ಮುಖ್ಯ) ಸಾವಿರದತ್ತ ಕೊಕ್ಕೋ ಧಾರಣೆ: ರೈತರ ಮುಖದಲ್ಲಿ ಮೂಡಿದ ಸಂತಸ

KannadaprabhaNewsNetwork | Published : Apr 20, 2024 1:06 AM

ಸಾರಾಂಶ

ಕ್ಯಾಂಪ್ಕೋದಲ್ಲಿ ಶುಕ್ರವಾರ ಒಣಕೊಕ್ಕೋ ಕೆ.ಜಿ.ಗೆ ೮೦೦ರಿಂದ ೯೦೦ ರುಪಾಯಿಗೆ ಹಾಗೂ ಹಸಿಕೊಕ್ಕೋ ೨೫೦ರಿಂದ ೩೦೦ ರುಪಾಯಿ ದರದಲ್ಲಿ ಖರೀದಿಯಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಗುಣಮಟ್ಟದ ಒಣ ಕೊಕ್ಕೋ ೮೪೦ ಹಾಗೂ ಹಸಿ ಕೊಕ್ಕೋ ೨೭೦ ರು. ತನಕ ಖರೀದಿಯಾಗಿದೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಜಿಲ್ಲೆಯ ಪ್ರಮುಖ ಬೆಳೆಯಾಗಿರುವ ಅಡಕೆಯು ಹಂತ ಹಂತವಾಗಿ ತನ್ನ ಧಾರಣೆಯನ್ನು ಕಡಿತಗೊಳಿಸುತ್ತಾ ರೈತರಿಗೆ ಚಿಂತೆ ಮೂಡಿಸುತ್ತಿದ್ದರೆ, ಇದೀಗ ಕೊಕ್ಕೋ ಬೆಳೆ ಧಾರಣೆಯು ಎತ್ತರಕ್ಕೆ ಮುಖಮಾಡಿ ರೈತನ ಮುಖದಲ್ಲಿ ಸಂತಸ ಮೂಡಿಸುತ್ತಿದೆ.

ಕರಾವಳಿಯ ಉಪಬೆಳೆಯಾದ ಆಹಾರ ಬೆಳೆ ಕೊಕ್ಕೋ ಧಾರಣೆ ಕೆ.ಜಿ.ಗೆ ಸಾವಿರದತ್ತ ಮುನ್ನುಗ್ಗುವ ಮೂಲಕ ಇತಿಹಾಸದ ಪುಟಗಳಲ್ಲಿ ದಾಖಲಾಗುವತ್ತ ಹೆಜ್ಜೆ ಇಟ್ಟಿದೆ.

