ಕರಾವಳಿ ಕರ್ನಾಟಕ: ಈ ಬಾರಿ ಸಂಕಷ್ಟಕ್ಕೆ ಸಿಲುಕಿದ ಮೀನುಗಾರಿಕೆ ಉದ್ಯಮ

KannadaprabhaNewsNetwork | Published : May 21, 2024 12:32 AM

ಸಾರಾಂಶ

ಮೇ 31ಕ್ಕೆ ಅಂತ್ಯವಾಗುವ ಮೀನುಗಾರಿಕಾ ಋತುಮಾನದಲ್ಲಿ ದ.ಕ. ಜಿಲ್ಲೆಯ ಮೀನುಗಾರಿಕೆ ದೊಡ್ಡ ಮಟ್ಟದ ನಷ್ಟಕ್ಕೆ ಒಳಗಾಗಿದ್ದು ಮೀನುಗಾರರು ಅತಂತ್ರರಾಗಿದ್ದಾರೆ. ಸಮಸ್ಯೆಗಳಿಗೆ ಸಕಾಲದಲ್ಲಿ ಸೂಕ್ತ ಪರಿಹಾರ ಕಂಡುಹಿಡಿಯದಿದ್ದರೆ ಭವಿಷ್ಯದಲ್ಲಿ ಮೀನುಗಾರಿಕೆ ಉದ್ಯಮ ಅತಂತ್ರವಾಗುವ ಆತಂಕ ಎದುರಾಗಿದೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಮಂಗಳೂರು

ದೇಶದ ಜಿಡಿಪಿಗೆ ದೊಡ್ಡ ಕೊಡುಗೆ ನೀಡುತ್ತಿರುವ, ಕರಾವಳಿಯ ಬೃಹತ್‌ ಉದ್ಯೋಗದಾತ ಉದ್ಯಮ ಮೀನುಗಾರಿಕೆ ಇದೀಗ ಭಾರೀ ಮೀನು ಅಭಾವಕ್ಕೆ ತುತ್ತಾಗಿ ಸಂಕಷ್ಟಕ್ಕೆ ಸಿಲುಕಿದೆ. ಮೇ 31ಕ್ಕೆ ಅಂತ್ಯವಾಗುವ ಮೀನುಗಾರಿಕಾ ಋತುಮಾನದಲ್ಲಿ ದ.ಕ. ಜಿಲ್ಲೆಯ ಮೀನುಗಾರಿಕೆ ದೊಡ್ಡ ಮಟ್ಟದ ನಷ್ಟಕ್ಕೆ ಒಳಗಾಗಿದ್ದು ಮೀನುಗಾರರು ಅತಂತ್ರರಾಗಿದ್ದಾರೆ. ಸಮಸ್ಯೆಗಳಿಗೆ ಸಕಾಲದಲ್ಲಿ ಸೂಕ್ತ ಪರಿಹಾರ ಕಂಡುಹಿಡಿಯದಿದ್ದರೆ ಭವಿಷ್ಯದಲ್ಲಿ ಮೀನುಗಾರಿಕೆ ಉದ್ಯಮ ಅತಂತ್ರವಾಗುವ ಆತಂಕ ಎದುರಾಗಿದೆ.

ಮೀನುಗಾರಿಕೆ ಇಲಾಖೆಯ ಅಂಕಿಅಂಶಗಳ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2021-22ರಲ್ಲಿ 3801.60 ಕೋಟಿ ರು. ಮೌಲ್ಯದ 2,91,812 ಟನ್ ಮೀನು ಹಿಡಿಯಲಾಗಿದ್ದರೆ, 2022- 23ರಲ್ಲಿ 4154 ಕೋಟಿ ರು. ಮೌಲ್ಯದ 3,33,537.05 ಟನ್ ಮೀನು ಹಿಡಿಯಲಾಗಿತ್ತು. ಆದರೆ ಈ ವರ್ಷ 2023-24ರಲ್ಲಿ ಕೇವಲ 2587.12 ಕೋಟಿ ಮೌಲ್ಯದ 1,89,924 ಟನ್ ಮೀನು ಹಿಡಿಯಲಾಗಿದ್ದು, ಮೀನು ಲಭ್ಯತೆಯ ಪ್ರಮಾಣವೇ ಕುಸಿದಿದೆ.

