ಕಾಫಿ ಕ್ಯೂರಿಂಗ್‌ ವ್ಯಾಪಾರಿಗಳಿಂದ ಕಾಫಿ ಬೆಳೆಗಾರರ ಶೋಷಣೆ

KannadaprabhaNewsNetwork |  
Published : Sep 07, 2025, 01:00 AM IST
6ಎಚ್ಎಸ್ಎನ್13ಎ :  ಹೊಂಕರವಳ್ಳಿ ಧರ್ಮರಾಜ್.  ಗೀತಾ ಕಾಫಿ ಟ್ರೇಡರ್. | Kannada Prabha

ಸಾರಾಂಶ

ಕಾಫಿ ರಫ್ತುದಾರರು ಸ್ಥಳೀಯ ಕಾಫಿ ವ್ಯಾಪಾರಿಗಳು ಹಾಗೂ ಕ್ಯೂರಿಂಗ್ ವರ್ಕ್ಸ್‌ ಮಾಲೀಕರು ಒಂದಾಗಿ ಕಾಫಿ ಬೆಳೆಗಾರರನ್ನು ಶೋಷಿಸುತ್ತಿದ್ದಾರೆಂಬ ಆರೋಪ ಬೆಳೆಗಾರರ ವಲಯದಿಂದ ದಟ್ಟವಾಗಿ ಕೇಳಿ ಬರುತ್ತಿದೆ. ನಾಲ್ಕನೂರಕ್ಕಿಂತ ಕಡಿಮೆ ಒ.ಟಿ ಧಾರಣೆ ಬಂದರೆ ಕಾಫಿ ಕೊಳ್ಳಲು ಆರಂಭಿಸುತ್ತಾರೆ. ಆದ್ದರಿಂದ, ಕಾಫಿ ಕೊಳ್ಳಲು ನಿರಾಕರಿಸುವ ರಪ್ತುದಾರರ ಪರವನಾಗಿಯನ್ನೆ ರದ್ದುಮಾಡುವಂತೆ ಕಾಫಿ ಮಂಡಳಿಗೆ ವಿನಂತಿಸಿದರೆ, ರಫ್ತುದಾರರು ಇವರ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಾರೆ. ಆದ್ದರಿಂದ, ಬೆಳೆಗಾರರಿಗಾಗುತ್ತಿರುವ ಮೋಸದ ಬಗ್ಗೆ ಕೇಂದ್ರ ವಾಣಿಜ್ಯಮಂತ್ರಿಗಳಿಗೆ ತಿಳಿಸುವ ಮೂಲಕ ಕ್ರಮಕ್ಕೆ ಆಗ್ರಹಿಸುವ ಬಗ್ಗೆ ಚರ್ಚೆಗಳು ನಡೆದಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ ಕಾಫಿ ರಫ್ತುದಾರರು ಸ್ಥಳೀಯ ಕಾಫಿ ವ್ಯಾಪಾರಿಗಳು ಹಾಗೂ ಕ್ಯೂರಿಂಗ್ ವರ್ಕ್ಸ್‌ ಮಾಲೀಕರು ಒಂದಾಗಿ ಕಾಫಿ ಬೆಳೆಗಾರರನ್ನು ಶೋಷಿಸುತ್ತಿದ್ದಾರೆಂಬ ಆರೋಪ ಬೆಳೆಗಾರರ ವಲಯದಿಂದ ದಟ್ಟವಾಗಿ ಕೇಳಿ ಬರುತ್ತಿದೆ.ಹೌದು ಇಂತಹದೊಂದು ಆರೋಪ ಕಳೆದ ಎರಡು ವರ್ಷದಿಂದ ಕ್ಷೀಣವಾಗಿ ಕೇಳಿ ಬರುತ್ತಿದ್ದರೆ ಕಳೆದ ಹದಿನೈದು ದಿನಗಳಿಂದ ಪ್ರಬಲಗೊಂಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಫಿ ಧಾರಣೆ ಹೆಚ್ಚಿದ್ದರೂ ಸ್ಥಳೀಯ ವ್ಯಾಪಾರಿಗಳು ಧಾರಣೆ ನೀಡದೆ ವಂಚಿಸುತ್ತಿದ್ದು, ಈ ಅನ್ಯಾಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಸುವ ಮೂಲಕ ರಫ್ತುದಾರರಿಗೆ ಬುದ್ಧಿ ಕಲಿಸಬೇಕು ಎಂಬ ಆಗ್ರಹ ವ್ಯಕ್ತವಾಗುತ್ತಿದೆ. ಈ ಬಗ್ಗೆ ಕಳೆದ ಎರಡು ದಿನಗಳ ಹಿಂದೆ ಕೊಡಗಿನಲ್ಲಿ ಸಾರ್ವಜನಿಕರ ಸಭೆ ನಡೆಸಿದರೆ ತಾಲೂಕಿನಲ್ಲಿ ಬೆಳೆಗಾರರ ಮಾಸಿಕ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಬೆಳೆಗಾರರು, ಸ್ಥಳೀಯ ವರ್ತಕರು ಹಾಗೂ ಕ್ಯೂರಿಂಗ್ ವರ್ಕ್ಸ್‌ ಮಾಲೀಕರ ವಿರುದ್ಧ ಹರಿಹಾಯ್ದಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ದರ ಹೆಚ್ಚಾದರೂ ಸ್ಥಳೀಯ ವ್ಯಾಪಾರಿಗಳು ದರ ಹೆಚ್ಚಿಸದೆ ಬೆಳೆಗಾರರಿಗೆ ವಂಚಿಸುತ್ತಿದ್ದಾರೆ. ಈ ಬಗ್ಗೆ ರಫ್ತುದಾರರನ್ನು ಪ್ರಶ್ನಿಸಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಎಲ್ಲ ಕಂಪನಿಗಳು ತಮಗೆ ಅಗತ್ಯವಿರುವಷ್ಟು ಕಾಫಿ ಖರೀದಿಸಿದ್ದಾರೆ. ಆದ್ದರಿಂದ, ನಮಗೆ ಬೇಡಿಕೆ ಇಲ್ಲದೆ ನಾವು ಕಾಫಿ ರಫ್ತುಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿದ್ದಾರೆ. ಆದರೆ, ಪ್ರಸಕ್ತ ವರ್ಷ ಬೆಲೆ ಹೆಚ್ಚಳದ ನಿರೀಕ್ಷೆಯಲ್ಲಿ ಬೆಳೆಗಾರರು ತಾವು ಬೆಳೆದ ಕಾಫಿಯ ಅರ್ಧದಷ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿಲ್ಲ ಪರಿಸ್ಥಿತಿ ಹೀಗಿರುವಾಗ ಎಲ್ಲ ಕಂಪನಿಗಳು ತಮಗೆ ಸಾಕಾಗುವಷ್ಟು ಕಾಫಿಯನ್ನು ಕೊಳ್ಳಲು ಹೇಗೆ ಸಾಧ್ಯ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಏರಿಕೆಯಾಗುವುದು ಪೊರೈಕೆ ಕಡಿಮೆಯಾದ ವೇಳೆ. ಕಾಫಿ ಪೊರೈಕೆ ಹೆಚ್ಚಿದ್ದರೆ ಬೆಲೆ ಏರಿಕೆಯಾಗಲು ಸಾಧ್ಯವೆ ಇಲ್ಲ. ಓ.ಟಿ ಧಾರಣೆ(ಔಟ್‌ಟನ್) ನಾಲ್ಕುನೂರು ಗಡಿ ದಾಟಿದರೆ, ರಫ್ತುದಾರರು, ಸ್ಥಳೀಯ ವರ್ತಕರು ವ್ಯಾಪಾರ ಸ್ಥಗಿತಗೊಳಿಸುತ್ತಾರೆ. ನಾಲ್ಕನೂರಕ್ಕಿಂತ ಕಡಿಮೆ ಒ.ಟಿ ಧಾರಣೆ ಬಂದರೆ ಕಾಫಿ ಕೊಳ್ಳಲು ಆರಂಭಿಸುತ್ತಾರೆ. ಆದ್ದರಿಂದ, ಕಾಫಿ ಕೊಳ್ಳಲು ನಿರಾಕರಿಸುವ ರಪ್ತುದಾರರ ಪರವನಾಗಿಯನ್ನೆ ರದ್ದುಮಾಡುವಂತೆ ಕಾಫಿ ಮಂಡಳಿಗೆ ವಿನಂತಿಸಿದರೆ, ರಫ್ತುದಾರರು ಇವರ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಾರೆ. ಆದ್ದರಿಂದ, ಬೆಳೆಗಾರರಿಗಾಗುತ್ತಿರುವ ಮೋಸದ ಬಗ್ಗೆ ಕೇಂದ್ರ ವಾಣಿಜ್ಯಮಂತ್ರಿಗಳಿಗೆ ತಿಳಿಸುವ ಮೂಲಕ ಕ್ರಮಕ್ಕೆ ಆಗ್ರಹಿಸುವ ಬಗ್ಗೆ ಚರ್ಚೆಗಳು ನಡೆದಿದೆ. ಕಾಫಿ ಮಾರದಿರಲು ನಿರ್ಧಾರ:

ಕಾಫಿ ಮುಕ್ತ ಮಾರುಕಟ್ಟೆಗೆ ತೆರೆದುಕೊಂಡರು ರಫ್ತುದಾರರು ಹಾಗೂ ಕ್ಯೂರಿಂಗ್ ವರ್ಕ್ಸ್‌ ಮಾಲೀಕರು ನಮ್ಮ ಕಾಫಿಗೆ ಬೆಲೆ ನಿಗದಿಪಡಿಸುತ್ತಿದ್ದಾರೆ. ಈಗಾಗಲೇ ಕಾಫಿ ಧಾರಣೆ ಹೆಚ್ಚಿದೆ ಎಂಬ ಕಾರಣಕ್ಕೆ ಕಾರ್ಮಿಕರ ಸಂಬಳ ಮಿತಿಮೀರಿದೆ. ಆದರೆ, ನಮಗೆ, ನೈಜ ಬೆಲೆ ದೊರೆಯುತ್ತಿಲ್ಲ. ಆದ್ದರಿಂದ, ಕಾಫಿ ಬೆಳೆಯುವ ಜಿಲ್ಲೆಗಳ ವಿಸ್ತೀರ್ಣದಲ್ಲಿ ಚಿಕ್ಕಮಗಳೂರು ಮೊದಲ ಸ್ಥಾನದಲ್ಲಿದ್ದರೂ ಹೆಚ್ಚು ಕಾಫಿ ಬೆಳೆಯುವುದು ಕೊಡಗಿನಲ್ಲಿ. ಆದ್ದರಿಂದ ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಎಲ್ಲ ಕಾಫಿ ಬೆಳೆಗಾರರು ತಮ್ಮ ಕಾಫಿಯನ್ನು ಮಾರಾಟ ಮಾಡದೆ ಸಂಗ್ರಹಿಸಿಡ ಬೇಕು ಆಗ ರಫ್ತುದಾರರಿಗೆ ಬುದ್ಧಿ ಬರಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಸದ್ಯ ಕೊಡಗಿನಲ್ಲಿ ಬಿದ್ದಿರುವ ಕಿಡಿ, ಕಾಫಿ ಬೆಳೆಯುವ ಎಲ್ಲ ಜಿಲ್ಲೆಗಳನ್ನು ಆವರಿಸುವುದು ನಿಶ್ಚಿತವಾಗಿದ್ದು ಸದ್ಯ ತಾಲೂಕಿನಲ್ಲೂ ಸಭೆ ನಡೆಸಲು ಚಿಂತನೆಗಳು ಆರಂಭವಾಗಿದೆ.ವರ್ತಕರ ವಾದ:

ರಫ್ತುದಾರ ಸಂಸ್ಥೆಗಳ ವಾದವೇ ಬೇರೆಯಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಬೆಲೆ ಏರಿಳಿತ ಪ್ರತಿ ಸಣ್ಣ ಬೆಳೆಗಾರರಿಗೂ ತಿಳಿಯಲಿದೆ. ಆದ್ದರಿಂದ, ಇಲ್ಲಿ ಮೋಸ ಮಾಡುವ ಪ್ರಮೇಯವೆ ಉದ್ಭವಿಸುವುದಿಲ್ಲ. ಇಡೀ ಪ್ರಪಂಚದಲ್ಲಿ ಕಾಫಿ ಮಾರುಕಟ್ಟೆಯಷ್ಟು ಪಾರದರ್ಶಕ ಮಾರುಕಟ್ಟೆ ಮತ್ತೊಂದಿಲ್ಲ. ಆದರೆ, ಮಾರುಕಟ್ಟೆ ದರ ವಿಶ್ಲೇಷಣೆ ತಿಳಿಯದ ಬೆಳೆಗಾರರು ಮಾತ್ರ ಮೋಸದ ಬಗ್ಗೆ ಮಾತನಾಡುತ್ತಿದ್ದಾರೆ. ಕಾಫಿ ವ್ಯಾಪಾರಿಗಳು, ಕ್ಯೂರಿಂಗ್ ವರ್ಕ್ಸ್‌ ಮಾಲೀಕರು ಹಾಗೂ ರಫ್ತುದಾರರು ಕಳೆದ ಹಲವು ದಶಕಗಳಿಂದ ವ್ಯಾಪಾರ ಮಾಡಿ ಗಳಿಸಿದ್ದಕ್ಕಿಂತ ಕಳೆದುಕೊಂಡ ವರ್ತಕರೆ ಹೆಚ್ಚು. ಕಾಫಿ ವರ್ತಕರು ಮೋಸಮಾಡುತ್ತಿದ್ದಾರೆ ಎಂಬ ಭ್ರಮೆ ಇದ್ದರೆ ಕಾಫಿ ಮುಕ್ತ ಮಾರುಕಟ್ಟೆಗೆ ತೆರೆದುಕೊಳ್ಳುವ ಮುನ್ನವೆ ಬೆಳೆಗಾರರು ಕೋಮಾರ್ಕ ಸಂಸ್ಥೆ ಮೂಲಕ ರಫ್ತು ಮಾಡುತ್ತಿದ್ದರು. ಸದ್ಯ ಕೊಡಗಿನಲ್ಲೂ ಸಂಸ್ಥೆ ಕಟ್ಟಿಕೊಂಡಿರುವ ಬೆಳೆಗಾರರು ರಪ್ತು ಮಾಡುತ್ತಿದ್ದಾರೆ. ಇವರ ಸಂಸ್ಥೆ ಪ್ರಸಕ್ತ ಯಾವ ದರದಲ್ಲಿ ಕಾಫಿ ಕೊಳ್ಳುತ್ತಿದೆ ಎಂಬುದನ್ನು ಅರಿಯಲಿ. ಸದ್ಯ ಮೂರು ಜಿಲ್ಲೆಗಳಲ್ಲಿ ಬೆಳೆಗಾರರ ಸಂಘಗಳು ಸಶಕ್ತವಾಗಿದ್ದು, ಈ ಸಂಘಗಳು ವ್ಯಾಪಾರದ ಘಟಕ ತೆರೆದು ರಫ್ತು ಮಾಡಲಿ. ಸಣ್ಣ ಲಾಭಕ್ಕಾಗಿ ಕೋಟ್ಯಂತರ ರು. ಬಂಡವಾಳ ಹಾಕಿ ವ್ಯಾಪಾರ ಮಾಡುವ ವರ್ತಕರು ಅವಮಾನಕ್ಕೆ ಈಡಾಗುವುದನ್ನು ಸಹಿಸುವುದಿಲ್ಲ. ವಿನಾಕಾರಣ ಬೆಳೆಗಾರರಿಗೆ ತಪ್ಪು ಮಾಹಿತಿ ನೀಡುವುದು ಹಾಗೂ ವರ್ತಕರನ್ನು ಅನುಮಾನದ ದೃಷ್ಟಿಯಲ್ಲಿ ನೋಡುವುದು ಬೇಡ ಎಂಬ ವಾದ ವರ್ತಕರ ವಲಯದಿಂದ ಕೇಳಿ ಬರುತ್ತಿದೆ.

-----------------------------------------------------* ಹೇಳೀಕೆ1

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಣ್ಣ ಇಳಿಕೆಯಾದರೂ ಸ್ಥಳೀಯ ಮಟ್ಟದಲ್ಲಿ ಭಾರಿ ಪ್ರಮಾಣದಲ್ಲಿ ಬೆಲೆ ಇಳಿಕೆಯಾಗಲಿದೆ. ಆದರೆ, ದೊಡ್ಡ ಮಟ್ಟದ ದರ ಏರಿಕೆಯಾದರೆ ಸ್ಥಳೀಯ ವರ್ತಕರು ಸಣ್ಣ ಮಟ್ಟದ ಬೆಲೆ ಏರಿಕೆಯನ್ನು ಮಾಡುವುದಿಲ್ಲ.

ಲೋಹಿತ್‌ ಕೌಡಳ್ಳಿ ,ಕಾರ್ಯದರ್ಶಿ, ಹಾಸನ ಬೆಳೆಗಾರರ ಸಂಘ. (6ಎಚ್ಎಸ್ಎನ್13 )* ಹೇಳಿಕೆ 2

ಕಾಫಿ ಮಾರುಕಟ್ಟೆ ವಿಶ್ಲೇಷಣೆ ತಿಳಿಯದ ಬೆಳೆಗಾರರಿಗೆ ಬೆಳೆಗಾರರ ಸಂಘದ ಪ್ರತಿನಿಧಿಗಳು ತಿಳಿಹೇಳಬೇಕು. ಇದನ್ನು ಬಿಟ್ಟು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ಒಂದೆರೆಡು ದಿನಗಳಲ್ಲಿ ಮಾರುಕಟ್ಟೆ ನೀತಿನಿಯಮದ ಬಗ್ಗೆ ಬೆಳೆಗಾರರಿಗೆ ತಿಳಿಸಲಿದ್ದೇನೆ.

ಹೊಂಕರವಳ್ಳಿ ಧರ್ಮರಾಜ್, ಗೀತಾ ಕಾಫಿ ಟ್ರೇಡರ್ (6ಎಚ್ಎಸ್ಎನ್13ಎ :

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು