ಕನ್ನಡಪ್ರಭ ವಾರ್ತೆ ಚಾಮರಾಜನಗರ
ಭ್ರಷ್ಟಾಚಾರದಲ್ಲಿ ತೊಡಗಿರುವ ಚಾಮರಾಜನಗರ ವೈದ್ಯಕೀಯ ಶಿಕ್ಷಣ ಸಂಸ್ಥೆಯ (ಸಿಮ್ಸ್) ಮುಖ್ಯ ಆಡಳಿತಾಧಿಕಾರಿ ಡಾ.ನಂಜುಂಡೇಗೌಡ ಹಾಗೂ ಸಾಮಾನ್ಯ ಶಸ್ತ್ರ ಚಿಕಿತ್ಸೆ ವಿಭಾಗದ ಡಾ.ಕಿರಣ್ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಅವರನ್ನು ಬೇರೆಡೆ ವರ್ಗಾವಣೆ ಮಾಡಬೇಕು ಎಂದು ದಲಿತ ಸಂಘಟನೆಗಳ ಒಕ್ಕೂದ ಜಿಲ್ಲಾ ಘಟಕದ ಸದಸ್ಯ ಪರ್ವತ್‌ರಾಜ್ ಆಗ್ರಹಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಮ್ಸ್ ಡೀನ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಡಾ.ಮಂಜುನಾಥ್ ಅವರು ಆಸ್ಪತ್ರೆಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೆ, ಇದನ್ನು ಸಹಿಸದ ಡಾ.ನಂಜುಂಡೇಗೌಡ, ಡಾ.ಕಿರಣ್ ಅವರು ಡೀನ್‌ಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಡಾ.ನಂಜುಂಡೇಗೌಡ ಅವರು ಭ್ರಷ್ಟ ಅಧಿಕಾರಿಯಾಗಿದ್ದು, ಯಾವುದೇ ಕೆಲಸಕ್ಕೂ ಹಣ ನೀಡುವಂತೆ ಸಿಬ್ಬಂದಿ ಹಾಗೂ ಗುತ್ತಿಗೆದಾರರಿಗೆ ಕಿರುಕುಳ ನೀಡುತ್ತಿದ್ದಾರೆ. ಈ ಹಿಂದೆ ಇವರು ಕೊಡಗು ಜಿಲ್ಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಲೋಕಾಯುಕ್ತದಲ್ಲಿ ಅತ್ಯಧಿಕ ಹಣ ಸಂಪಾದನೆ ದೂರಿನ ಹಿನ್ನೆಲೆ ಅಮಾನತಾಗಿದ್ದರು ಎಂದರು. ಜಾಮೀನಿನ ಮೇಲೆ ಹೊರ ಬಂದು ಹಿಂಬಡ್ತಿ ಮೇರೆಗೆ ಸಿಮ್ಸ್ ಮುಖ್ಯ ಆಡಳಿತಾಧಿಕಾರಿಯಾಗಿದ್ದಾರೆ. ಅಲ್ಲದೆ ಡಾ.ಕಿರಣ್ ಕೂಡ ರೋಗಿಗಳಿಗೆ ಕಿರುಕುಳ ನೀಡುತ್ತಿದ್ದು ಹೊರ ರೋಗಿಗಳನ್ನು ನೋಡುವುದಿಲ್ಲ. ಆಸ್ಪತ್ರೆಗೆ ಸರಿಯಾಗಿ ಬರುವುದಿಲ್ಲ, ಕೆಲವು ದೂರುಗಳು ಇವರ ಮೇಲೆ ಇದ್ದು, ಆಸ್ಪತ್ರೆಯ ಅಭಿವೃದ್ಧಿಗೆ ಹಾಗೂ ಬಡ ರೋಗಿಗಳಿಗೆ ಇವರು ಮಾರಕವಾಗಿದ್ದಾರೆ ಎಂದು ದೂರಿದರು.ಸಿಮ್ಸ್ ಅನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮಾಡಲು ಹಂತ ಹಂತವಾಗಿ ದೊಡ್ಡ ಯಂತ್ರಗಳನ್ನು ತರಿಸಲಾಗುತ್ತಿದ್ದು, ಲ್ಯಾಪ್ರೋಸ್ಕ್ರೋಪಿ ಯಂತ್ರವನ್ನು ಆಸ್ಪತ್ರೆಗೆ ತರಿಸಿ ಹಲವು ದಿನಗಳಾಗಿದ್ದರೂ ಸಾಮಾನ್ಯ ಶಸ್ತ್ರ ಚಿಕಿತ್ಸೆ ವಿಭಾಗದ ಡಾ.ಕಿರಣ್ ಯಂತ್ರವನ್ನು ಹಸ್ತಾಂತರ ಮಾಡಿಕೊಳ್ಳದೇ ರಾಜಕೀಯ ಮಾಡುತ್ತಿದ್ದು, ಬಡರೋಗಿಗಳಿಗೆ ಶಸ್ತ್ರಚಿಕಿತ್ಸೆ ನೀಡದೇ ದರ್ಪತೋರುತ್ತಿದ್ದಾರೆ ಎಂದು ಆರೋಪಿಸಿದರು.
ಗುಂಪುಗಾರಿಕೆ ಮಾಡಿಕೊಂಡು ಹಣ ವಸೂಲಿ ಮಾಡುತ್ತಿರುವ ಈ ಇಬ್ಬರನ್ನು ಕೂಡಲೇ ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ನಮ್ಮನೆ ಪ್ರಶಾಂತ್, ರಮೇಶ್, ಮಹದೇವಸ್ವಾಮಿ, ಶಿವಪ್ರಸಾದ್, ಚೇತನ್, ವಾಸು ಇದ್ದರು.