ಕುತೂಹಲ ಮೂಡಿಸಿದ ರಾಜಕೀಯ ಬೆಳವಣಿಗೆ
ತುಂಗಭದ್ರಾ ಜಲಾಶಯ ವೀಕ್ಷಣೆಗೆ ಬಂದಿದ್ದ ಸಿಎಂ ಸಿದ್ದರಾಮಯ್ಯ ಮಾಜಿ ಸಂಸದ ಸಂಗಣ್ಣ ಕರಡಿ ಅವರ ನಿವಾಸದಲ್ಲಿ ಶ್ರಾವಣ ಮಾಸದ ಉತ್ತರ ಕರ್ನಾಟಕ ಶೈಲಿಯ ಊಟ ಸವಿದರು.
ಚಪಾತಿ, ಜೋಳದ ರೊಟ್ಟಿ, ನಾನಾ ತರಹದ ಪಲ್ಯ, ಚಿತ್ರಾನ್ನ, ಅನ್ನ ಸಾಂಬಾರು ಒಳಗೊಂಡು, ರವೆ ಉಂಡೆ ಸೇರಿದಂತೆ ನಾನಾ ಬಗೆಯ ಪಂಚಮಿಯ ಉಂಡೆಗಳ ಪಕ್ಕಾ ಶ್ರಾವಣ ಊಟ ಸವಿದರು.ಈ ವೇಳೆಯಲ್ಲಿ ಯಾವುದೇ ರಾಜಕೀಯ ಚರ್ಚೆಯಾಗಲಿಲ್ಲ, ಬದಲಾಗಿ ಕುಶಲೋಪಹರಿ ಚರ್ಚೆಯಾಯಿತು.
ಕುತೂಹಲ: ಸಂಸದರಾಗಿದ್ದ ಸಂಗಣ್ಣ ಕರಡಿ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರಿದ ಮೇಲೆ ವಿಧಾನಪರಿಷತ್ ಸದಸ್ಯ ಸ್ಥಾನ ನೀಡುತ್ತಾರೆ ಎನ್ನುವ ಕುರಿತು ಚರ್ಚೆಯಾಗುತ್ತಿರುವ ವೇಳೆಯಲ್ಲಿಯೇ ಸಿಎಂ ಅವರ ನಿವಾಸಕ್ಕೆ ಬಂದಿರುವುದು ಸಹಜವಾಗಿಯೇ ಚರ್ಚೆಗೆ ಮತ್ತಷ್ಟು ಇಂಬು ಬಂದಂತಾಗಿದೆ.
ಜಲಾಶಯದಲ್ಲಿದ್ದ 105 ಟಿಎಂಸಿ ನೀರಿನಲ್ಲಿ ಈಗ ಗೇಟ್ ದುರಸ್ತಿಗಾಗಿ ನದಿಯ ಮೂಲಕ ನೀರು ಹರಿಬಿಡಲಾಗುತ್ತದೆ. ಆದರೂ ಜಲಾಶಯದಲ್ಲಿ 65 ಟಿಎಂಸಿ ನೀರು ಉಳಿಸಿಕೊಂಡೇ ದುರಸ್ತಿ ಮಾಡುತ್ತೇವೆ. ದುರಸ್ತಿಯಾದ ಮೇಲೆ ಮಳೆ ಬರಲಿದೆ. ಈಗಾಗಲೇ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಉತ್ತಮ ಮಳೆಯಾಗಲಿದೆ. ಆಗ ಸಮಸ್ಯೆಯೇ ಆಗುವುದಿಲ್ಲ ಎಂದರು.
ಇದನ್ನು ಮೀರಿ ಆಗಸ್ಟ್ ಮತ್ತು ಅಕ್ಟೋಬರ್‌ನಲ್ಲಿ ಮಳೆಗಾಲ ಇರುವುದರಿಂದ ಉತ್ತಮ ಮಳೆಯಾಗಿ ಜಲಾಶಯ ಭರ್ತಿಯಾದರೂ ಆಗಬಹುದು. ಹಾಗಾದರೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದರು.
ತುಂಗಭದ್ರಾ ಜಲಾಶಯಕ್ಕೆ 70 ವರ್ಷಗಳಾಗಿವೆ. ಈ ಹಿಂದೆ ಯಾವಾಗಲು ಈ ಸಮಸ್ಯೆ ಬಂದಿರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ಆಗಿರುವುದರಿಂದ ಇನ್ಮುಂದೆ ಎಚ್ಚರ ವಹಿಸಲಾಗುವುದು. ಈಗಾಗಲೇ ಉಪಮುಖ್ಯಮಂತ್ರಿ ರಾಜ್ಯದ ಎಲ್ಲ ಜಲಾಶಯಗಳ ಸ್ಥಿತಿಗತಿಯನ್ನು ಪರಿಶೀಲನೆ ಮಾಡಲು ಸೂಚಿಸಿದ್ದಾರೆ.
ತುಂಗಭದ್ರಾ ಜಲಾಶಯದ ಸ್ಥಿತಿ ಪರಿಶೀಲಿಸಿ, ಅಗತ್ಯ ಕ್ರಮವಹಿಸಲಾಗುವುದು. ಈ ದಿಸೆಯಲ್ಲಿ ಆಂಧ್ರ, ತೆಲಂಗಾಣ ಸರ್ಕಾರಗಳೊಂದಿಗೆ ಸಂಪರ್ಕದಲ್ಲಿದ್ದೇವೆ, ಬೋರ್ಡ್ ಜೊತೆಗೂ ಸಂಪರ್ಕದಲ್ಲಿದ್ದು, ಸಮಸ್ಯೆ ಪರಿಹರಿಸುವ ದಿಸೆಯಲ್ಲಿ ಮೊದಲು ಪ್ರಯತ್ನ ಮಾಡಲಾಗುತ್ತದೆ ಎಂದರು.