ಅನುದಾನ ಹಂಚಿಕೆ ಅನ್ಯಾಯ: ಕೇಂದ್ರಕ್ಕೆ ಇನ್ನೊಮ್ಮೆ ಸಿದ್ದು ಗುದ್ದು

KannadaprabhaNewsNetwork |  
Published : Jun 15, 2025, 01:00 AM IST
ಶುಕ್ರವಾರ 16ನೇ ಹಣಕಾಸು ಆಯೋಗದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ | Kannada Prabha

ಸಾರಾಂಶ

‘ಕೇಂದ್ರೀಯ ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ಹೀಗಾಗಿ ದೇಶದ ಒಕ್ಕೂಟ ವ್ಯವಸ್ಥೆ ಬಲಪಡಿಸಿ, ಎಲ್ಲಾ ರಾಜ್ಯಗಳಿಗೂ ನ್ಯಾಯ ಒದಗಿಸಬೇಕು’ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಅಲ್ಲದೆ, ’ಕರ್ನಾಟಕಕ್ಕೆ ನಮ್ಮ ಪಾಲಿನ ತೆರಿಗೆಯ ನ್ಯಾಯಯುತ ಪಾಲನ್ನು ಕೊಡಿ’ ಎಂದು ಒತ್ತಾಯಿಸಿದ್ದಾರೆ.

