ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ ನಿರ್ಣಯ ಹಾಗೂ ಎಸ್‌ಟಿ ಟ್ಯಾಗ್ ಕುರಿತು ಎರಡು ರಾಷ್ಟ್ರೀಯ ರಾಜಕೀಯ ಪಕ್ಷಗಳ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು ಪ್ರಣಾಳಿಕೆಯಲ್ಲಿ ಭರವಸೆ ನೀಡುವ ಮೂಲಕ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ.ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡವ ಲೋಕದ ಅದಮ್ಯ ಧ್ವನಿ ಹಾಗೂ ಆದಿಮಸಂಜಾತ ಕೊಡವರ ಸಾಮಾಜಿಕ-ಭೂ ರಾಜಕೀಯ ಮತ್ತು ಜನಾಂಗೀಯ-ಸಾಂಸ್ಕೃತಿಕ ಸಂಘಟನೆಯಾದ ಸಿಎನ್‌ಸಿ, ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ ನಿರ್ಣಯ, ಎಸ್‌ಟಿ ಟ್ಯಾಗ್ ಸೇರಿದಂತೆ ಪ್ರಧಾನ ಕೊಡವ ಕುಲ ಸಮಸ್ಯೆಗೆ ಸಂಬಂಧಿಸಿದ 10 ನ್ಯಾಯಸಮ್ಮತ ಬೇಡಿಕೆಗಳನ್ನು ಮುಂದಿಟ್ಟು ಕಳೆದ 34 ವರ್ಷಗಳಿಂದ ಶಾಂತಿಯುತ ಹೋರಾಟ ನಡೆಸುತ್ತಾ ಬಂದಿದೆ. ಇಲ್ಲಿಯವರೆಗೆ ಈಡೇರದ ಈ ಬೇಡಿಕೆಗಳ ಕುರಿತು ಅಭ್ಯರ್ಥಿಗಳು ತಮ್ಮ ಬದ್ಧತೆಯನ್ನು ಶುದ್ಧ ಅಂತಃಕರಣದಿಂದ ಪ್ರದರ್ಶಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೊಡವ ಲ್ಯಾಂಡ್‌ಗಾಗಿ ನಮ್ಮ ಸಂವಿಧಾನದ ಆರ್ಟಿಕಲ್ 224(ಎ) ಆರ್/ಡಬ್ಲ್ಯೂ 6 ಮತ್ತು 8ನೇ ಶೆಡ್ಯೂಲ್ ಅಡಿಯಲ್ಲಿ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಕೊಡವರ ಆಂತರಿಕ ರಾಜಕೀಯ ಸ್ವ-ನಿರ್ಣಯ ಹಕ್ಕುಗಳನ್ನು ಮಾನ್ಯ ಮಾಡಲು ಭಾರತದ ಸಂವಿಧಾನ ಪರಮಾರ್ಶೆ ಆಯೋಗ ಶಿಫಾರಸು ಮಾಡಲಾಗಿದೆ. ಆದಿಮಸಂಜಾತ ಮೈನಸ್ಕ್ಯೂಲ್ ಮೈಕ್ರೋ ಕೊಡವ ಬುಡಕಟ್ಟು ಜನಾಂಗವನ್ನು ರಕ್ಷಿಸಬೇಕು, ಗೌರವಿಸಬೇಕು ಮತ್ತು ಅಂತಾರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಅವರ ಆಂತರಿಕ ರಾಜಕೀಯ ಸ್ವ-ನಿರ್ಣಯವನ್ನು ಗುರುತಿಸಬೇಕು.ಹೊಸ ಮರು ವ್ಯಾಖ್ಯಾನಿಸಲಾದ ಮಾನದಂಡಗಳ ಪ್ರಕಾರ ನಮ್ಮ ಸಂವಿಧಾನದ ಶೆಡ್ಯೂಲ್ ಪಟ್ಟಿಯಲ್ಲಿ ಕೂರ್ಗ್‌ನ ಆದಿಮಸಂಜಾತ ಮೂಲನಿವಾಸಿ ಕೊಡವ ಜನಾಂಗವನ್ನು ಸೇರಿಸಬೇಕು. ಕೊಡವ ಕಸ್ಟಮರಿ ಜನಾಂಗೀಯ ‘ಸಂಸ್ಕಾರ ಗನ್’ ಹಕ್ಕುಗಳನ್ನು ಸಿಖ್ಖರ ‘ಕಿರ್ಪಾನ್’ಗೆ ಸಮಾನವಾಗಿ ನಮ್ಮ ಸಂವಿಧಾನದ 25 ಮತ್ತು 26 ನೇ ವಿಧಿಗಳ ಅಡಿಯಲ್ಲಿ ರಕ್ಷಿಸಬೇಕು. ನಮ್ಮ ಭಾಷೆ ಕೊಡವ ತಕ್ಕ್ ಅನ್ನು 8ನೇ ಶೆಡ್ಯೂಲ್‌ಗೆ ಸೇರಿಸುವುದು. 347, 350, 350ಎ ಮತ್ತು 350ಬಿ ಅಡಿಯಲ್ಲಿ ಕೊಡವ ಭಾಷೆಯನ್ನು ಪಠ್ಯಕ್ರಮ ಮತ್ತು ಆಡಳಿತದಲ್ಲಿ ಪರಿಚಯಿಸಬೇಕು.
ಸೊಗಸಾದ, ಉಜ್ವಲವಾದ ಕೊಡವ ಸಂಸ್ಕೃತಿ-ಜಾನಪದ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಬೇಕು. ಕೊಡವ ಸುಧಾರಿತ ಅಧ್ಯಯನ ಕೇಂದ್ರದೊಂದಿಗೆ ವಿಶ್ವ ಕೊಡವ ಶಾಸ್ತ್ರದ ಅಧ್ಯಯನ ಕೇಂದ್ರ ಸ್ಥಾಪಿಸಬೇಕು ಎಂದು ನಾಚಪ್ಪ ಆಗ್ರಹಿಸಿದ್ದಾರೆ.