ತೆಂಗಿಗೆ ಸರ್ಕಾರದಿಂದ ಪ್ರೋತ್ಸಾಹ ಸಿಗಬೇಕು: ಶಿವಾನಂದ ಪಾಟೀಲ

KannadaprabhaNewsNetwork |  
Published : Sep 30, 2024, 01:16 AM IST
29ಸಿಎಚ್‌ಎನ್51ಚಾಮರಾಜನಗರ ತಾಲೂಕಿನ ಮುಣಚನಹಳ್ಳಿಯ ತೆಂಗು ಸಂಸ್ಕರಣ ಘಟಕದಲ್ಲಿ ಚಾಮರಾಜನಗರ ತಾಲೂಕು ತೆಂಗು ಬೆಳೆಗಾರರ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ತೆಂಗು ದಿನಾಚರಣೆ ಮತ್ತು ತೆಂಗು ಬೆಳೆಗಾರರ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್‌ ಉದ್ಘಾಟಿಸಿದರು. | Kannada Prabha

ಸಾರಾಂಶ

ಚಾಮರಾಜನಗರ: ತೆಂಗಿಗೆ ಸರ್ಕಾರದಿಂದ ಪ್ರೋತ್ಸಾಹ ಸಿಗುತ್ತಿಲ್ಲ ಎಂಬ ನೋವು ತೆಂಗು ಬೆಳೆಗಾರರಲ್ಲಿದ್ದು, ಸರ್ಕಾರದಿಂದ ಪ್ರೋತ್ಸಾಹ ಸಿಗಬೇಕಿದೆ ಎಂದು ಕೃಷಿ ಮಾರಾಟ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಚಾಮರಾಜನಗರ: ತೆಂಗಿಗೆ ಸರ್ಕಾರದಿಂದ ಪ್ರೋತ್ಸಾಹ ಸಿಗುತ್ತಿಲ್ಲ ಎಂಬ ನೋವು ತೆಂಗು ಬೆಳೆಗಾರರಲ್ಲಿದ್ದು, ಸರ್ಕಾರದಿಂದ ಪ್ರೋತ್ಸಾಹ ಸಿಗಬೇಕಿದೆ ಎಂದು ಕೃಷಿ ಮಾರಾಟ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ತಾಲೂಕಿನ ಮುಣಚನಹಳ್ಳಿಯ ತೆಂಗು ಸಂಸ್ಕರಣ ಘಟಕದಲ್ಲಿ ಚಾಮರಾಜನಗರ ತಾಲೂಕು ತೆಂಗು ಬೆಳೆಗಾರರ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ತೆಂಗು ದಿನಾಚರಣೆ ಮತ್ತು ತೆಂಗು ಬೆಳೆಗಾರರ ರಾಜ್ಯ ಮಟ್ಟದ ಕಾರ್ಯಾಗಾರ ಕಾರ್ಯಕ್ರಮದಲ್ಲಿ ತೆಂಗು ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದರು. ತೋಟಗಾರಿಕೆ ಬೆಳೆಯನ್ನು ಬೆಳೆಯುವುದರಿಂದ ರೈತರಿಗೆ ಕಷ್ಟ ಇರಲ್ಲ, ತೆಂಗು ಬಹಳ ದೊಡ್ಡ ಮಹತ್ವವನ್ನು ಪಡೆದುಕೊಂಡಿದೆ. ದಕ್ಷಿಣ ಭಾರತದಲ್ಲಿ ತೆಂಗು ಬೆಳೆಯುವ ರಾಜ್ಯಗಳಲ್ಲಿ ಮೊದಲ ಸ್ಥಾನ ಕೇರಳವಾಗಿದ್ದು, 7.64ಲಕ್ಷ ಹೆಕ್ಟೆರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ಕರ್ನಾಟಕ ರಾಜ್ಯ 2ನೇ ಸ್ಥಾನದಲ್ಲಿ 7.4 ಲಕ್ಷಹೆಕ್ಟೆರ್‌ ಪ್ರದೇಶದಲ್ಲಿ ಬೆ‍ಳೆಯುತ್ತಿದೆ ಎಂದರು.