ಕಾನೂನು ಬಾಹಿರ ಮೀನುಗಾರಿಕೆ:

ಸಾಮಾನ್ಯವಾಗಿ ಅಕ್ಟೋಬರ್‌, ನವೆಂಬರ್‌ ತಿಂಗಳಲ್ಲಿ ಬಂಗುಡೆ ಮತ್ತು ಬೂತಾಯಿ ಮೀನು ದೊಡ್ಡ ಪ್ರಮಾಣದಲ್ಲಿ ಸಿಗುತ್ತದೆ. ಆದರೆ ಈ ವರ್ಷ ಈ ಎರಡೂ ಮೀನುಗಳ ಲಭ್ಯತೆ ಕಡಿಮೆಯಾಗಿತ್ತು. ಪರಿಣಾಮ ಮೀನು ದರ ವಿಪರೀತ ಏರಿಕೆಯಾಗಿದೆ. ಕೆಲವು ಮೀನುಗಾರರು ಅತಿಯಾಸೆಯಿಂದ ಲೈಟ್ ಫಿಶಿಂಗ್, ಬುಲ್ ಟ್ರಾಲಿಂಗ್, ಬಾಟಮ್ ಟ್ರಾಲಿಂಗ್, ಕಾನೂನಿಗೆ ವಿರುದ್ಧವಾದ ಗಾತ್ರದ ಬಲೆಗಳ ಬಳಕೆ ಇತ್ಯಾದಿ ನಿಯಮ ಮೀರಿ ಮೀನುಗಾರಿಕೆ ನಡೆಸುತ್ತಿರುವುದು ಮೀನು ಉತ್ಪಾದನೆ ಮೇಲೆ ದೊಡ್ಡ ಹೊಡೆತ ನೀಡಿದೆ. ಇದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು ಎಂದು ಮೀನುಗಾರ ಮುಖಂಡರು ಆಗ್ರಹಿಸುತ್ತಾರೆ. ಇನ್ನೊಂದೆಡೆ ಹವಾಮಾನ ವೈಪರೀತ್ಯವೂ ಮೀನುಗಾರಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

ನಷ್ಟದ ಭೀತಿ:

ಸಾಮಾನ್ಯವಾಗಿ 10 ದಿನಗಳ ಕಾಲ ಸಮುದ್ರದಲ್ಲೇ ಉಳಿದು ಮೀನುಗಾರಿಕೆ ನಡೆಸುವ ಟ್ರಾಲ್ ಬೋಟ್‌ಗಳಿಗೆ 6 ಸಾವಿರ ಲೀ. ಡೀಸೆಲ್ ಅಗತ್ಯ ಇರುತ್ತದೆ. ಡೀಸೆಲ್ ವೆಚ್ಚ, ಕಾರ್ಮಿಕರ ಮಜೂರಿ, ಮಂಜುಗಡ್ಡೆಯ ಮೇಲಿನ ವೆಚ್ಚವೇ ದೊಡ್ಡದಾಗಿರುತ್ತದೆ. ಇಷ್ಟನ್ನೂ ಭರಿಸಿ ಮೀನು ಸಿಗದೆ ಇದ್ದರೆ ದೊಡ್ಡ ಮಟ್ಟದ ನಷ್ಟ ಉಂಟಾಗುತ್ತದೆ. ಈ ಭೀತಿಯಿಂದ ಹಲವಾರು ಬೋಟುಗಳು ಈ ಬಾರಿ ಸಮುದ್ರಕ್ಕೆ ಇಳಿದೇ ಇಲ್ಲ.

