ಸಿಎಂ ಸಿದ್ದರಾಮಯ್ಯ 16ನೇ ಬಜೆಟ್‌ ಸಮೃದ್ಧಿ ಸಂಕೇತ

KannadaprabhaNewsNetwork | Published : Mar 8, 2025 12:32 AM

ಸಾರಾಂಶ

ಕಾಂಗ್ರೆಸ್ ಪಕ್ಷ 2013ರಿಂದ 2018 ರವರೆಗಿನ ಅವಧಿ ಮತ್ತು 2023 ರಿಂದ ಆರಂಭವಾದ ಸರ್ಕಾರದ ಅವಧಿಯಲ್ಲಿ ನಾವು ಪ್ರಣಾಳಿಕೆಯಲ್ಲಿ ನೀಡಿದಂತೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಎಂದು ಕಾಂಗ್ರೆಸ್‌ ಮುಖಂಡರು ತಿಳಿಸಿದ್ದಾರೆ.

- ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿದೆ ಎಂದು ಬಜೆಟ್‌ ಸ್ವಾಗತಿಸಿರುವ ಕಾಂಗ್ರೆಸ್‌ ಮುಖಂಡರು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಾಂಗ್ರೆಸ್ ಪಕ್ಷ 2013ರಿಂದ 2018 ರವರೆಗಿನ ಅವಧಿ ಮತ್ತು 2023 ರಿಂದ ಆರಂಭವಾದ ಸರ್ಕಾರದ ಅವಧಿಯಲ್ಲಿ ನಾವು ಪ್ರಣಾಳಿಕೆಯಲ್ಲಿ ನೀಡಿದಂತೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಎಂದು ಕಾಂಗ್ರೆಸ್‌ ಮುಖಂಡರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ 16ನೇ ಬಜೆಟ್ ಸಮೃದ್ಧಿಯ ಪ್ರತೀಕವಾಗಿದೆ ಎಂದು ಅಭಿಪ್ರಾಯ ಪಟ್ಟಿರುವ ಅವರು ಬಿಜೆಪಿಯವರಿಗೆ ನಾಚಿಕೆಯಾಗಬೇಕು. ನಾವು ಕೊಟ್ಟ ಮಾತುಗಳನ್ನು ಉಳಿಸಿಕೊಂಡಿದ್ದೇವೆ. ಅವರ ಕಾಲದ ಬಜೆಟ್ ರೀತಿ ನಮ್ಮದು ಇರುವುದಿಲ್ಲ. ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಏನೂ ಕೊಡುಗೆ ನೀಡಿಲ್ಲ. ಕರ್ನಾಟಕ ಉಳಿಸಿ ಎಂದು ಹೇಳುವುದಕ್ಕೆ ಅವರಿಗೆ ನೈತಿಕತೆಯಿಲ್ಲ. ನಾವು ನಮ್ಮ ಜನರನ್ನು ಕಾಪಾಡುತ್ತೇವೆ, ಕಾಪಾಡಿದ್ದೇವೆ ಎಂದಿದ್ದಾರೆ.

ದಾವಣಗೆರೆ ಜಿಲ್ಲಾ ಆಸ್ಪತ್ರೆ ಸೇರಿದಂತೆ ಇತರೆ ಜಿಲ್ಲೆಗಳ ಒಟ್ಟು 8 ತಾಲ್ಲೂಕು ಆಸ್ಪತ್ರೆಗಳನ್ನು ₹650 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲಾಗಿದೆ ಇದು ಉತ್ತಮವಾಗಿದೆ. ಬಂಜಾರ ಸಮುದಾಯದ ಪ್ರಮುಖ ಧಾರ್ಮಿಕ ಸ್ಥಳವಾದ ದಾವಣಗೆರೆ ಜಿಲ್ಲೆಯ ಸಂತ ಸೇವಾಲಾಲ್ ಪುಣ್ಯಕ್ಷೇತ್ರವಾದ ಸೂರಗೊಂಡನಕೊಪ್ಪದಲ್ಲಿ ಒಂದು ವಸತಿ ಶಾಲೆಯನ್ನು ಕೈಸ್ ವತಿಯಿಂದ ಪ್ರಾರಂಭಿಸಲಾಗುತ್ತಿದೆ ಎಂದಿದ್ದಾರೆ.

