ಕನ್ನಡಪ್ರಭ ವಾರ್ತೆ ಕಾಪುಅಂತಾರಾಷ್ಟ್ರೀಯ ಖ್ಯಾತಿಯ, ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಪದ್ಮವಿಭೂಷಣ ಶ್ರೀ ರವಿಶಂಕರ ಗುರೂಜಿ ಅವರು ಗಾನ, ಜ್ಞಾನ, ಧ್ಯಾನಗಳ ಆನಂದ ಲಹರಿ ಕಾರ್ಯಕ್ರಮವನ್ನು ಇಲ್ಲಿನ ಕಡಲ ಕಿನಾರೆಯಲ್ಲಿ ಮಂಗಳವಾರ ಸಂಜೆ ನಡೆಸಿಕೊಟ್ಟರು.ಈ ಸಂದರ್ಭ ಮಾತನಾಡಿದ ಅವರು, ವಸುದೈವ ಕುಟುಂಬಕಂ ಉದ್ಘಾರವನ್ನು ಪ್ರಪಂಚಕ್ಕೆ ಕೊಟ್ಟ ದೇಶ ಭಾರತ. ಭಾರತವು ಸನಾತನ ಧರ್ಮ, ಜ್ಞಾನಾಧಾರಿತ ತಂತ್ರಜ್ಞಾನ, ಒಡವೆ - ವಸ್ತ್ರ, ಪ್ರವಾಸೋದ್ಯಮ, ಆಯುರ್ವೇದ, ವೈವಿಧ್ಯ ಆಹಾರ ಪದ್ಧತಿ, ಕಲೆ - ಸಂಸ್ಕೃತಿ- ಸಿದ್ಧಾಂತಗಳು ವಿಶ್ವಕ್ಕೆ ನೀಡಿದ ಶ್ರೇಷ್ಠತೆ ಕೊಡುಗೆಗಳಾಗಿವೆ. ಇದು ನಮ್ಮೆಲ್ಲರ ಹೆಮ್ಮೆಯಾಗಿದೆ ಎಂದರು.
ನಮ್ಮ ದೇಶದಲ್ಲಿ ಆಧ್ಯಾತ್ಮಿತ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕಾಗಿದೆ. ಉಡುಪಿಯ ಕಡಲ ತೀರಗಳು ಮಾಲ್ಡಿವ್ಸ್, ಬಾಲಿ ದೇಶಗಳ ತೀರಗಳನ್ನು ಮೀರಿಸುವಂತಿವೆ. ಈ ತೀರಗಳನ್ನು ಇಲ್ಲಿರುವ ಕಲೆ, ಆಯುರ್ವೇದದ ಜೊತೆಗೆ ಪ್ರಪಂಚಕ್ಕೆ ಪರಿಚಯಿಸಬೇಕಾಗಿದೆ ಎಂದವರು ಅಭಿಪ್ರಾಯಪಟ್ಟರು.ಇದಕ್ಕೆ ಮೊದಲು ಅದ್ದೂರಿ ಮೆರವಣಿಗೆಯಲ್ಲಿ ಶ್ರೀ ರವಿಶಂಕರ ಗುರೂಜಿ ಅವರನ್ನು ಕಡಲ ಕಿನಾರೆಯಲ್ಲಿ ನಿರ್ಮಿಸಲಾಗಿದ್ದ ಬೃಹತ್ ವೇದಿಕೆಗೆ ಕರೆ ತರಲಾಯಿತು. ಗುರೂಜಿ ಅವರು ಸತ್ಸಂಗದ ಜೊತೆಗೆ ಸುದರ್ಶನ ಕ್ರಿಯಾಯೋಗವನ್ನು ನಡೆಸಿದರು,
ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಜನಸಾಗರದ ನಡುವೆ ಸಂಚರಿಸಿದ ಗುರೂಜಿ ಅವರು ಗುಲಾಬಿ ಪುಷ್ಪದಳಗಳನ್ನು ಪ್ರಸಾದವಾಗಿ ವಿತರಿಸಿದರು.ಈ ಕಾರ್ಯಕ್ರಮ ಸಂಯೋಜಕರಾದ ಕಾಪು ಕ್ಷೇತ್ರ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಹರೀಶ್ ಪಿ. ಶೆಟ್ಟಿ ಗುರ್ಮೆ, ಸತೀಶ್ ಪಿ. ಶೆಟ್ಟಿ ಗುರ್ಮೆ, ರಾಜ್ಯ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಎಂಆರ್‌ಜಿ ಗ್ರೂಪ್ ಸಿಎಂಡಿ ಬಂಜಾರ ಪ್ರಕಾಶ್ ಶೆಟ್ಟಿ. ರಾ.ಸ್ವ.ಸೇ.ಸಂಘದ ದಾ. ಮ. ರವೀಂದ್ರ, ಶಂಭು ಶೆಟ್ಟಿ, ಕಾಪು ತಹಸೀಲ್ದಾರ್ ಡಾ. ಪ್ರತಿಭಾ ಆರ್., ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಪ್ರಮುಖರಾದ ಕಿಶೋರ್ ಕುಮಾರ್ ಗುರ್ಮೆ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿತೇಂದ್ರ ಶೆಟ್ಟಿ, ಪೂನಾ ಸಂತೋಷ್ ಶೆಟ್ಟಿ, ರೇಶ್ಮಾ ಉದಯ ಶೆಟ್ಟಿ, ಗೀತಾಂಜಲಿ ಎಂ. ಸುವರ್ಣ, ಶಿಲ್ಪಾ ಜಿ. ಸುವರ್ಣ, ವೀಣಾ ಶೆಟ್ಟಿ, ಶ್ರೀಕಾಂತ್ ನಾಯಕ್, ಸದಾಶಿವ ಕರ್ಕೇರ, ಡಾ. ಕೃಷ್ಣ ಪ್ರಸಾದ್, ಡಾ. ಚಂದ್ರಶೇಖರ್, ಕೆ. ವಾಸುದೇವ ಶೆಟ್ಟಿ, ನಡಿಕೆರೆ ರತ್ನಾಕರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.