- ಕೇಂದ್ರ ಹಂಚಿಕೆಯಲ್ಲಿ ನ್ಯಾಯಯುತ ಪಾಲು ಕೊಡಿ

- 16ನೇ ಹಣಕಾಸು ಆಯೋಗದ ಸಭೆಯಲ್ಲಿ ಬಿಗಿಪಟ್ಟು

--ಸಿದ್ದು ಚಾರ್ಜ್‌ಶೀಟ್‌

- ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಕರ್ನಾಟಕ ಪ್ರಮುಖ ಪಾತ್ರ

- ದೇಶದ ಜಿಡಿಪಿಗೆ ಸುಮಾರು ಶೇ.8.7ರಷ್ಟು ರಾಜ್ಯದ ಕೊಡುಗೆ

- ರಾಜ್ಯದಿಂದ ವಾರ್ಷಿಕ 4.5 ಲಕ್ಷ ಕೋಟಿ ರು. ತೆರಿಗೆ ಹಣ ಪಾವತಿ

- ಜಿಎಸ್‌ಟಿ ಸಂಗ್ರಹಣೆಯಲ್ಲಿ ದೇಶದಲ್ಲಿಯೇ ರಾಜ್ಯಕ್ಕೆ 2ನೇ ಸ್ಥಾನ

- ಆದರೂ ಕೇಂದ್ರದಿಂದ ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ

- ಪ್ರತಿ ರುಪಾಯಿ ತೆರಿಗೆಯಲ್ಲಿ ರಾಜ್ಯ ಕೇವಲ 15 ಪೈಸೆ ಮಾತ್ರ ಹಂಚಿಕೆ

- ಹೀಗಾಗಿ, ಕರ್ನಾಟಕಕ್ಕೆ ನಮ್ಮ ಪಾಲಿನ ನ್ಯಾಯಯುತ ಪಾಲನ್ನು ಕೊಡಿ

- ದೇಶದ ಒಕ್ಕೂಟ ವ್ಯವಸ್ಥೆ ಬಲಪಡಿಸಿ, ಎಲ್ಲಾ ರಾಜ್ಯಕ್ಕೂ ನ್ಯಾಯ ಕೊಡಿ

- ದೆಹಲಿಯಲ್ಲಿನ 16ನೇ ಹಣಕಾಸು ಆಯೋಗದ ಸಭೆಯಲ್ಲಿ ಸಿಎಂ ಆಗ್ರಹ

--

ಕನ್ನಡಪ್ರಭ ವಾರ್ತೆ ನವದೆಹಲಿ

‘ಕೇಂದ್ರೀಯ ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ಹೀಗಾಗಿ ದೇಶದ ಒಕ್ಕೂಟ ವ್ಯವಸ್ಥೆ ಬಲಪಡಿಸಿ, ಎಲ್ಲಾ ರಾಜ್ಯಗಳಿಗೂ ನ್ಯಾಯ ಒದಗಿಸಬೇಕು’ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಅಲ್ಲದೆ, ’ಕರ್ನಾಟಕಕ್ಕೆ ನಮ್ಮ ಪಾಲಿನ ತೆರಿಗೆಯ ನ್ಯಾಯಯುತ ಪಾಲನ್ನು ಕೊಡಿ’ ಎಂದು ಒತ್ತಾಯಿಸಿದ್ದಾರೆ.

ದೆಹಲಿಯಲ್ಲಿ ಶುಕ್ರವಾರ ನಡೆದ 16ನೇ ಹಣಕಾಸು ಆಯೋಗದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಕರ್ನಾಟಕ ಪ್ರಮುಖ ಪಾತ್ರ ವಹಿಸುತ್ತಿದ್ದು, ದೇಶದ ಒಟ್ಟೂ ಜಿಡಿಪಿಗೆ ಸುಮಾರು ಶೇ.8.7ರಷ್ಟು ಕೊಡುಗೆ ನೀಡುತ್ತಿದೆ. ಜಿಎಸ್‌ಟಿ ಸಂಗ್ರಹಣೆಯಲ್ಲಿ ದೇಶದಲ್ಲಿಯೇ 2ನೇ ಸ್ಥಾನದಲ್ಲಿದೆ. ಆದರೆ, ಸಂಪನ್ಮೂಲ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಕೇಂದ್ರಕ್ಕೆ ರಾಜ್ಯ ವರ್ಷವೊಂದಕ್ಕೆ 4.5 ಲಕ್ಷ ಕೋಟಿ ರು. ತೆರಿಗೆ ಹಣ ಪಾವತಿಸುತ್ತಿದೆ. ಆದರೆ, ರಾಜ್ಯದಿಂದ ಕೇಂದ್ರಕ್ಕೆ ಸ್ವೀಕೃತವಾಗುವ ತೆರಿಗೆಯ ಪ್ರತಿ ರೂಪಾಯಿಗೆ ಪ್ರತಿಯಾಗಿ ರಾಜ್ಯ ಕೇವಲ 15 ಪೈಸೆ ಮಾತ್ರ ಪಡೆಯುತ್ತಿದೆ. ಹೀಗಾಗಿ, ಕರ್ನಾಟಕಕ್ಕೆ ನಮ್ಮ ಪಾಲಿನ ನ್ಯಾಯಯುತ ಪಾಲನ್ನು ಕೊಡಿ ಎಂದು ಆಗ್ರಹಿಸಿದರು.

ಕಳೆದ 14 ಮತ್ತು 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. 15ನೇ ಹಣಕಾಸು ಆಯೋಗವು ಕರ್ನಾಟಕದ ತೆರಿಗೆ ಮರುಪಾವತಿ ಪಾಲನ್ನು 4.713% ರಿಂದ 3.647% ಕ್ಕೆ ಇಳಿಕೆ ಮಾಡಿದ್ದರಿಂದ ಈ ಅವಧಿಯಲ್ಲಿ ರಾಜ್ಯಕ್ಕೆ ₹80,000 ಕೋಟಿಗಳಷ್ಟು ನಷ್ಟವಾಗಿದೆ. ಕಳೆದ 5 ವರ್ಷಗಳಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಬರುವ ಅನುದಾನದ ಪಾಲಿನಲ್ಲಿ 68,275 ಕೋಟಿ ರೂ.ಕಡಿಮೆಯಾಗಿದೆ. ಈ ಅನ್ಯಾಯ 16ನೇ ಹಣಕಾಸು ಆಯೋಗದಲ್ಲಿ ಆಗಬಾರದು ಎಂದು ಒತ್ತಾಯಿಸಿದರು.

