ಸಹಕಾರಿ ರಂಗದಲ್ಲಿ ಕರಾವಳಿ ಪ್ರೇರಣೆ: ಶ್ರೀ ವಿಖ್ಯಾತಾನಂದ ಸ್ವಾಮೀಜಿ

KannadaprabhaNewsNetwork |  
Published : Jul 14, 2024, 01:41 AM IST
ಗುರುಸಾನಿಧ್ಯ | Kannada Prabha

ಸಾರಾಂಶ

2007- 08ನೇ ಸಾಲಿನಲ್ಲಿ ಕೆ.ಜಿ. ಬಂಗೇರ ಅವರ ಅಧ್ಯಕ್ಷತೆಯಲ್ಲಿ ಸ್ಥಾಪನೆಗೊಂಡ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘ ಪದ್ಮನಾಭ ಮಾಣಿಂಜೆ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಹಾದಿಯಲ್ಲಿ ಮುನ್ನಡೆಯುತ್ತಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಅನೇಕ ಜಿಲ್ಲೆಗಳಿಗೆ ಸಹಕಾರಿ ರಂಗದಲ್ಲಿ ಜೀವ ನೀಡಿದ ಕರಾವಳಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಮೂಲ ಸ್ಥಾನವಾಗಿದೆ. ಇಲ್ಲಿ ಅತಿ ಹೆಚ್ಚು ಸಹಕಾರ ಸಂಘಗಳಿದ್ದು ಇನ್ನೊಬ್ಬರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ ಎಂಬ ನಿಟ್ಟಿನಲ್ಲಿ ಅವೆಲ್ಲವೂ ಸೇವೆ ನೀಡುತ್ತಿವೆ ಎಂದು ಬೆಂಗಳೂರು ಸೋಲೂರು ಮಠ ಆರ್ಯ ಈಡಿಗ ಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಹೇಳಿದ್ದಾರೆ. ಶನಿವಾರ, ಬೆಳ್ತಂಗಡಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ‘ಶ್ರೀ ಗುರು ಸಾನಿಧ್ಯ’ ವಾಣಿಜ್ಯ ಸಂಕೀರ್ಣದ ಲೋಕಾರ್ಪಣೆ ಮತ್ತು ಆಡಳಿತ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಿಗದ ಸೇವೆ ಸಹಕಾರಿ ಸಂಘಗಳ ಮೂಲಕ ಸಿಗುತ್ತಿದ್ದು ಜನಸಾಮಾನ್ಯರಿಗೆ ಸರಳವಾಗಿ ತ್ವರಿತ ಅಗತ್ಯ ವ್ಯವಸ್ಥೆಗಳಾಗುತ್ತಿವೆ ಎಂದು ಹೇಳಿದರು

ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಆಡಳಿತ ಕಚೇರಿ ಉದ್ಘಾಟಿಸಿ ಮಾತನಾಡಿ, ವಾಣಿಜ್ಯ ಬ್ಯಾಂಕುಗಳಲ್ಲಿ ಸಂಕುಚಿತ ಮನೋಭಾವವಿದ್ದರೆ, ಸಹಕಾರಿ ಸಂಘಗಳಲ್ಲಿ ವಿಕಸಿತ ಮನೋಭಾವವಿದ್ದು ಜನರ ನಾಡಿಮಿಡಿತಕ್ಕೆ ತಕ್ಕುದಾಗಿ ಕರ್ತವ್ಯ ನಿರ್ವಹಿಸುತ್ತಿವೆ. ಅವಿಭಜಿತ ದ.ಕ. ಜಿಲ್ಲೆ ರಾಜ್ಯದಲ್ಲಿ ಸಾಲ ಮರುಪಾವತಿಯಲ್ಲಿ ಮುಂಚೂಣಿಯಲ್ಲಿದೆ, ಮುಂದಿನ ದಿನಗಳಲ್ಲಿ ಸಂಘವು 50 ಶಾಖೆಗಳನ್ನು ನಿರ್ಮಿಸುವಂತಾಗಲಿ ಎಂದು ಶುಭಹಾರೈಸಿ, ಹೊಸ ಕಟ್ಟಡಕ್ಕೆ 5 ಲಕ್ಷ ರು. ದೇಣಿಗೆ ಘೋಷಿಸಿದರು.