ಕೊಕ್ಕೋದ ಪ್ರಮುಖ ಖರೀದಿದಾರ ಸಹಕಾರ ಸಂಸ್ಥೆ ಕ್ಯಾಂಪ್ಕೋದಲ್ಲಿ ಶುಕ್ರವಾರ ಒಣಕೊಕ್ಕೋ ಕೆ.ಜಿ.ಗೆ ೮೦೦ರಿಂದ ೯೦೦ ರುಪಾಯಿಗೆ ಹಾಗೂ ಹಸಿಕೊಕ್ಕೋ ೨೫೦ರಿಂದ ೩೦೦ ರುಪಾಯಿ ದರದಲ್ಲಿ ಖರೀದಿಯಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಗುಣಮಟ್ಟದ ಒಣ ಕೊಕ್ಕೋ ೮೪೦ ಹಾಗೂ ಹಸಿ ಕೊಕ್ಕೋ ೨೭೦ ರು. ತನಕ ಖರೀದಿಯಾಗಿದೆ. ೨೦೨೪ ರ ಫೆಬ್ರವರಿ ಆರಂಭದಲ್ಲಿ ಹಸಿ ಕೊಕ್ಕೋ ೭೦ ರಿಂದ ೯೦ ರುಪಾಯಿಗೆ ಹಾಗೂ ಒಣ ಕೊಕ್ಕೋ ೨೫೦ ರಿಂದ ೩೫೦ ರುಪಾಯಿಗೆ ಏರಿಕೆಯಾಗಿ ಸಾರ್ವತ್ರಿಕ ದಾಖಲೆಯತ್ತ ದರ ಮುನ್ನುಗ್ಗಲಾರಂಭಿಸಿತ್ತು. ಹೀಗೆ ಏರಿಕೆಯತ್ತ ಮುಖಡಾದಿ ಧಾರಣೆಯು ಇದೀಗ ಎಲ್ಲ ಸಾಧ್ಯತೆಗಳನ್ನೂ ಮೀರಿ ಒಣ ಕೊಕ್ಕೋ ಕೆ.ಜಿ.ಗೆ. ೧೦೦೦ ರುಪಾಯಿ ದಾಟುವ ಹಾಗೂ ಹಸಿ ಕೊಕ್ಕೋ ಕೆ.ಜಿ.ಗೆ ೩೦೦ ರು. ದಾಟುವ ಸಾಧ್ಯತೆಯಿದೆ ಎಂದು ಕೃಷಿಕರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಹೊಂದಿರುವ ಕೊಕ್ಕೋ ಆಹಾರ ಉತ್ಪನ್ನಗಳಿಗೆ ಸಂಬಂಧಿಸಿದಂತೆ ವ್ಯಾಪಕ ಪ್ರಮಾಣದಲ್ಲಿ ಬೇಡಿಕೆ ಹೊಂದಿದ್ದರೂ ಮಾರುಕಟ್ಟೆಗೆ ಆವಕ ಕಡಿಮೆ ಇರುವುದು ಹಾಗೂ ಕೊಕ್ಕೋದ ಪ್ರಮುಖ ಬೆಳೆಗಾರ ಆಫ್ರೀಕಾ ರಾಷ್ಟ್ರಗಳಲ್ಲಿ ವೈರಸ್ ರೋಗದ ದಾಳಿಗೆ ಒಳಗಾಗಿ ನಾಶವಾಗಿ ಕೆಲವು ವರ್ಷಗಳ ಮಟ್ಟಿಗೆ ಬೆಳೆ ತೆಗೆಯಲು ಸಾಧ್ಯವಾಗದೆ ಇರುವುದು ಈ ಬೆಳವಣಿಗೆಗೆ ಕಾರಣವಾಗಿದೆ. ಧಾರಣೆ ಏರಿಕೆಯ ಗುಣಾತ್ಮಕ ಬೆಳವಣಿಗೆ ಮುಂದುವರಿಯುವ ಸಾಧ್ಯತೆಯನ್ನು ತೆರೆದಿಟ್ಟಿದೆ.

ಕರಾವಳಿಯ ಪ್ರಮುಖ ವಾಣಿಜ್ಯ ಬೆಳೆ ಅಡಕೆಯ ಅಸ್ಥಿರತೆಯ ಮಧ್ಯೆಯೂ ಕೊಕ್ಕೋವನ್ನು ಒಂದಷ್ಟು ನಿರ್ಲಕ್ಷಿಸಿದ್ದ ಬೆಳೆಗಾರರು ಉಪ ಬೆಳೆಯಾಗಿ ಮತ್ತೆ ಬೆಳೆಯಲು ಆರಂಭಿಸಿರುವುದು ಕಂಡು ಬರುತ್ತಿದೆ. ಕೆಲವರು ಕೊಕ್ಕೋ ಗಿಡಗಳ ನಿರ್ವಹಣೆ ಮಾಡದೆ ಬಿಟ್ಟವರು ಹಾಗೂ ಕೊಕ್ಕೋ ಗಿಡಗಳನ್ನು ತೋಟದ ನಡುವಿನಿಂದ ತೆರವುಗೊಳಿಸಿದವರು ಮತ್ತೆ ರೈತರಿಗೆ ಆಶಾದಾಯಕ ಆದಾಯದ ಭರವಸೆ ಮೂಡಿಸಿದೆ.

Share this article