ಸೆಸ್ ಮತ್ತು ಸರ್ಚಾರ್ಜ್‌ನಲ್ಲಿ ರಾಜ್ಯಗಳಿಗೆ ಪಾಲು ಇಲ್ಲ. ಇದನ್ನು ಪೂರ್ತಿಯಾಗಿ ಕೇಂದ್ರ ಸರ್ಕಾರವೇ ಇರಿಸಿಕೊಳ್ಳುತ್ತೆ. ಸೆಸ್ ಮತ್ತು ಸರ್ಚಾರ್ಜ್‌ಅನ್ನು ಶೇ.5ಕ್ಕಿಂತ ಹೆಚ್ಚು ವಸೂಲಿ ಮಾಡಿದರೆ, ಅದನ್ನು ರಾಜ್ಯಗಳಿಗೆ ಹಂಚಿಕೆ ಮಾಡಿ ಎಂದು ಆಗ್ರಹಿಸಿದರು.

ಸಭೆ ಬಳಿಕ, 16ನೇ ಹಣಕಾಸು ಆಯೋಗದ ಅಧ್ಯಕ್ಷ ಅರವಿಂದ ಪಾನಾಘಢಿಯಾ ಮತ್ತು ಸದಸ್ಯರನ್ನು ಭೇಟಿಯಾಗಿ, ಹೆಚ್ಚುವರಿ ಜ್ಞಾಪನಾ ಪತ್ರ ಸಲ್ಲಿಸಿ, ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಸಲ್ಲಿಸಿದರು. ಭೇಟಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, 14 ಹಾಗೂ 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಕೇರಳಕ್ಕೆ 38 ಸಾವಿರ ಕೋಟಿ ರೂ. ನೀಡಲಾಗಿದೆ. ಆದರೆ, ಕರ್ನಾಟಕಕ್ಕೆ ಒಂದು ಪೈಸೆಯೂ ಬಂದಿಲ್ಲ. 15ನೇ ಹಣಕಾಸು ಆಯೋಗ ರಾಜ್ಯಕ್ಕೆ 5,495 ಕೋಟಿ ರೂ.ಗಳ ವಿಶೇಷ ಅನುದಾನ ಒದಗಿಸಲು ಶಿಫಾರಸ್ಸು ಮಾಡಿತ್ತು. ಆದರೆ, ಕೇಂದ್ರ ಸರ್ಕಾರ ಈ ಅನುದಾನ ಒದಗಿಸಲು ನಿರಾಕರಿಸಿತು. ಬೆಂಗಳೂರಿನ ಪೆರಿಫೆರಲ್ ರಿಂಗ್ ರಸ್ತೆಗೆ 3,000 ಕೋಟಿ ಹಾಗೂ ಕೆರೆಗಳ ಅಭಿವೃದ್ಧಿಗೆ 3,000 ಕೋಟಿ ನೀಡಲೂ ಶಿಫಾರಸ್ಸು ಮಾಡಿತ್ತು. ಎಲ್ಲಾ ಸೇರಿ 11,495 ಕೋಟಿ ರೂ.ಗಳನ್ನು ಒದಗಿಸಬೇಕೆಂದು ಶಿಫಾರಸ್ಸು ಮಾಡಿತ್ತು. ಆದರೆ, ಕೇಂದ್ರದಿಂದ ನಯಾಪೈಸೆ ಬರಲಿಲ್ಲ ಎಂದು ಆರೋಪಿಸಿದರು.

ಬೆಂಗಳೂರು ನಗರ ವೇಗವಾಗಿ ಅಭಿವೃದ್ಧಿಯಾಗುತ್ತಿದ್ದು, ನಗರದ ಮೂಲಸೌಕರ್ಯ ಅಭಿವೃದ್ಧಿಗೆ 1.15 ಲಕ್ಷ ಕೋಟಿ ರೂ.ಒದಗಿಸಲು ಮನವಿ ಮಾಡಿದ್ದೇನೆ ಎಂದು ಅವರು ತಿಳಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