ಕಿತ್ತೂರು ಉತ್ಸವಕ್ಕೆ ಸಿಎಂ, ಮೂಢನಂಬಿಕೆಗೆ ಡಿಕೆಶಿ ಸೆಡ್ಡು!

KannadaprabhaNewsNetwork |  
Published : Oct 25, 2026, 03:00 AM IST
ಹಾನಗಲ್ಲಿನ ಲೋಯಲಾ ವಿಕಾಸ ಕೇಂದ್ರದಲ್ಲಿ ಆರೋಗ್ಯ ಮತ್ತು ಪರಿಸರ ಜಾಗೃತಿ ಕುರಿತ ತರಬೇತಿಯನ್ನು ಸಹ ನಿರ್ದೇಶಕರಾದ ಜೇಸನ್ ಪಾಯ್ಸ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಶ್ರೀಶೈಲ ಮಠದಕನ್ನಡಪ್ರಭ ವಾರ್ತೆ ಬೆಳಗಾವಿಕಿತ್ತೂರು ರಾಣಿ ಚೆನ್ನಮ್ಮನ ಉತ್ಸವದ ಸಮಾರಂಭಕ್ಕೆ ಮುಖ್ಯಮಂತ್ರಿ ಆಗಮಿಸಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ. ಕಿತ್ತೂರು ಕೋಟೆ ಆವರಣಕ್ಕೆ ಕಾಲಿಟ್ಟ ಮುಖ್ಯಮಂತ್ರಿ ರಾಜಕೀಯ ಭವಿಷ್ಯಕ್ಕೆ ಕುತ್ತು ಬರುತ್ತದೆ. ಕಿತ್ತೂರು ಉತ್ಸವದ ಸುತ್ತ ಹಲವು ವರ್ಷಗಳಿಂದ ಕೇಳಿಬರುತ್ತಿರುವ ಈ ಅಪನಂಬಿಕೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಇದೀಗ ನೇರವಾಗಿ ಸೆಡ್ಡು ಹೊಡೆದಿದ್ದಾರೆ.

ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿ

ಕಿತ್ತೂರು ರಾಣಿ ಚೆನ್ನಮ್ಮನ ಉತ್ಸವದ ಸಮಾರಂಭಕ್ಕೆ ಮುಖ್ಯಮಂತ್ರಿ ಆಗಮಿಸಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ. ಕಿತ್ತೂರು ಕೋಟೆ ಆವರಣಕ್ಕೆ ಕಾಲಿಟ್ಟ ಮುಖ್ಯಮಂತ್ರಿ ರಾಜಕೀಯ ಭವಿಷ್ಯಕ್ಕೆ ಕುತ್ತು ಬರುತ್ತದೆ. ಕಿತ್ತೂರು ಉತ್ಸವದ ಸುತ್ತ ಹಲವು ವರ್ಷಗಳಿಂದ ಕೇಳಿಬರುತ್ತಿರುವ ಈ ಅಪನಂಬಿಕೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಇದೀಗ ನೇರವಾಗಿ ಸೆಡ್ಡು ಹೊಡೆದಿದ್ದಾರೆ.

ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ಕಿತ್ತೂರು ರಾಣಿ ಚೆನ್ನಮ್ಮನ ಹೆಸರಿನಲ್ಲಿ ನಡೆಯುವ ಉತ್ಸವಕ್ಕೆ ಮುಖ್ಯಮಂತ್ರಿ ಆಗಮಿಸಬೇಕು ಎಂಬುದು ಜನರ ಆಶಯ. ಆದರೆ, ಮುಖ್ಯಮಂತ್ರಿಗಳು ಉತ್ಸವಕ್ಕೆ ಆಗಮಿಸಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆ ರಾಜಕೀಯ ವಲಯದಲ್ಲಿ ಬೇರೂರಿದ್ದರಿಂದ ಹಲವು ಮುಖ್ಯಮಂತ್ರಿಗಳು ಕಿತ್ತೂರಿನತ್ತ ಮುಖ ಮಾಡಲು ಹಿಂದೇಟು ಹಾಕಿದ್ದರು. ಕೆಲವರು ಉತ್ಸವದಿಂದ ದೂರವೇ ಉಳಿದಿದ್ದರು.

ಬೊಮ್ಮಾಯಿ, ಸಿದ್ದರಾಮಯ್ಯ ಬಳಿಕ ಡಿಕೆಶಿ:

ಈ ಅಪನಂಬಿಕೆಗೆ ಈಗಾಗಲೇ ಕೆಲ ಮುಖ್ಯಮಂತ್ರಿಗಳು ಸವಾಲು ಹಾಕಿದ್ದಾರೆ. ಬಸವರಾಜ ಬೊಮ್ಮಾಯಿ ಹಾಗೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಿತ್ತೂರು ಉತ್ಸವಕ್ಕೆ ಆಗಮಿಸಿ, ಈ ರೀತಿಯ ನಂಬಿಕೆಗಳಿಗೆ ಯಾವುದೇ ಆಧಾರವಿಲ್ಲ ಎಂಬ ಸಂದೇಶ ನೀಡಿದ್ದರು. ಇದೀಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಕಿತ್ತೂರು ಭೇಟಿ ಈ ಸರಣಿಗೆ ಮತ್ತೊಂದು ಸೇರ್ಪಡೆ. ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿರುವಾಗಲೇ ಕಿತ್ತೂರು ಕೋಟೆ ಆವರಣಕ್ಕೆ ಆಗಮಿಸಿ, ಉತ್ಸವದ ಸರ್ವೋಚ್ಚ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ಚೆನ್ನಮ್ಮನ ನಾಡಿಗೆ ಬಂದರೆ ಅಧಿಕಾರ ಹೋಗುತ್ತದೆ ಎಂಬ ಮಾತಿಗೆ ರಾಜಕೀಯವಾಗಿಯೂ, ವೈಚಾರಿಕವಾಗಿಯೂ ಉತ್ತರ ನೀಡಲು ಮುಂದಾಗಿದ್ದಾರೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಭಾನುವಾರ ಸಂಜೆ 4.45ಕ್ಕೆ ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ಆಗಮಿಸಲಿದ್ದಾರೆ. ಸಂಜೆ 5.20ಕ್ಕೆ ಕಿತ್ತೂರು ಕೋಟೆ ಆವರಣದಲ್ಲಿ ನಡೆಯಲಿರುವ ಕಿತ್ತೂರು ಚೆನ್ನಮ್ಮ ಉತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಕಿತ್ತೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಸೋಮವಾರ ಸುವರ್ಣ ವಿಧಾನಸೌಧದಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ರೈತರ ಜತೆಗೆ ಪ್ರತ್ಯೇಕ ಸಭೆ ನಡೆಸಿ, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು.

