16ರಂದು ನೂತನ ಡಿಸಿ ಸಂಕೀರ್ಣ ಲೋಕಾರ್ಪಣೆಗೆ ಸಿಎಂ

KannadaprabhaNewsNetwork | Published : May 11, 2025 1:22 AM
Follow Us

ಸಾರಾಂಶ

ನೂತನ ಕಟ್ಟಡಕ್ಕೆ ಈಗಾಗಲೇ 23 ಇಲಾಖೆಗಳನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಬಹುತೇಕ ಇಲಾಖೆಗಳನ್ನು ಉದ್ಘಾಟನೆಯ ಸಂದರ್ಭದಲ್ಲಿ ಸ್ಥಳಾಂತರಕ್ಕೆ ಕ್ರಮ ವಹಿಸಲಾಗಿದೆ. ಬಾಕಿ ಉಳಿದ ಕಚೇರಿಗಳನ್ನು ಮುಂದಿನ ದಿನಗಳಲ್ಲಿ ಸ್ಥಳಾಂತರಿಸಲಾಗುವುದು ಎಂದು ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ಪೋಡಿ ಅಭಿಯಾನದಡಿ 7 ಸಾವಿರ ಆರ್‌ಟಿಸಿ ದಾಖಲೆಗಳ ವಿತರಣೆ, ಒಳಾಂಗಣ ಕ್ರೀಡಾಂಗಣ ಉದ್ಘಾಟನೆ: ಗುಂಡೂರಾವ್‌

ಕನ್ನಡಪ್ರಭ ವಾರ್ತೆ ಮಂಗಳೂರು

ನಗರದ ಪಡೀಲ್‌ನಲ್ಲಿ ಪಾರಂಪರಿಕ ಶೈಲಿಯಲ್ಲಿ ನಿರ್ಮಾಣವಾಗಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 16ರಂದು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.ದ.ಕ. ಜಿಲ್ಲಾ ಪಂಚಾಯ್ತಿ ನೇತ್ರಾವತಿ ಸಭಾಂಗಣದಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರದ ಹಿಂದಿನ ಅವಧಿಯಲ್ಲಿ ಆಗ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ನೂತನ ಜಿಲ್ಲಾಧಿಕಾರಿ ಸಂಕೀರ್ಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಸುಮಾರು 55 ಕೋಟಿ ರು. ವೆಚ್ಚದಲ್ಲಿ ಕಟ್ಟಡ ಕಾಮಗಾರಿ ಮುಗಿದಿತ್ತು. ಇದೀಗ ಮತ್ತೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸ್ಮಾರ್ಟ್‌ ಸಿಟಿಯ 20 ಕೋಟಿ ರು. ಅನುದಾನದಿಂದ ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಅತ್ಯಂತ ಸುಂದರವಾಗಿ, ವೈಜ್ಞಾನಿಕವಾಗಿ ಕಟ್ಟಡ ಮೂಡಿಬಂದಿದೆ ಎಂದು ಹೇಳಿದರು.

ನೂತನ ಕಟ್ಟಡಕ್ಕೆ ಈಗಾಗಲೇ 23 ಇಲಾಖೆಗಳನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಬಹುತೇಕ ಇಲಾಖೆಗಳನ್ನು ಉದ್ಘಾಟನೆಯ ಸಂದರ್ಭದಲ್ಲಿ ಸ್ಥಳಾಂತರಕ್ಕೆ ಕ್ರಮ ವಹಿಸಲಾಗಿದೆ. ಬಾಕಿ ಉಳಿದ ಕಚೇರಿಗಳನ್ನು ಮುಂದಿನ ದಿನಗಳಲ್ಲಿ ಸ್ಥಳಾಂತರಿಸಲಾಗುವುದು ಎಂದು ದಿನೇಶ್‌ ಗುಂಡೂರಾವ್‌ ತಿಳಿಸಿದರು.

ಈ ಕಟ್ಟಡ ಜಿಲ್ಲೆಯ ಆಡಳಿತ ವ್ಯವಸ್ಥೆಗೆ ಮೈಲಿಗಲ್ಲಾಗಿದ್ದು, ಹೊಸ ಕಚೇರಿ ಮೂಲಕ ಅಧಿಕಾರಿಗಳು ಪರಿಣಾಮಕಾರಿಯಾಗಿ ಜವಾಬ್ಧಾರಿ ನಿರ್ವಹಿಸಲು ಪ್ರೇರೇಪಿಸಲಿದೆ. ಸಾರ್ವಜನಿಕರಿಗೂ ಸಕಲ ಸೌಲಭ್ಯಗಳೊಂದಿಗೆ ಒಂದೇ ಸೂರಿನಡಿ ಸರ್ಕಾರಿ ಸೇವೆಗಳು ಲಭ್ಯವಾಗಲಿವೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯ ಬಹಳಷ್ಟು ಮಂದಿಗೆ ಆರ್‌ಟಿಸಿ ಸಂಬಂಧಿತ ದಾಖಲೆ ಇರಲಿಲ್ಲ. ಪೋಡಿ ಮುಕ್ತ ಅಭಿಯಾನದಡಿ ಇದುವರೆಗೆ 7 ಸಾವಿರದಷ್ಟು ಆರ್‌ಟಿಸಿ ದಾಖಲೆಗಳನ್ನು ಮಾಡಲಾಗಿದ್ದು, ಇದೇ ಸಂದರ್ಭ ಮುಖ್ಯಮಂತ್ರಿಗಳು ಜನತೆಗೆ ವಿತರಿಸಲಿದ್ದಾರೆ. ಕಂದಾಯ ಇಲಾಖೆಯ ಅತ್ಯಂತ ಮಹತ್ವದ ಅಭಿಯಾನ ಇದಾಗಿದ್ದು, ಇನ್ನಷ್ಟು ಚುರುಕು ನೀಡಲಾಗುವುದು ಎಂದು ಹೇಳಿದರು.

ಒಳಾಂಗಣ ಕ್ರೀಡಾಂಗಣ ಉದ್ಘಾಟನೆ:

ಅದೇ ದಿನ ಸುಮಾರು 35 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡ ಸ್ಮಾರ್ಟ್‌ ಒಳಾಂಗಣ ಕ್ರೀಡಾಂಗಣವನ್ನು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುತ್ತಾರೆ. 200 ಮಂದಿ ವಿಕಲಚೇನರಿಗೆ ವಿವಿಧ ಸೌಲಭ್ಯಗಳ ವಿತರಣೆ, ಸುಕನ್ಯಾ ಸಮೃದ್ಧಿ ಯೋಜನೆ, ಅಲ್ಪಸಂಖ್ಯಾತರ ನಿಗಮದಿಂದ ಫಲಾನುಭವಿಗಳಿಗೆ ವಾಹನಗಳ ವಿತರಣೆ ನಡೆಯಲಿದೆ. ಸಿಎಂ ಅವರು ಉಳ್ಳಾಲ ಉರೂಸ್‌ಗೂ ತೆರಳಲಿದ್ದಾರೆ ಎಂದು ದಿನೇಶ್‌ ಗುಂಡೂರಾವ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್‌ ಸದಸ್ಯರಾದ ಐವನ್‌ ಡಿಸೋಜಾ, ಬೋಜೇಗೌಡ ಇದ್ದರು.