಿಯೂರಪ್ಪ, ಸದಾನಂದಗೌಡ ಹೀಗೆ ಹಲವಾರು ಮುಖ್ಯಮಂತ್ರಿಗಳು ಬಂದರೂ ಕೂಡಾ ಯೋಜನೆ ಪೂರ್ಣಗೊಳಿಸಲು ಆಗದೆ ಇದ್ದಾಗ ಚುನಾವಣೆ ಪೂರ್ವದಲ್ಲಿ ಭರವಸೆ ಕೊಟ್ಟಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಯೋಜನೆ ಜಾರಿಗೆ ಸಾವಿರಾರು ಕೋಟಿ ಹಣ ಮೀಸಲಿರಿಸಿ 18ಟಿಎಂಸಿ ಬಳಕೆಗೆ ಅವಕಾಶ ಮಾಡಿಕೊಟ್ಟರು.

ರೈತರ ಹಿತ ಕಾಪಾಡಲು ಸಿಂಗಟಾಲೂರ ಏತ ನೀರಾವರಿ ಪ್ರಾರಂಭಿಸಿ ನುಡಿದಂತೆ ನಡೆದು ರೈತರ ಪಾಲಿನ ಭಗೀರಥರಾಗಿರುವ ಸಿಎಂ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಜರುಗುತ್ತಿರುವ ₹ 200 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುತ್ತಿರುವುದು ಪ್ರಶಂಸನೀಯ. ಕ್ಷೇತ್ರದ ರಸ್ತೆ, ಕೆರೆ, ಶಾಲಾ, ಆಸ್ಪತ್ರೆಗಳ ಅಭಿವೃದ್ಧಿಗೆ ಮುಂದಿನ ದಿನಮಾನಗಳಲ್ಲಿ ಆದ್ಯತೆ ನೀಡಲಾಗುವುದು ಎಂದು ರೋಣ ಶಾಸಕ ಜಿ.ಎಸ್.ಪಾಟೀಲ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಣಿ ಚನ್ನಮ್ಮ ನಾಟ್ಯ ಮಂದಿರ ಶೀಘ್ರ ಪ್ರಾರಂಭಿಸಿ
ಗುರಿ ಸಾಧಿಸಲು ಕಠಿಣ ಏಕಾಗ್ರತೆ ಅಗತ್ಯ