ಕಬ್ಬು ದರ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ರೈತರು ನಡೆಸುತ್ತಿರುವ ಹೋರಾಟ ತೀವ್ರಗೊಂಡಿರುವ ಸಂದರ್ಭದಲ್ಲೇ ಮುಖ್ಯಮಂತ್ರಿ ಅವರ ಬೆಳಗಾವಿ ಪ್ರವಾಸ ನಡೆಯುತ್ತಿರುವುದು ಮತ್ತೊಂದು ಮಹತ್ವ ಪಡೆದಿದೆ. ಕಬ್ಬಿಗೆ ವೈಜ್ಞಾನಿಕ ಬೆಲೆ, ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಪಾವತಿ, ರೈತರ ಬೇಡಿಕೆಗಳಿಗೆ ಸರ್ಕಾರದ ಸ್ಪಂದನೆ ಸೇರಿದಂತೆ ಹಲವು ವಿಚಾರಗಳು ಮುಖ್ಯಮಂತ್ರಿಗಳ ಮುಂದೆ ಬರಲಿವೆ.

ಹೀಗಾಗಿ ಡಿ.ಕೆ.ಶಿವಕುಮಾರ ಅವರ ಕಿತ್ತೂರು ಭೇಟಿ ಕೇವಲ ಉತ್ಸವದ ಕಾರ್ಯಕ್ರಮಕ್ಕೆ ಸೀಮಿತವಾಗಿಲ್ಲ. ಒಂದು ಕಡೆ ಚೆನ್ನಮ್ಮನ ನೆಲದಲ್ಲಿ ಬೇರೂರಿರುವ ಅಪನಂಬಿಕೆಗೆ ಸವಾಲು, ಮತ್ತೊಂದೆಡೆ ಕಬ್ಬು ಬೆಳೆಗಾರರ ಆಕ್ರೋಶಕ್ಕೆ ಉತ್ತರ ನೀಡಬೇಕಾದ ರಾಜಕೀಯ ಅನಿವಾರ್ಯತೆಯಿದೆ. ಕಿತ್ತೂರು ಉತ್ಸವದ ವೇದಿಕೆಯಿಂದ ಮುಖ್ಯಮಂತ್ರಿ ಯಾವ ಸಂದೇಶ ನೀಡಲಿದ್ದಾರೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.

ಚೆನ್ನಮ್ಮನ ನೆಲದಲ್ಲಿ ಭಯವೇಕೆ?:

ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದ ವೀರನಾರಿ. ಆಕೆಯ ಶೌರ್ಯ, ಸ್ವಾಭಿಮಾನ ಮತ್ತು ಸ್ವಾತಂತ್ರ್ಯದ ಸಂಕೇತವಾಗಿ ಕಿತ್ತೂರು ಉತ್ಸವವನ್ನು ಪ್ರತಿವರ್ಷ ಆಚರಿಸಲಾಗುತ್ತದೆ. ಇಂತಹ ಐತಿಹಾಸಿಕ ನೆಲಕ್ಕೆ ಮುಖ್ಯಮಂತ್ರಿಗಳು ಭೇಟಿ ನೀಡುವುದನ್ನೇ ಅಪಶಕುನವೆಂದು ಪರಿಗಣಿಸುವುದು ಎಷ್ಟು ಸಮಂಜಸ ಎಂಬ ಪ್ರಶ್ನೆಯೂ ಈ ಸಂದರ್ಭದಲ್ಲಿ ಮುನ್ನೆಲೆಗೆ ಬಂದಿದೆ.

ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದವರು ಚೆನ್ನಮ್ಮನ ಇತಿಹಾಸವನ್ನು ಸ್ಮರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎನ್ನುವುದು ಜನರ ನಿರೀಕ್ಷೆ. ಆದರೆ, ರಾಜಕೀಯ ಭವಿಷ್ಯದ ಲೆಕ್ಕಾಚಾರ, ಅಧಿಕಾರ ಕಳೆದುಕೊಳ್ಳುವ ಭೀತಿ ಹಾಗೂ ಮೂಢನಂಬಿಕೆಗಳು ಹಲವು ವರ್ಷಗಳ ಕಾಲ ಈ ಭೇಟಿಗೆ ಅಡ್ಡಿಯಾಗಿದ್ದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಸಿ ಕ್ರೀಡೆಗಳ ಉತ್ತೇಜಿಸುವ ಕೆಲಸವಾಗಲಿ
ನೃತ್ಯ ಕಲೆಗಳು ನಾಡಿನ ಸಾಂಸ್ಕೃತಿಕ ಆಸ್ತಿ