ವಿಧಾನಸೌಧದಲ್ಲಿ 2 ಬಾರಿ ತೆಂಗು ಬೆಳೆಯ ಪ್ರೋತ್ಸಾಹಕ್ಕೆ ಪ್ರಸ್ತಾಪವಾಗಿದ್ದು, ಅನೇಕ ಬಾರಿ ತೆಂಗು ಬೆಳೆಯಲ್ಲಿ ಏರಿಳಿತ ಕಂಡಿದೆ. ಆದ್ದರಿಂದ ಸರ್ಕಾರ ಎಂಎಸ್‌ಪಿ ಅಡಿಯಲ್ಲಿ ಶೇ.25ರಷ್ಟು ತೆಂಗನ್ನು ಖರೀದಿಸಿದೆ. ತೆಂಗಿಗೆ ಸ್ಥಿರವಾದ ದರ ಅಗತ್ಯವಿದೆ ಎಂದರು. ರೈತರು ತೋಟಗಾರಿಕೆ ಬೆಳೆಯನ್ನು ಬೆಳೆಯುವ ಮೂಲಕ ರೈತರು ಕಷ್ಟದಿಂದ ಪಾರಾಗಲು ತೆಂಗು ಬೆಳೆ ನೆರವಾಗುತ್ತದೆ ಎಂದರು. ವೈಜ್ಞಾನಿಕ ಕೃಷಿಯಿಂದ ರೈತರ ಬದುಕು ಬದಲಾವಣೆಯಾಗಲಿದೆ. ವೈಜ್ಞಾನಿಕ ಕೃಷಿ ಮಾಡದಿದ್ದರೆ ಬದುಕು ಕಟ್ಟಿಕೊಳ್ಳಲು ಆಗಲ್ಲ, ಒಂದೇ ಬೆಳೆ ಬೆಳೆಯದೇ ವಿವಿಧ ಬೆಳೆಗಳನ್ನು ಬೆಳೆಯುವುದರಿಂದ ಉಜ್ವಲ ಭವಿಷ್ಯವಿದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು ಎಂದರು. ಸಹಕಾರ ಸಂಘದಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳ‍ೆಸಿಕೊಳ್ಳಬೇಕು, ಸಹಕಾರ ಸಂಘಗಳಿಂದಲೇ ರೈತರು ಬದುಕಿದ್ದಾರೆ ಎಂದರೇ ತಪ್ಪಾಗಲಾರದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಮಾತನಾಡಿ, ರೈತರಿಗೆ ತೆಂಗು ಬೆಳೆ ಆದಾಯ ತಂದುಕೊಡುವ ಬೆಳೆಯಾಗಿದೆ ಎಂದರು. ಜಿಲ್ಲೆಯಲ್ಲಿ 12 ಸಾವಿರ ಹೆಕ್ಟೆರ್ ತೆಂಗು ಬೆಳೆಯಲಾಗಿದ್ದು, 12 ಕೋಟಿ ಕಾಯಿ ಉತ್ಪಾದನೆಯಾಗುತ್ತಿದೆ. ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆ ಹೆಚ್ಚಾಗಿ ಮಾಡಲಾಗಿದೆ ಎಂದರು. ಸಮಸ್ಯೆಗಳ ಜೊತೆಗೆ ರೈತರು ಬದುಕಿದ್ದಾರೆ. ಒಂದೇ ಸಲ ಎಲ್ಲಾ ಸಮಸ್ಯೆಗಲು ಬಗೆಹರಿಸಲು ಸಾಧ್ಯವಿಲ್ಲ. ರೈತ ಸಂಘ ನಿರಂತರ ಸಮಾಲೋಚನೆ ಸಂಘರ್ಷ ಸರ್ಕಾರದೊಂದಿಗೆ ಇದೆ. ಸರ್ಕಾರ ರೈತರ ಪರವಾಗಿ ಇರಲಿದೆ ಎಂದರು.

ಸೂತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಜೀ ಮಾತನಾಡಿ, ತೆಂಗಿನಿಂದ ಉಪ ಉತ್ಪನ್ನಗಳನ್ನು ಮಾಡುವ ಮೂಲಕ ಆದಾಯ ಗಳಿಸಬಹುದಾಗಿದೆ ಎಂದರು. ರೈತ ಸಂಘಗಳು ರಾಜಕೀಯ ಪಕ್ಷಗಳಂತೆ ಆಗಿದೆ. ಏಕ ಮನಸ್ಥಿತಿಯಿಂದ ಒಂದೇ ಸಂಘ ಇರಬೇಕು ಆಗ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿ ರೈತರ ಅನೇಕ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಲು ಸಾಧ್ಯವಾಗಲಿದೆ ಎಂದರು. ರೈತ ಸಂಘದ ರಾಜ್ಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಎಳೆನೀರು ಸಂಸ್ಕರಣೆಗೆ ಒತ್ತು ನೀಡಿದರೆ ಒಳ್ಳೆಯ ಅನುಕೂಲವಾಗಲಿದೆ. ಸರ್ಕಾರ ತೆಂಗು ಬೆಳೆಗಾರರಿಗೆ ಒತ್ತಾಸೆಯಾಗಿ ನಿಲ್ಲಬೇಕು ಎಂದು ಆಗ್ರಹಿಸಿದರು. ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ತಾಲೂಕು ತೆಂಗು ಬೆಳೆಗಾರರ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘದ ಅಧ್ಯಕ್ಷ ಎ.ಎಂ ಮಹೇಶ್‌ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎ.ಆರ್‌.ಕೃಷ್ಣಮೂರ್ತಿ, ಗಣೇಶ್‌ ಪ್ರಸಾದ್‌, ಕಾಡಾ ಅಧ್ಯಕ್ಷ ಮರಿಸ್ವಾಮಿ, ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಎಚ್‌.ವಿ ಚಂದ್ರು, ಚೂಡಾ ಅಧ್ಯಕ್ಷ ಅಸ್ಗರ್ ಮುನ್ನಾ, ತೆಂಗು ಅಭಿವೃದ್ಧಿ ಅಧಿಕಾರಿ ಡಾ.ಬಿ.ಹನುಮಂತೇಗೌಡ, ಜಿಲ್ಲಾಧಿಕಾರಿ ಶಿಲ್ಪಾನಾಗ್‌, ಜಿಪಂ ಸಿಇಒ ಮೋನಾ ರೋತ್‌, ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಕವಿತಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