ಅಲ್ಲದೇ, ದಾವಣಗೆರೆಯ ಕೊಂಡಜ್ಜಿಯ ಪರಿಸರದಲ್ಲಿ ಸ್ಥಾಪಿಸಲಾಗಿರುವ ವೃತ್ತಿರಂಗಭೂಮಿ ರಂಗಾಯಣದಲ್ಲಿ ಮೂಲಸೌಕರ್ಯ, ವೃತ್ತಿ ರಂಗಾಯಣ ಸಮುಚ್ಛಯ ಹಾಗೂ ಥಿಯೇಟರ್ ಮ್ಯೂಸಿಯಂ ನಿರ್ಮಾಣಕ್ಕೆ ಸಿದ್ದರಾಮಯ್ಯ ಬಜೆಟ್‌ನಲ್ಲಿ ₹3 ಕೋಟಿ ತೆಗೆದಿರಿಸಿರುವುದು ಸ್ವಾಗತಾರ್ಹ ಎಂದಿದ್ದಾರೆ.

ಜಗಳೂರು ಕೆರೆ ತುಂಬಿಸುವ ಯೋಜನೆ, ಹೊನ್ನಾಳಿಯ ಬೆನಕನಹಳ್ಳಿ ಗೋವಿನಕೋವಿ ಮತ್ತು ಹನುಮಸಾಗರ ಕೆರೆ ತುಂಬಿಸುವ ಯೋಜನೆಗೆ ಅನುದಾನ ತೆಗೆದಿರಿಸಿರುವುದು ಹಾಗೂ ರಾಜ್ಯ ಸರ್ಕಾರವು ರೈಲ್ವೆ ಸಹಯೋಗದೊಂದಿಗೆ ತುಮಕೂರು- ದಾವಣಗೆರೆ ಸೇರಿದಂತೆ 9 ವಿವಿಧ ರೈಲ್ವೆ ಯೋಜನೆಗಳಿಗೆ ಮಂಜೂರಾತಿ ನೀಡಿರುವುದು ನೋಡಿದರೆ ರಾಜ್ಯ ಮತ್ತು ಜಿಲ್ಲೆಯನ್ನು ಸಮೃದ್ಧಿಯತ್ತ ನಡೆಸುತ್ತಿರುವುದು ಮನಗಾಣಬಹುದು ಎಂದು ತಿಳಿಸಿದ್ದಾರೆ.

ಪ್ರಸಕ್ತ ವರ್ಷದಿಂದ ದಾವಣಗೆರೆ ಕೇಂದ್ರ ವಲಯದಲ್ಲಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳಗಳನ್ನು ಸ್ಥಾಪನೆ ದಾವಣಗೆರೆ ಜಿಲ್ಲೆ ವಿದ್ಯುನ್ಮಾನ ಕ್ಯಾಮರಾ ಅಳವಡಿಕೆಗೆ ಮಂಜೂರಾತಿ ದೊರೆತಿದೆ. ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲು ಕಟ್ಟಡ ಮತ್ತುಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ರಾಜ್ಯದ 31 ಜಿಲ್ಲೆಗಳಲ್ಲಿ 06 ನೇ ತರಗತಿಯಿಂದ 12ನೇ ತರಗತಿಯವರೆಗಿನ ವಸತಿ ಶಾಲೆಗಳ ನಿರ್ಮಾಣ, ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರಿಗೆ ಹಾಗೂ ಬಿಸಿಯೂಟ ಕಾರ್ಯಕರ್ತರಿಗೆ ವೇತನ ಹೆಚ್ಚಳ, ನಿವೃತ್ತ ಪತ್ರಕರ್ತರಿಗೆ ಗೌರವ ಸಂಭಾವನೆ ಹೆಚ್ಚಳ, ಪತ್ರಕರ್ತರಿಗೆ ಆರೋಗ್ಯ ಸಂಜೀವಿನಿ ಯೋಜನೆ ಸೇರಿದಂತೆ ಹೀಗೆ ಎಲ್ಲ ವಲಯಕ್ಕೂ ಈ ಬಜೆಟ್ ಪೂರಕವಾಗಿ ಸ್ಪಂದಿಸಿದೆ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ತಿಳಿಸಿದ್ದಾರೆ.

- - - -7ಕೆಡಿವಿಜಿ34: ಡಾ.ಶಾಮನೂರು ಶಿವಶಂಕರಪ್ಪ

-7ಕೆಡಿವಿಜಿ35: ಎಸ್.ಎಸ್.ಮಲ್ಲಿಕಾರ್ಜುನ್

-7ಕೆಡಿವಿಜಿ35: ಎಸ್.ಎಸ್.ಮಲ್ಲಿಕಾರ್ಜುನ್‌

Share this article