ಭದ್ರತಾ ಕೊಠಡಿ ಉದ್ಘಾಟಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ, ಗುರುದೇವ ಸಂಘದ ಏಳಿಗೆಯಲ್ಲಿ ಕೆ.ಜಿ. ಬಂಗೇರ, ವಸಂತ ಬಂಗೇರ ಅವರಂತಹ ಹಿರಿಯರ ಪಾತ್ರ ಅನನ್ಯವಾದದು ಎಂದರು.

ಸಭಾಭವನ ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದಲ್ಲಿ ಶಿಕ್ಷಣ, ಸಹಕಾರಿ, ಸಾಮಾಜಿಕ, ಧಾರ್ಮಿಕ ವಿಚಾರಗಳಲ್ಲಿ ಕೈಗೊಂಡ ತತ್ವಗಳು ಅಜರಾಮರ ಎಂದರು.

ಸಂಘದ ಉಪಾಧ್ಯಕ್ಷ ಭಗೀರಥ ಜಿ. ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಭಾಸ್ಕರ್ ಎಸ್. ಕೋಟ್ಯಾನ್, ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಪುತ್ತೂರು ಇದರ ಅಧ್ಯಕ್ಷ ಭಾಸ್ಕರ್ ಎಂ. ಪೆರುವಾಯಿ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯ ವಿಕ್ರಮ ಪಿ., ಸಂಘದ ಸಿಇಒ ಅಶ್ವತ್ಥ್ ಕುಮಾರ್, ನಿರ್ದೇಶಕರು ಇದ್ದರು.

ನಿರ್ದೇಶಕ ಪಿ. ಧರಣೇಂದ್ರ ಕುಮಾರ್ ಸ್ವಾಗತಿಸಿದರು. ವಿಶೇಷ ಅಧಿಕಾರಿ ಮೋನಪ್ಪ ಪೂಜಾರಿ ಕಂಡೆತ್ಯಾರು ಸಂಘ ನಡೆದು ಬಂದ ದಾರಿ ಕುರಿತು ವಿವರ ನೀಡಿದರು. ಪ್ರಜ್ಞಾ ಓಡಿಲ್ನಾಳ ಮತ್ತು ದಿನೇಶ ಸುವರ್ಣ ರಾಯಿ ನಿರೂಪಿಸಿದರು. .....................

22 ಶಾಖೆಗಳನ್ನು ಹೊಂದಿರುವ ಸಂಘ

2007- 08ನೇ ಸಾಲಿನಲ್ಲಿ ಕೆ.ಜಿ. ಬಂಗೇರ ಅವರ ಅಧ್ಯಕ್ಷತೆಯಲ್ಲಿ ಸ್ಥಾಪನೆಗೊಂಡ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘ ಪದ್ಮನಾಭ ಮಾಣಿಂಜೆ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಹಾದಿಯಲ್ಲಿ ಮುನ್ನಡೆಯುತ್ತಿದೆ. ‘ನಿಮ್ಮ ಸ್ಪೂರ್ತಿಯೇ ನಮ್ಮ ಉತ್ಕೃಷ್ಟ ಸೇವೆ’ ಎಂಬ ಧ್ಯೇಯದಡಿ ರಾಷ್ಟ್ರೀಕೃತ ಬ್ಯಾಂಕುಗಳು ನೀಡುವ ಹೆಚ್ಚಿನ ಎಲ್ಲ ಸೇವೆಗಳನ್ನು ಸದಸ್ಯರಿಗೆ ನೀಡುತ್ತಿದೆ. ಮೈಸೂರು ಪ್ರಾಂತ್ಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು 22 ಶಾಖೆಗಳನ್ನು ಹೊಂದಿದ್ದು 2025ಕ್ಕೆ ಶಾಖೆಗಳನ್ನು 25ಕ್ಕೆ ಏರಿಸುವ ಗುರಿ ಹೊಂದಲಾಗಿದೆ. ಇದೀಗ 5.50 ಕೋಟಿ ರು. ವೆಚ್ಚದ ಸುಸಜ್ಜಿತ ವಾಣಿಜ್ಯ ಸಂಕೀರ್ಣ ಹಾಗೂ ಆಡಳಿತ ಕಚೇರಿ ಲೋಕಾರ್ಪಣೆಗೊಂಡಿದೆ.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