ಕನ್ನಡಪ್ರಭ ವಾರ್ತೆ ಮಡಿಕೇರಿ
ರಾಷ್ಟ್ರೀಯ ಜನಗಣತಿಯ ಸಂದರ್ಭ ಆದಿಮಸಂಜಾತ ಬುಡಕಟ್ಟು ಜನಾಂಗ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ಅನ್ನು ಸೇರಿಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಒತ್ತಾಯಿಸಿದ್ದಾರೆ.ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡವ ಯೋಧ ಕುಲಕ್ಕಾಗಿ ಸೋಶಿಯಲ್ ಎಂಜಿನಿಯರಿಂಗ್ ಪ್ರಕ್ರಿಯೆಯ ಭಾಗವಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ಅನ್ನು ಸೇರಿಸಬೇಕೆಂದು ಒತ್ತಾಯಿಸಿ ಗೃಹಮಂತ್ರಿಗಳು ಹಾಗೂ ಅವರ ಅಧೀನದಲ್ಲಿ ಬರುವ ರಿಜಿಸ್ಟ್ರಾರ್ ಜನರಲ್ ಮತ್ತು ಸೆನ್ಸಸ್ ಕಮಿಷನರ್ ಆಫ್ ಇಂಡಿಯಾ (ಆರ್‌ಜಿಸಿಸಿಐ) ಇವರಿಗೆ ಸಿಎನ್‌ಸಿ ವತಿಯಿಂದ ಜ್ಞಾಪನಾ ಪತ್ರ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಜನಗಣತಿ ಜೊತೆಗೆ ಜಾತಿವಾರು ಜನಗಣತಿ ನಡೆಸುವ ಬಗ್ಗೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹವಾಗಿದೆ. ಜನಗಣತಿಯಲ್ಲಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ಕೊಡವ ಸಮುದಾಯದ ನಿಖರವಾದ ಪ್ರಾತಿನಿಧ್ಯವನ್ನು ಖಚಿತಪಡಿಸುತ್ತದೆ. ಸೋಶಿಯಲ್ ಎಂಜಿನಿಯರಿಂಗ್ ಸರ್ಕಾರವು ಸಮುದಾಯದ ನಿರ್ದಿಷ್ಟ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಉದ್ದೇಶಿತ ನೀತಿಗಳನ್ನು ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುತ್ತದೆ.ಪ್ರತ್ಯೇಕ ಕೋಡ್ ಮತ್ತು ಕಾಲಮ್ ಕೊಡವ ಸಮುದಾಯದ ವಿಶಿಷ್ಟ ಗುರುತು ಹಾಗೂ ಅಸ್ತಿತ್ವವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಏಕ-ಜನಾಂಗೀಯ ಸಮುದಾಯವಾಗಿ ಕೊಡವರು ವಿಶಿಷ್ಟ ಸಾಂಸ್ಕೃತಿಕ ಮತ್ತು ಐತಿಹಾಸಿಕ ಕುರುಹುವನ್ನು ಹೊಂದಿದ್ದು ಅದರ ಗುರುತಿಸುವಿಕೆ ಮತ್ತು ರಕ್ಷಣೆಗೆ ಅರ್ಹವಾಗಿದೆ. ಕೊಡವರ ಯೋಧ ಪರಂಪರೆಯು ಅವರ ಗುರುತಿನ ಅವಿಭಾಜ್ಯ ಅಂಗವಾಗಿದೆ ಮತ್ತು ಜನಗಣತಿಯಲ್ಲಿ ನಿಖರವಾದ ಪ್ರಾತಿನಿಧ್ಯವು ಅವರ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ.
1871-72 ರಿಂದ 1931 ರವರೆಗಿನ ಜನಗಣತಿ ನಿಖರ ಮತ್ತು ವೈಜ್ಞಾನಿಕವಾಗಿದ್ದು, ಕೊಡವ ಕುಲವನ್ನು ಕೊಡವ ಲ್ಯಾಂಡ್ ನ ಏಕ-ಜನಾಂಗೀಯ, ಸ್ವತಂತ್ರ, ಆದಿಮಸಂಜಾತ ಯೋಧ ಕುಲವೆಂದು ದಾಖಲಿಸಲಾಗಿದೆ. ಇದರಿಂದಾಗಿ ಕೊಡವ ಜನಾಂಗೀಯ ಪೂರ್ವಾರ್ಜಿತತೆಯನ್ನು ಗುರುತಿಸಲಾಗಿದೆ. ಅದಾಗ್ಯೂ, 1941 ರಿಂದ 2011 ರವರೆಗೆ ಕೊಡವರನ್ನು ಆಡಳಿತಾತ್ಮಕ ಉದ್ದೇಶಗಳಿಗಾಗಿ ಸರ್ಕಾರ ಉದ್ದೇಶಪೂರ್ವಕವಾಗಿ ಇತರ ಸಮುದಾಯಗಳೊಂದಿಗೆ ವಿಲೀನಗೊಳಿಸಿತು. ಇದು ಕೊಡವ ಸಮುದಾಯದ ಗುರುತು ಮತ್ತು ಅಸ್ತಿತ್ವಕ್ಕೆ ಧಕ್ಕೆಯನ್ನುಂಟುಮಾಡಿತು. ಸರ್ಕಾರಿ ಆಡಳಿತ ಮತ್ತು ಕಲ್ಯಾಣ ರಾಜ್ಯ ಸಿದ್ಧಾಂತದ ಅಡಿಯಲ್ಲಿ ನಮ್ಮ ಭವಿಷ್ಯವು ಕತ್ತಲೆಯಾಯಿತು ಎಂದು ಎನ್.ಯು.ನಾಚಪ್ಪ ವಿಶ್ಲೇಷಿಸಿದ್ದಾರೆ.