ಯಲಬುರ್ಗಾ: ತಾಲೂಕಿನ ರೈತರಿಗೆ ಸಹಕಾರಿ ಕ್ಷೇತ್ರದ ಕುರಿತು ಸಮಗ್ರ ಮಾಹಿತಿ ನೀಡುವ ಉದ್ದೇಶದಿಂದ ಫೆ. ೮ರಂದು ಸಹಕಾರಿ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ ಹೇಳಿದರು.
ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಹಕಾರಿ ವಾರಪತ್ರಿಕೆಯ ವಿಶೇಷ ಸಂಚಿಕೆಯನ್ನು ಕಾನೂನು, ಸಂಸದೀಯ ಸಚಿವ ಎಚ್.ಕೆ. ಪಾಟೀಲ ಬಿಡುಗಡೆಗೊಳಿಸಲಿದ್ದಾರೆ. ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ. ದೇವೇಗೌಡ ಅವರು ಸಹಕಾರಿ ಪಿತಾಮಹ ಸಿದ್ದನಗೌಡ ಪಾಟೀಲ ಭಾವಚಿತ್ರಕ್ಕೆ ಪುಷ್ಪಾರ್ಪಣೆ ನೆರವೇರಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ವಸ್ತುಪ್ರದರ್ಶನ ಉದ್ಘಾಟಿಸುವರು. ಅಂದಿನ ಸಮಾವೇಶದಲ್ಲಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ೩೪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಪದಾಧಿಕಾರಿಗಳು, ೪ ಎಣ್ಣೆ ಬೀಜ ಬೆಳೆಗಾರರ ಸಂಘ, ಪಿಕಾರ್ಡ್, ಟಿಎಪಿಎಂಎಸ್, ತಾಲೂಕಿನ ಎಲ್ಲ ಸಹಕಾರಿ ಸಂಘಗಳ ಸಹಯೋಗದಲ್ಲಿ ನಡೆಯಲಿದೆ ಎಂದರು.
ಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರಗೌಡ ಉಳ್ಳಾಗಡ್ಡಿ, ಸಹಕಾರಿ ಸಂಘಗಳ ಉಪನಿಬಂಧಕ ವಿಶ್ವನಾಥ ಮಲಗೋಡ ಮಾತನಾಡಿದರು.ಈ ವೇಳೆಯಲ್ಲಿ ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ಎಚ್. ಪ್ರಾಣೇಶ, ತಾಪಂ ಇಒ ಸಂತೋಷ ಪಾಟೀಲ ಬಿರಾದರ, ಆರ್‌ಡಿಸಿಸಿ ಬ್ಯಾಂಕ್ ಎಂಡಿ ಮಲ್ಲಿಕಾರ್ಜುನ ಪೂಜಾರ, ಜಿಲ್ಲಾ ನಿಬಂಧಕ ಪ್ರಕಾಶ ಸಜ್ಜನ, ಸಹಕಾರಿ ಇಲಾಖೆಯ ಅಧಿಕಾರಿಗಳಾದ ಅಕ್ಷಯಕುಮಾರ, ಬಸವನಗೌಡ ಪಾಟೀಲ, ಮಧುಕರ ರಡ್ಡಿ, ಪಿಕಾರ್ಡ್ ವ್ಯವಸ್ಥಾಪಕ ಮೆಹೆಬೂಬ ಕೊತ್ವಾಲ ಮತ್ತಿತರರು ಇದ್ದರು.