21ರಿಂದ ಆಕರ್ಷಕ ವಸ್ತು ಪ್ರದರ್ಶನ, ಆಹಾರ ಮೇಳ, ಭವ್ಯ ಸಾಂಸ್ಕೃತಿಕ ಮೆರವಣಿಗೆ
ಹಲವು ವರ್ಷಗಳ ಬಳಿಕ ನಡೆಯಲಿರುವ ಕರಾವಳಿ ಉತ್ಸವದಲ್ಲಿ ಕರಾವಳಿಯ ಸಂಸ್ಕೃತಿ, ಸಾಹಿತ್ಯ, ಉಡುಗೆ ತೊಡುಗೆಗಳು ಹಾಗೂ ಸಾಂಪ್ರದಾಯಿಕ ತಿಂಡಿ ತಿನಿಸುಗಳ ಪ್ರದರ್ಶನ ಮತ್ತು ಮಾರಾಟದ ಅಪೂರ್ವ ಕಾರ್ಯಕ್ರಮಗಳು ನಡೆಯಲಿವೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಕರಾವಳಿ ಉತ್ಸವದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕರಾವಳಿ ಉತ್ಸವದಿಂದ ಕರಾವಳಿಯ ನೈಜ ಸಂಸ್ಕೃತಿಯ ಅನಾವರಣಗೊಳ್ಳಲಿದೆ. ಈ ನಿಟ್ಟಿನಲ್ಲಿ ಇಲ್ಲಿನ ಸ್ಥಳೀಯ ವಿವಿಧ ಭಾಗ ಮತ್ತು ಜನಾಂಗಗಳ ಸಾಂಪ್ರದಾಯಿಕ ಸಾಂಸ್ಕೃತಿಕ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸಲಾಗುವುದು. ಕರಾವಳಿಯ ಪುರಾತನ ಸಂಸ್ಕೃತಿ ಹಾಗೂ ತಿಂಡಿ ತಿನಿಸುಗಳ ತಯಾರಿಕೆ ಮತ್ತು ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದಿವಾಸಿ ಮತ್ತು ಗುಡ್ಡಗಾಡು ಜನಾಂಗದ ಸಾಂಪ್ರದಾಯಿಕ ಉತ್ಪನ್ನಗಳ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
ಸಾಂಸ್ಕೃತಿಕ ಮೆರವಣಿಗೆ:
ಕರಾವಳಿ ಉತ್ಸವದ ಪ್ರಯುಕ್ತ ವಿವಿಧೆಡೆ ಏರ್ಪಡಿಸಲಾಗಿರುವ ಬೀಚ್ ಉತ್ಸವ, ಯುವ ಉತ್ಸವ, ಸಸ್ಯಮೇಳ ಮತ್ತಿತರ ಕಾರ್ಯಕ್ರಮಗಳಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದರು.
ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಜಿ. ಸಂತೋಷ್ ಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಸಿ.ಎಲ್. ಆನಂದ್, ಮೂಡಾ ಆಯುಕ್ತೆ ನೂರ್ ಜಹಾನ್ ಮತ್ತಿತರರು ಇದ್ದರು.