‘ಇದು ಮೀನುಗಾರರನ್ನು ಸಂಕಷ್ಟಕ್ಕೆ ಒಡ್ಡಿದ ಮೀನುಗಾರಿಕಾ ಋತು. ಮೀನುಗಾರರು ತಮ್ಮ ಮನೆ, ಒಡವೆಗಳನ್ನೂ ಒತ್ತೆ ಇಡುವ ಪರಿಸ್ಥಿತಿ ಬಂದಿದೆ. ಕೇಂದ್ರ ಮೀನುಗಾರಿಕೆ ಸಚಿವರು ಎಲ್ಲ ರಾಜ್ಯಗಳ ಮೀನುಗಾರಿಕೆ ಸಚಿವರು ಮತ್ತು ಮೀನುಗಾರ ಮುಖಂಡರ ಸಭೆ ಕರೆದು ಮೀನುಗಾರರ ಶಿಫಾರಸುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಅವೈಜ್ಞಾನಿಕ ಮೀನುಗಾರಿಕೆಯಿಂದ ಮೀನುಗಾರಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಅಲ್ಲದೆ, ತಮಿಳುನಾಡು, ಕೇರಳದ ಮೀನುಗಾರರು ನಮ್ಮ ಮೀನುಗಾರರ ಮೇಲೆ ದಾಳಿಯಲ್ಲಿ ತೊಡಗಿದ್ದಾರೆ, ಎಲ್ಲದಕ್ಕೂ ಪರಿಹಾರ ಅಗತ್ಯವಿದೆ ಎಂದು ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ ಒತ್ತಾಯಿಸಿದ್ದಾರೆ.......................

ಜೂ.1ರಿಂದ ಮೀನುಗಾರಿಕಾ ನಿಷೇಧ

ಪಶ್ಚಿಮ ಕರಾವಳಿಯಲ್ಲಿ ಜೂ.1ರಿಂದ ಆರಂಭವಾಗಲಿರುವ 61 ದಿನಗಳ ವಾರ್ಷಿಕ ಯಾಂತ್ರೀಕೃತ ಮೀನುಗಾರಿಕೆ ನಿಷೇಧಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಮುಂಗಾರು ಆರಂಭ ಕಾಲವು ಮೀನುಗಳ ಸಂತಾನೋತ್ಪತ್ತಿಯ ಅವಧಿಯಾಗಿರುವುದರಿಂದ ಸರ್ಕಾರವು ಜೂ.1ರಿಂದ ಜುಲೈ 31ರವರೆಗೆ ಮೀನುಗಾರಿಕೆಯನ್ನು ನಿಷೇಧಿಸಿದೆ. ಅದರಂತೆ, 10 ಎಚ್‌ಪಿ ಮತ್ತು ಅದಕ್ಕಿಂತ ಹೆಚ್ಚಿನ ಇನ್‌ಬೋರ್ಡ್ ಅಥವಾ ಔಟ್‌ಬೋರ್ಡ್ ಎಂಜಿನ್‌ಗಳನ್ನು ಅಳವಡಿಸಲಾಗಿರುವ ಬೋಟ್‌ಗಳು ಈ ಅವಧಿಯಲ್ಲಿ ಮೀನುಗಾರಿಕೆ ನಡೆಸುವಂತಿಲ್ಲ. ಆದರೆ ನಾಡ ದೋಣಿಗಳಿಗೆ ಈ ನಿರ್ಬಂಧವಿಲ್ಲ.

...............

ವರ್ಷಮೀನು ಲಭ್ಯತೆ(ಟನ್‌ನಲ್ಲಿ)ಮೌಲ್ಯ

2014-151,50,5251075 ಕೋಟಿ

2015-161,51,4581370 ಕೋಟಿ

2016-171,52,573 1582 ಕೋಟಿ

2017-18 1,63,9251656 ಕೋಟಿ

2018-191,59,8521716 ಕೋಟಿ

2019-201,79,9442031 ಕೋಟಿ

2020-211,39,7141,924 ಕೋಟಿ

2021-222,91,8123801.60 ಕೋಟಿ

2022-233,33,537 4154 ಕೋಟಿ

2023-241,89,9243587.13 ಕೋಟಿ

Share this article