ಕಾಫಿ ತೋಟ ನಾಶ ಪ್ರಕರಣ: ರೈತರಿಂದ ಅರಣ್ಯ ಕಚೇರಿಗೆ ಮುತ್ತಿಗೆ

KannadaprabhaNewsNetwork |  
Published : Sep 27, 2025, 12:02 AM IST

ಸಾರಾಂಶ

ಮಾದಾಪುರ ಸಮೀಪದ ಮುಕೋಡ್ಲು ಗ್ರಾಮದಲ್ಲಿನ ನಾಣಿಯಪ್ಪ ಅವರ ತೋಟದಲ್ಲಿನ ಕಾಫಿ ಗಿಡ ಕಡಿದು ಅವರ ಬದುಕನ್ನು ಹಾಳು ಮಾಡಿದ ಅಧಿಕಾರಿಗಳನ್ನು ಕೂಡಲೇ ಕೆಲಸದಿಂದ ವಜಾ ಮಾಡಬೇಕು. ಅವರಿಗೆ 30 ಲಕ್ಷ ರು. ಪರಿಹಾರ ಕೊಡಬೇಕು. ಈ ಬೇಡಿಕೆಗಳು ಈಡೇರುವ ತನಕ ಪ್ರತಿಭಟನೆ ನಡೆಸಲಾಗುವುದು. ತಮ್ಮ ಬೇಡಿಕೆಗಳ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನ ಸೆಳೆಯಲು ಕಚೇರಿ ಒಳಗೆ ತೆರಳಿ ಮನವಿ ಸಲ್ಲಿಸಲು ಅವಕಾಶ ಕೊಡಬೇಕು ಎಂದು ಪ್ರತಿಭಟನಾ ನಿರತ ರೈತರು ಪೊಲೀಸರ ಎದುರು ಬೇಡಿಕೆ ಇಟ್ಟರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ವೃದ್ಧ ದಂಪತಿಗೆ ಸೇರಿದ ಪೈಸಾರಿ ಜಮೀನಿನಲ್ಲಿ ಕೃಷಿ ಫಸಲು ಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಅಧಿಕಾರಿಗಳನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ರೈತ ಹೋರಾಟ ಸಮಿತಿ ವತಿಯಿಂದ ನಗರದ ಅರಣ್ಯ ಭವನ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು.

ಮಾದಾಪುರ ಸಮೀಪದ ಮುಕೋಡ್ಲು ಗ್ರಾಮದಲ್ಲಿನ ನಾಣಿಯಪ್ಪ ಅವರ ತೋಟದಲ್ಲಿನ ಕಾಫಿ ಗಿಡ ಕಡಿದು ಅವರ ಬದುಕನ್ನು ಹಾಳು ಮಾಡಿದ ಅಧಿಕಾರಿಗಳನ್ನು ಕೂಡಲೇ ಕೆಲಸದಿಂದ ವಜಾ ಮಾಡಬೇಕು. ಅವರಿಗೆ 30 ಲಕ್ಷ ರು. ಪರಿಹಾರ ಕೊಡಬೇಕು. ಈ ಬೇಡಿಕೆಗಳು ಈಡೇರುವ ತನಕ ಪ್ರತಿಭಟನೆ ನಡೆಸಲಾಗುವುದು. ತಮ್ಮ ಬೇಡಿಕೆಗಳ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನ ಸೆಳೆಯಲು ಕಚೇರಿ ಒಳಗೆ ತೆರಳಿ ಮನವಿ ಸಲ್ಲಿಸಲು ಅವಕಾಶ ಕೊಡಬೇಕು ಎಂದು ಪ್ರತಿಭಟನಾ ನಿರತ ರೈತರು ಪೊಲೀಸರ ಎದುರು ಬೇಡಿಕೆ ಇಟ್ಟರು.

ಆದರೆ ಪೊಲೀಸರು ಇದನ್ನು ನಿರಾಕರಿಸಿದರು. ಇದರಿಂದ ಸಿಟ್ಟಾದ ಪ್ರತಿಭಟನಾಕಾರರು ತಮ್ಮ ಘೋಷಣೆಗಳನ್ನು ತೀವ್ರಗೊಳಿಸಿದರು.

ನಂತರ ಪೊಲೀಸರು, ಕೊಡಗು ವೃತ್ತದ ಸಿಸಿಎಫ್ ಸೊನಾಲ್ ವರ್ಷಿಣಿ ಮತ್ತು ಮಡಿಕೇರಿ ವಿಭಾಗದ ಡಿಸಿಎಫ್ ವಿ.ಅಭಿಷೇಕ್ ಅವರನ್ನು ಪ್ರತಿಭಟನಾ ಸ್ಥಳಕ್ಕೆ ಕರೆಸಿ ರೈತರ ಮನವಿ ಆಲಿಸಲು ಅನುವು ಮಾಡಿಕೊಟ್ಟರು.

ಗಂಡಸರು ಇಲ್ಲದ ಮನೆ ಗುರುತಿಸಿ ತೋಟ ನಾಶ ಮಾಡಲಾಗಿದೆ. ಸ.ನಂ. 33/2 ಜಾಗದಲ್ಲಿ 2 ಎಕರೆ ತೋಟ ಹಾಳು ಮಾಡಲಾಗಿದೆ. ನೀವು ಎಲ್ಲ ಜಾಗ ಅರಣ್ಯ ಅಂತ ಘೋಷಿಸಿದರೆ ನಾವು ಎಲ್ಲಿ ಹೋಗುವುದು? ಅರಣ್ಯ ಇಲಾಖೆಯವರು ಯುವಕರಿಗೆ ಸವಾಲು ಹಾಕಬೇಕು. ವೃದ್ಧರ ಎದುರು ನಿಮ್ಮ ಶೌರ್ಯ ತೋರಿಸುವುದಲ್ಲ ಎಂದು ಕೃಷಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಶಾಶ್ವತ ಪರಿಹಾರಕ್ಕೆ ಕ್ರಮ:

ಡಿಸಿಎಫ್ ಅಭಿಷೇಕ್ ಮಾತನಾಡಿ, ಕೊಡಗಿನಲ್ಲಿ ಅರಣ್ಯ ಭೂಮಿ ಬಗ್ಗೆ ಗೊಂದಲ ಇದೆ. ಇದನ್ನು ಪರಿಹರಿಸಲು ಸಮಿತಿ ಮಾಡಲಾಗಿದೆ. ಜಿಲ್ಲಾ, ತಾಲೂಕು, ಗ್ರಾಮ ಮಟ್ಟದಲ್ಲಿ ಸಭೆ ನಡೆಸಿ ರೈತರಿಂದ ಮಾಹಿತಿ ಪಡೆದು ಸರ್ವೆ ನಡೆಸಲಾಗುತ್ತದೆ. ಸರಿಯಾದ ರೀತಿಯಲ್ಲಿ ಸರ್ವೆ ಆದರೆ ಮುಂದೆ ಸಮಸ್ಯೆ ಆಗುವುದಿಲ್ಲ. ಶಾಶ್ವತ ಪರಿಹಾರಕ್ಕಾಗಿ ಅರಣ್ಯ ಇಲಾಖೆ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಈ ವೇಳೆ ಮಾತನಾಡಿದ ಸಿಸಿಎಫ್ ಸೊನಾಲ್ ವರ್ಷಿಣಿ, ಅದು ಡೀಮ್ಡ್ ಪಾರೆಸ್ಟ್‌ ಆಗಿದ್ದು, ಅಲ್ಲಿ ಹೊಸದಾಗಿ ಗಿಡ ನೆಡಲಾಗಿದೆ. ಅಂಥ ಗಿಡಗಳನ್ನು ಅಧಿಕಾರಿಗಳು ಕಿತ್ತಿದ್ದಾರೆ. ಅಧಿಕಾರಿಗಳು ಈ ವಿಷಯದಲ್ಲಿ ತಪ್ಪು ಮಾಡಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಅಧಿಕಾರಿಗಳ ಅಮಾನತಿಗೆ ಈಗಲೇ ಆದೇಶ ನೀಡಬೇಕು. ಘಟನೆ ನಡೆದು ಒಂದು ತಿಂಗಳಾಗಿದೆ. ಯಾವುದೇ ಕ್ರಮ ಆಗಿಲ್ಲ. ತಪ್ಪಿತಸ್ಥ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ. ಅವರ ವಿಚಾರಣೆ ನಡೆಸಿ ಅಮಾನತು ಆದೇಶ ಬರುವ ತನಕ ಇಲ್ಲಿಯೇ ಮಲಗುತ್ತೇವೆ ಎಂದು ಪಟ್ಟು ಹಿಡಿದರು.

ಕೊನೆಗೆ ತಪ್ಪಿತಸ್ಥ ಅಧಿಕಾರಿಗಳನ್ನು ತಕ್ಷಣ ವರ್ಗ ಮಾಡಿ ಅವರ ವಿರುದ್ಧ ತನಿಖೆ ಮತ್ತು ತಪ್ಪಿತಸ್ಥರೆಂದು ಕಂಡು ಬಂದರೆ ಕ್ರಮ ಹಾಗೂ ಹಾನಿಗೊಳಗಾದ ತೋಟದ ಪರಿಶೀಲನೆ ನಡೆಸಿ ಒಂದು ವಾರದ ಒಳಗೆ ಪರಿಹಾರದ ಭರವಸೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ನೀಡಿದ ನಂತರ ರೈತ ಹೋರಾಟಗಾರರು ಪ್ರತಿಭಟನೆ ಹಿಂತೆಗೆದುಕೊಂಡರು.

ರೈತ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಚಕ್ರವರ್ತಿ, ವಕೀಲ ದೀಪಕ್, ಕೂತಿ ದಿನೇಶ್ ಸೇರಿದಂತೆ ರೈತ ಹೋರಾಟ ಸಮಿತಿ ಪದಾಧಿಕಾರಿಗಳು ಮತ್ತು ರೈತರು ಪ್ರತಿಭಟನೆಯಲ್ಲಿ ಸೇರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