ಕನ್ನಡಪ್ರಭ ವಾರ್ತೆ ಬೆಳಗಾವಿ
ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಬ್ರಿಟಿಷರು, ಫ್ರೆಂಚರು, ಮೊಘಲರು ನಮ್ಮನ್ನು ಒಡೆದು ಆಳಿದರು. ಬ್ರಿಟೀಷರ ವಿರುದ್ಧ ವಿರೋಚಿತವಾಗಿ ಹೋರಾಡಿದ ಸಂಗೊಳ್ಳಿ ರಾಯಣ್ಣನನ್ನು ಮೋಸದಿಂದ ಹಿಡಿದು ಕೊಟ್ಟವರು ನಮ್ಮವರೇ. ರಾಯಣ್ಣ ದೇಶಭಕ್ತಿಗೆ ಮಾದರಿಯಾದರೆ, ರಾಯಣ್ಣನನ್ನು ಮೋಸದಿಂದ ಬ್ರಿಟಿಷರಿಗೆ ಹಿಡಿದುಕೊಟ್ಟವರು ದೇಶದ್ರೋಹಿಗಳು ಎಂದು ಜರಿದರು.
ದೇಶಭಕ್ತಿ ಎಂದರೆ ದೇಶದ ಜನರನ್ನು ಪ್ರೀತಿಸುವುದು. ಜಾತಿ-ಧರ್ಮದ ಹೆಸರಲ್ಲಿ ದೇಶದ ಜನರನ್ನೇ ದ್ವೇಷಿಸುವವರು ದೇಶಭಕ್ತರಾಗಿರಲು ಸಾಧ್ಯವೇ ಇಲ್ಲ. ಶರಣಶ್ರೇಷ್ಠ ಬಸವಣ್ಣನವರು, ಸಂವಿಧಾನ ರಚಿಸಿದ ಅಂಬೇಡ್ಕರ್ ಅವರು ಕೂಡ ಜಾತಿ ತಾರತಮ್ಯ ಇಲ್ಲದ ಮನುಷ್ಯ ಪ್ರೇಮವನ್ನು ಸಾರಿದರು. ರೈತರು, ಶಿಕ್ಷಕರು, ಸೈನಿಕರು ಈ ದೇಶವನ್ನು ಒಳಗಿನಿಂದ ಮತ್ತು ಹೊರಗಿನಿಂದ ಕಾಯುತ್ತಿರುವ ಸೈನಿಕರು. ಅನ್ನ ಬೆಳೆಯುವ ರೈತ ಕೂಡ ದೇಶ ರಕ್ಷಣೆಯ ಸೈನಿಕ ಇದ್ದ ಹಾಗೆ. ರೈತರ ಏಳಿಗೆಗಾಗಿ ಹಸಿರು ಕ್ರಾಂತಿಯನ್ನು ಈ ದೇಶದಲ್ಲಿ ನಡೆಸಿದ್ದು ಕಾಂಗ್ರೆಸ್ ಪಕ್ಷ ಎಂದರು.ಸಂಗೊಳ್ಳಿ ರಾಯಣ್ಣ ಹುಟ್ಟಿದ್ದು ಆ.15ರಂದು. ಇದೇ ದಿನ ದೇಶಕ್ಕೆ ಸ್ವಾತಂತ್ರ್ಯ ಬಂತು. ರಾಯಣ್ಣ ಹುತಾತ್ಮ ಆಗಿದ್ದು ಜ.26. ಇದು ಗಣರಾಜ್ಯೋತ್ಸವ ದಿನ ಎಂಬುದು ಕಾಕತಾಳೀಯ. ಸಂಗೊಳ್ಳಿ ರಾಯಣ್ಣನ ದೇಶಭಕ್ತಿ ಮತ್ತು ಹೋರಾಟದ ಛಲ ಹಾಗೂ ತ್ಯಾಗ ಶಾಶ್ವತಗೊಳಿಸುವ ಕಾರಣದಿಂದ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ನಮ್ಮ ಸರ್ಕಾರದ ಅವಧಿಯಲ್ಲಿ ರಚಿಸಲಾಯಿತು. ಇದರಿಂದ ಇಡೀ ಕ್ಷೇತ್ರ ಹಲವು ದಿಕ್ಕುಗಳಿಂದ ಅಭಿವೃದ್ಧಿ ನಡೆಯುತ್ತಿದೆ. ಇಲ್ಲಿನ ಸೈನಿಕ ಶಾಲೆಗೆ ಶಂಕುಸ್ಥಾಪನೆ ನಾನೇ ನೆರವೇರಿಸಿದ್ದೆ. ಈಗ 250 ಮಕ್ಕಳು ಅಚ್ಚುಕಟ್ಟಾಗಿ ಸೈನಿಕ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕನ್ನಡಿಗರಿಗೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎನ್ನುವ ಪ್ರಧಾನಿ ಮೋದಿ ಅವರ ಮಾತನ್ನು ವ್ಯಂಗ್ಯವಾಡಿದ ಸಿದ್ದರಾಮಯ್ಯ, ಐದಕ್ಕೆ ಐದೂ ಗ್ಯಾರಂಟಿ ಸರ್ಕಾರ ಬಂದು 7 ತಿಂಗಳಲ್ಲೇ ಜಾರಿ ಆಗಿದೆ. ರಾಜ್ಯ ಆರ್ಥಿಕವಾಗಿ ಇನ್ನಷ್ಟು ಸದೃಢವಾಗಿದೆ ಎಂದು ಹೇಳಿದರು.