ಗುಣಮಟ್ಚದ ಕಾಫಿ ಬೆಳೆ ಗುರಿ ಇರಲಿ: ಎಂ.ಜೆ. ದಿನೇಶ್

KannadaprabhaNewsNetwork |  
Published : Oct 15, 2026, 02:45 AM IST
ಚಿತ್ರ : 14ಎಂಡಿಕೆ2  : ಕಾಫಿ ದಸರಾಗೆ ಚಾಲನೆ ನೀಡಿದ ಪ್ರಮುಖರು.  | Kannada Prabha

ಸಾರಾಂಶ

2047ಕ್ಕೆ ವಿಕಸಿತ ಭಾರತ ಆಗಬೇಕೆಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಕಾಫಿ ಬೋರ್ಡ್ ಕೂಡ 7 ಲಕ್ಷ ಟನ್ ಕಾಫಿ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ. ಈಗಾಗಲೇ ಅದಕ್ಕೆ ಬೇಕಾದ ಎಲ್ಲಾ ಕೆಲಸಗಳು ನಡೆಯುತ್ತಿದೆ. ಬೆಳೆಗಾರರು ಆಧುನಿತ ತಂತ್ರಜ್ಞಾನ ಬಳಸಿಕೊಂಡು ಗುಣಮಟ್ಟದ ಕಾಫಿಯೊಂದಿಗೆ ಅಧಿಕ ಇಳುವರಿ ಪಡೆಯಬೇಕೆಂದು ಎಂದು ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಹೇಳಿದರು.

ಮಡಿಕೇರಿ: 2047ಕ್ಕೆ ವಿಕಸಿತ ಭಾರತ ಆಗಬೇಕೆಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಕಾಫಿ ಬೋರ್ಡ್ ಕೂಡ 7 ಲಕ್ಷ ಟನ್ ಕಾಫಿ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ. ಈಗಾಗಲೇ ಅದಕ್ಕೆ ಬೇಕಾದ ಎಲ್ಲಾ ಕೆಲಸಗಳು ನಡೆಯುತ್ತಿದೆ. ಬೆಳೆಗಾರರು ಆಧುನಿತ ತಂತ್ರಜ್ಞಾನ ಬಳಸಿಕೊಂಡು ಗುಣಮಟ್ಟದ ಕಾಫಿಯೊಂದಿಗೆ ಅಧಿಕ ಇಳುವರಿ ಪಡೆಯಬೇಕೆಂದು ಎಂದು ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಹೇಳಿದರು. ಶಾಸಕ ಡಾ. ಮಂತರ್ ಗೌಡ ಅವರ ಪರಿಕಲ್ಪನೆಯಲ್ಲಿ ಮಡಿಕೇರಿ ದಸರಾದ ಅಂಗವಾಗಿ ನಗರದ ಗಾಂಧಿ ಮೈದಾನದಲ್ಲಿ ಬುಧವಾರ ನಡೆದ ಕಾಫಿ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾಫಿ ದಸರಾ ಪರಿಕಲ್ಪನೆ ಮಾಡಿದ ಶಾಸಕ ಡಾ. ಮಂತರ್ ಗೌಡ ಅವರು ಅಭಿನಂದನಾರ್ಹರು. ನಾವು ನಮ್ಮ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಆದರೆ ಮುಂದಿನ ಪೀಳಿಗೆಗೆ ಈ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು.

ದೇಶದಲ್ಲಿ ಕೊಡಗು ಬಿಟ್ಟರೆ ಯಾವ‌ ಜಿಲ್ಲೆಯೂ ಬ್ರ್ಯಾಂಡ್ ಆಗಿಲ್ಲ. ಕೊಡಗು ಅಂದರೆ ಕಾಫಿ, ಜೇನು, ಕಿತ್ತಳೆ, ಕ್ರೀಡೆ, ಸೇನೆ ಸೇರಿದಂತೆ ಹಲವು ಹೆಸರಿದೆ. ಆದರೆ ಈ ಬ್ರ್ಯಾಂಡ್ ಒಂದು ಬಾರಿ ಕಳೆದುಕೊಂಡರೆ ಮತ್ತೆ ಪುನಶ್ಚೇತನ ಮಾಡುವುದು ಕಷ್ಟ. ಆದ್ದರಿಂದ ನಾವು ಬ್ರ್ಯಾಂಡ್ ಉಳಿಸಿಕೊಳ್ಳಬೇಕೆಂದು ಕರೆ ನೀಡಿದರು. ಕಾಫಿಗೆ ಬೆಲೆ ಎಂದಿಗೂ ಕೂಡ ಹೆಚ್ಚು ಇರುತ್ತದೆ ಎಂದು ತಿಳಿದುಕೊಳ್ಳಬಾರದು. ನಾವು ಗುಣಮಟ್ಟದ ಫಸಲು ಬೆಳೆದರೆ ಮಾತ್ರ ಚೇತರಿಕೆ ಸಾಧ್ಯ. ಕಾಫಿ ವಿಮೆಗೆ ಕೇಂದ್ರ ಸರ್ಕಾರ ಈಗಾಗಲೇ ಒಪ್ಪಿದೆ. ಇದು ರಾಜ್ಯ ಸರ್ಕಾರ ಮಾಡಬೇಕಿದೆ. ಇದಾದರೆ ಇತರೆ ಬೆಳೆಗಳಂತೆ ಕಾಫಿಗೂ ವಿಮೆ ದೊರಕಲಿದೆ ಎಂದರು.

ವಿವಿಧ ಬೆಳೆಗಾರರ ಸಂಘಗಳ ಸಹಕಾರದೊಂದಿಗೆ ಕಾಫಿ ಗುಣಮಟ್ಟ ಹೆಚ್ಚಿಸಲು ಇಂಡಿ ಕಾಫಿ ಮಾಡಲು ಕೆಲಸ ಮಾಡಲಾಗುವುದು. ದಕ್ಷಿಣ ಭಾರತದ ಕಾಫಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಆದರೆ ನಾವು ಇದನ್ನು ಸ್ವಾದಿಸುತ್ತಿಲ್ಲ‌ ಎಂದು ಹೇಳಿದರು. ಕಾಫಿ ಬೆಳೆಯುವ ಇತರೆ ರಾಜ್ಯಕ್ಕೆ ಹೋಲಿಸಿದರೆ ನಮ್ಮ ಸರ್ಕಾರ ಕಾಫಿಗೆ ಪ್ರೋತ್ಸಾಹ ನೀಡುತ್ತಿಲ್ಲ ಎಂದು ವಿಷಾದಿಸಿದರು. ಶಾಸಕ ಡಾ. ಮಂತರ್ ಗೌಡ ಮಾತನಾಡಿ ಯುವಕರು ಕಾಫಿ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು. ಹವಾಮಾನ ವೈಪರೀತ್ಯ, ನೀರಿನ ಸಮಸ್ಯೆ, ಅರಣ್ಯ ಸಮಸ್ಯೆ, ಬ್ಯಾಂಕ್ ಸೇರಿದಂತೆ ಹಲವು ಸಮಸ್ಯೆಗಳ ನಡುವೆ ಕಾಫಿಯನ್ನು ಬೆಳೆಯಲಾಗುತ್ತಿದೆ. ಇದನ್ನು ಪರಿಹರಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು. ಕಾಫಿಯೊಂದಿಗೆ ಇತರೆ ಬೆಳೆಗಳನ್ನು ಬೆಳೆಯಬೇಕು. ಯಾವುದೇ ಸಮಸ್ಯೆಯಾದರೂ ಕಾಫಿ ಬೆಳೆಯುವುದನ್ನು ಸ್ಥಗಿತಗೊಳಿಸಬಾರದು. ಈ ಸಮಸ್ಯೆ ಪರಿಹಾರಕ್ಕೆ ಕಾಫಿ ಬೋರ್ಡ್ ನೊಂದಿಗೆ ಚರ್ಚಿಸಿ ಸಮಸ್ಯೆ ಇತ್ಯರ್ಥಗೊಳಿಸಲು ಮಂದಾಗಬೇಕೆಂದರು.

ಭಾರತೀಯ ಕಾಫಿ ಮಂಡಳಿ ಕಾರ್ಯದರ್ಶಿ ಕುರ್ಮಾರಾವ್ ಮಾತನಾಡಿ ಕೊಡಗಿನಲ್ಲಿ ಅತಿ ಹೆಚ್ಚು ಕಾಫಿ ಉತ್ಪಾದನೆ ಆಗುತ್ತಿದೆ. ಮೌಲ್ಯವರ್ದಿತ ಉತ್ಪನ್ನಗಳು ಹಾಗೂ ಗುಣಮಟ್ಟ ಕಾಯ್ದುಕೊಂಡರೆ ಮಾತ್ರ ಉತ್ತಮ ಬೆಲೆ ಸಿಗಲಿದೆ. ಕಾಫಿ ಮಂಡಳಿಯಿಂದ ಈ ಬಗ್ಗೆ ಹಲವು ತರಬೇತಿ ಕಾರ್ಯಕ್ರಮಗಳು ನಡೆಯಲಿದೆ ಎಂದು ಮಾಹಿತಿ ನೀಡಿದರು.

ವಿಧಾನ ಪರಿಷತ್ ಸದಸ್ಯ ಸುಜಾಕುಶಾಲಪ್ಪ ಮಾತನಾಡಿ ಕೊಡಗಿನ ಪ್ರಮುಖ ಉದ್ಯಮ ಕಾಫಿ. ಮಾರುಕಟ್ಟೆ ಮಾಡುವುದು ಪ್ರಮುಖ. ಇದಾದರೆ ಮಾತ್ರ ಕಾಫಿ ಬೆಳೆಗಾರರಿಗೆ ಭವಿಷ್ಯ ಉತ್ತಮವಾಗಿರಲಿದೆ ಎಂದರು.

ಕರ್ನಾಟಕ ಬೆಳೆಗಾರರ ಸಂಘದ ಅಧ್ಯಕ್ಷ ಕಾರ್ಯಪ್ಪ ಮಾತನಾಡಿ ಕಂದಾಯ ಇಲಾಖೆಯಲ್ಲಿ ಬೆಳೆಗಾರರಿಗೆ ಹಲವು ಸಮಸ್ಯೆಯಾಗುತ್ತಿದೆ. ಆದ್ದರಿಂದ ಇದನ್ನು ಪರಿಹರಿಸಬೇಕು. ಇನ್ನೂ ಹಳೆಯ ಮಾದರಿಯಲ್ಲೇ ಕಾಫಿ ಬೆಳೆಯಲಾಗುತ್ತಿದೆ. ಯುವ ಬೆಳೆಗಾರರಿಗೆ ಕಾಫಿ ಬೋರ್ಡ್ ಮಾಹಿತಿ ಕಾರ್ಯಕ್ರಮ ನೀಡಬೇಕೆಂದರು.

ಮಡಿಕೇರಿ ನಗರಸಭೆ ಅಧ್ಯಕ್ಷೆ ಕಲಾವತಿ, ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷ ಅರುಣ್ ಮಾಚಯ್ಯ, ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್ ಕುಮಾರ್, ಕೊಡಗು ಬೆಳೆಗಾರರ ಸಂಘದ ಉಪಾಧ್ಯಕ್ಷ ಪವನ್ ಮೊಣ್ಣಪ್ಪ, ಉಪಾಸಿ ಸಂಸ್ಥೆ ಅಧ್ಯಕ್ಷ ವಿನೋದ್ ಶಿವಪ್ಪ, ಕಾಫಿ ಮಹಿಳಾ ಜಾಗೃತಿ ಸಂಘಟನೆ ಅಧ್ಯಕ್ಷೆ ಜ್ಯೋತಿಕ, ಕಾಫಿ ದಸರಾ ಸಂಚಾಲಕ ಅನಿಲ್ ಹೆಚ್.ಟಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಸಾಧಕರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ಕಾಫಿ ಕೃಷಿ ಸಾಧಕರಾದ 13 ಮಂದಿಯನ್ನು ಸನ್ಮಾನಿಸಲಾಯಿತು. ಚೆಯ್ಯಂಡಾಣೆಯ ಮಕ್ಕಿಮನೆ ಸುಧೀರ್, ಬಗ್ಗನಮನೆ ಸುರೇಂದ್ರ, ಸೋಮವಾರಪೇಟೆಯ ಉದಯ್ ಈಶ್ವರನ್, ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷೆ ತಾರಾ ಅಯ್ಯಮ್ಮ, ಕಾಫಿ ತಜ್ಞ ಮಡಿಕೇರಿಯ ಕೆ.ಕೆ. ವಿಶ್ವನಾಥ್, ಕಾಫಿ ಪಲ್ಪಿಂಗ್ ನಲ್ಲಿ ಸಹಕಾರ ತತ್ವ ಅಳವಡಿಸಿಕೊಂಡ ತಾಕೇರಿಯ ಕೃಷಿ ಸ್ವಸಹಾಯ ಸಂಘ, ಮಣಜೂರಿನ ಶೇಷಪ್ಪ, ಕಾಫಿ ಬ್ಲಾಗರ್ ಪಟ್ಟಡ ಕಾರ್ತಿಕ್, ನಾಕೂರು ಶಿರಂಗಾಲದ ಪಿ.ಎಂ.ಬಿಜು, ಸುಂಟಿಕೊಪ್ಪ ಪನ್ಯ ತೋಟದ ಎಸ್.ಬಿ.ಜಯರಾಜ್, ಕೊಡ್ಲಿಪೇಟೆಯ ಕೃಷಿಕ ಮಹಮ್ಮದ್ ರಾಝ ನೆಲ್ಯಹುದಿಕೇರಿಯ ಇ.ಹೆಚ್.ಹನೀಫ ಹಾಗೂ ನಾವಿನ್ಯತೆಯ ಕೆಫೆಗಾಗಿ ಮಡಿಕೇರಿಯ ವೀಲ್ ಕೆಫೆಯ ಪ್ರಮುಖರಿಗೆ ಸನ್ಮಾನಿಸಲಾಯಿತು.

ಕೇಕ್‌, ಬಿಸ್ಕೆಟ್‌: ಕಾಫಿಯಲ್ಲಿ ಮಾಡಿದ ತಿಂಡಿ ತಿನಿಸುಗಳ ಸ್ಪರ್ಧೆ ವಿಭಿನ್ನವಾಗಿತ್ತು. ಸುಮಾರು 80ಕ್ಕೂ ಅಧಿಕ ಮಂದಿ ಮಹಿಳೆಯರು ಈ ಸ್ಪರ್ದೆಯಲ್ಲಿ ಪಾಲ್ಗೊಂಡು ಕಾಫಿಯಿಂದ ಕೇಕ್, ಬಿಸ್ಕೆಟ್ ಸೇರಿದಂತೆ ವಿವಿಧ ಬಗೆಯ ತಿನಿಸುಗಳನ್ನು ತಯಾರಿಸಿ ಮೆಚ್ಚುಗೆ ಗಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುನರೂರು ಕ್ಷೇತ್ರ ಬ್ರಹ್ಮಕಲಶ ಲಾಂಛನ ಬಿಡುಗಡೆ
ಕುಂಟಿಕಾನಮಠ ದೇವಸ್ಥಾನದಲ್ಲಿ ನವರಾತ್ರಿ ಆಚರಣೆ