ಮೈಷುಗರ್ ಅಧ್ಯಕ್ಷ-ಖಾಯಂ ನೌಕರರ ನಡುವೆ ಶೀತಲ ಸಮರ?

KannadaprabhaNewsNetwork |  
Published : Jul 15, 2025, 01:06 AM IST
14ಕೆಎಂಎನ್‌ಡಿ-೧೩ಮೈಷುಗರ್ ಕಾರ್ಖಾನೆಯ ಯಾರ್ಡ್‌ನಲ್ಲಿ ಕಬ್ಬು ತಂದಿರುವ ರೈತರ ಬಳಿ ರೈತ ಮುಖಂಡರು ಚರ್ಚಿಸುತ್ತಿರುವುದು. | Kannada Prabha

ಸಾರಾಂಶ

ಕಬ್ಬು ಅರೆಯುವಿಕೆಗೆ ಪ್ರಾಯೋಗಿಕ ಚಾಲನೆ ನೀಡಲು ಶಾಸಕ ಪಿ.ರವಿಕುಮಾರ್ ಅವರನ್ನು ಆಹ್ವಾನಿಸಿದ್ದು, ಗಂಟೆಗಟ್ಟಲೆ ಕಾದರೂ ಬಾರದ ಕಾರಣ ರೈತ ಮುಖಂಡರೇ ಕಬ್ಬನ್ನು ಯಂತ್ರಕ್ಕೆ ನೀಡುವ ಮೂಲಕ ಪ್ರಾಯೋಗಿಕ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಷುಗರ್ ಆರಂಭಕ್ಕೂ ಮುನ್ನವೇ ಕಾರ್ಖಾನೆ ಅಧ್ಯಕ್ಷರು ಮತ್ತು ಖಾಯಂ ನೌಕರರ ನಡುವೆ ಶೀತಲ ಸಮರ ನಡೆದಿರುವ ಬಗ್ಗೆ ಅನುಮಾನಗಳು ಮೂಡಿವೆ. ಕಬ್ಬು ಅರೆಯುವಿಕೆಗೆ ಪ್ರಾಯೋಗಿಕ ಚಾಲನೆ ನೀಡಲು ರೈತರು ತಂದಿದ್ದ ಕಬ್ಬನ್ನು ಸ್ವೀಕರಿಸುವ ವಿಷಯದಲ್ಲಿ ಇಬ್ಬರ ನಡುವಿನ ಭಿನ್ನಮತ ಬಹಿರಂಗಗೊಂಡಿದೆ. ಇವರಿಬ್ಬರ ನಡುವಿನ ಗೊಂದಲ ರೈತ ಮುಖಂಡರನ್ನು ಕೆರಳಿಸುವಂತೆ ಮಾಡಿತ್ತು.ಪ್ರಸಕ್ತ ಸಾಲಿನ ಕಬ್ಬು ಅರೆಯುವಿಕೆಗೆ ಪ್ರಾಯೋಗಿಕ ಚಾಲನೆ ನೀಡುವ ಸಲುವಾಗಿ ಕಬ್ಬು ಸ್ವೀಕರಿಸಲು ಕಾರ್ಖಾನೆ ಅಧ್ಯಕ್ಷರು ಹಾಗೂ ಖಾಯಂ ನೌಕರರು ಪ್ರತ್ಯೇಕ ಸ್ಥಳ ನಿಗದಿಪಡಿಸಿದ್ದು, ಗೊಂದಲಕ್ಕೆ ಕಾರಣವಾಗಿ ರೈತ ಮುಖಂಡರು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ವಿರುದ್ಧ ಸೋಮವಾರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.ಕಬ್ಬು ಅರೆಯುವಿಕೆಗೆ ಪ್ರಾಯೋಗಿಕ ಚಾಲನೆ ನೀಡಲು ಶಾಸಕ ಪಿ.ರವಿಕುಮಾರ್ ಅವರನ್ನು ಆಹ್ವಾನಿಸಿದ್ದು, ಗಂಟೆಗಟ್ಟಲೆ ಕಾದರೂ ಬಾರದ ಕಾರಣ ರೈತ ಮುಖಂಡರೇ ಕಬ್ಬನ್ನು ಯಂತ್ರಕ್ಕೆ ನೀಡುವ ಮೂಲಕ ಪ್ರಾಯೋಗಿಕ ಚಾಲನೆ ನೀಡಿದರು. ಬುಧವಾರ (ಜು.16) ದಿಂದ ನಿರಂತರವಾಗಿ ಕಬ್ಬು ಅರೆಯುವಿಕೆ ಆರಂಭಗೊಳ್ಳಲಿದೆ.ಕಬ್ಬು ಅರೆಯುವಿಕೆಗೆ ಪ್ರಾಯೋಗಿಕ ಚಾಲನೆ ನೀಡಲು ಸಂಜೆ 4 ಗಂಟೆಗೆ ಸಮಯ ನಿಗದಿಪಡಿಸಲಾಗಿತ್ತು. ಕಾರ್ಖಾನೆಗೆ ಕೆಲವು ರೈತರು ಟ್ರ್ಯಾಕ್ಟರ್‌ಗಳಲ್ಲಿ ಕಬ್ಬನ್ನು ತಂದಿದ್ದರು. ರೈತರು ಕಬ್ಬು ತರುವ ಸ್ಥಳದಲ್ಲಿ ಕಬ್ಬು ಸ್ವೀಕರಿಸಲು ಕಾರ್ಖಾನೆಯ ಖಾಯಂ ನೌಕರರು ವ್ಯವಸ್ಥೆ ಮಾಡಿದ್ದರು. ಅಲ್ಲಿಗೆ ಬರುವ ರೈತರಿಗೆ ಉಪಹಾರದ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದರು.ಇನ್ನೊಂದೆಡೆ ಅಧ್ಯಕ್ಷ ಸಿ.ಡಿ.ಗಂಗಾಧರ್ ಮತ್ತು ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಮಂಗಲ್ ದಾಸ್ ಅವರು ಕಬ್ಬನ್ನು ಯಂತ್ರಕ್ಕೆ ನೀಡುವ ಸ್ಥಳದಲ್ಲಿ ಪ್ರಾಯೋಗಿಕ ಚಾಲನೆಗೆ ವ್ಯವಸ್ಥೆ ಮಾಡಿಕೊಂಡಿದ್ದರು. ಟೀ-ಕಾಫಿ, ಬಿಸ್ಕತ್ತು, ಬಿಸಿ ಬಿಸಿ ಪಕೋಡಾ ಏರ್ಪಡಿಸಿದ್ದರು. ರೈತ ಮುಖಂಡರು ಖಾಯಂ ನೌಕರರು ನಿಗದಿಪಡಿಸಿದ ಸ್ಥಳದಲ್ಲಿ ರೈತ ಮುಖಂಡರು ಶಾಸಕರಿಗಾಗಿ ಕಾದುಕುಳಿತಿದ್ದರು. ಒಂದು ಎತ್ತಿನಗಾಡಿ ಮತ್ತು ಏಳೆಂಟು ಟ್ರ್ಯಾಕ್ಟರ್‌ಗಳಲ್ಲಿ ರೈತರು ಕಬ್ಬನ್ನು ತಂದಿದ್ದರು. ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಕಬ್ಬನ್ನು ಯಂತ್ರಕ್ಕೆ ನೀಡುವ ಜಾಗದಲ್ಲಿರುವ ವಿಷಯ ತಿಳಿದು ಮೊಬೈಲ್ ಮೂಲಕ ಸಂಪರ್ಕಿಸಿ ತಾವಿರುವ ಸ್ಥಳಕ್ಕೆ ಕರೆಸಿಕೊಂಡರು.ಸ್ಥಳದ ವಿಚಾರವಾಗಿ ಉಂಟಾಗಿರುವ ಗೊಂದಲದ ಬಗ್ಗೆ ರೈತ ಮುಖಂಡರು ಕಾರ್ಖಾನೆ ಅಧ್ಯಕ್ಷರ ವಿರುದ್ಧ ಹರಿಹಾಯ್ದರು. ಖಾಯಂ ನೌಕರರು ಹಾಗೂ ಅಧ್ಯಕ್ಷರ ನಡುವೆ ಹೊಂದಾಣಿಕೆ ಇಲ್ಲವೆಂಬಂತೆ ಕಂಡುಬರುತ್ತಿದೆ. ನೀವೊಂದು ಜಾಗದಲ್ಲಿ ನೌಕರರು ಮತ್ತೊಂದು ಜಾಗದಲ್ಲಿ ಪೂಜೆಗೆ ಆಯೋಜನೆ ಮಾಡಿರುವುದು ಎಷ್ಟರಮಟ್ಟಿಗೆ ಸರಿ. ರೈತರು ಕಬ್ಬನ್ನು ತಂದಿದ್ದಾರೆ.ಅದನ್ನು ಸಂಭ್ರಮದಿಂದ ಸ್ವೀಕರಿಸದೆ ಇಂತಹ ಧೋರಣೆಗಳು ಸರಿಯಲ್ಲ ಎಂದು ನುಡಿದರು.ಜೂನ್ ಅಂತ್ಯಕ್ಕೆ ಕಾರ್ಖಾನೆ ಆರಂಭವಾಗಬೇಕಿತ್ತು. ಜುಲೈ ಮಧ್ಯಭಾಗವಾದರೂ ಆರಂಭಗೊಂಡಿಲ್ಲ. ಇವತ್ತು ಪ್ರಾಯೋಗಿಕ ಚಾಲನೆ ನೀಡಲು ಶಾಸಕರು ಬರುತ್ತಾರೆಂದು ಹೇಳಿ ಒಂದೂವರೆ ಗಂಟೆಯಾದರೂ ಬಂದಿಲ್ಲ. ಕಷ್ಟಪಟ್ಟು ಬೆಳೆದು ತಂದಿರುವ ಕಬ್ಬನ್ನು ಸ್ವೀಕರಿಸುವುದಕ್ಕೆ ರೈತರೇ ಕಾಯಬೇಕೇ ಎಂದು ಪ್ರಶ್ನಿಸಿದರು.ಕೊನೆಗೆ ಶಾಸಕರ ಅನುಪಸ್ಥಿತಿಯ ನಡುವೆಯೇ ರೈತರು ತಂದ ಕಬ್ಬನ್ನು ರೈತ ಮುಖಂಡರೇ ಯಂತ್ರಕ್ಕೆ ನೀಡುವ ಮೂಲಕ ಪ್ರಾಯೋಗಿಕ ಚಾಲನೆ ನೀಡಿದರು. ರೈತ ಮುಖಂಡರಾದ ಸುನಂದಾ ಜಯರಾಂ, ಇಂಡುವಾಳು ಚಂದ್ರಶೇಖರ್, ಶಿವಳ್ಳಿ ಚಂದ್ರಶೇಖರ್, ಸಾತನೂರು ವೇಣುಗೋಪಾಲ್, ಸಿದ್ದೇಗೌಡ, ಸಿಐಟಿಯುನ ಸಿ.ಕುಮಾರಿ, ಕಾಂಗ್ರೆಸ್ ಮುಖಂಡರಾದ ಸಿ.ಎಂ.ದ್ಯಾವಪ್ಪ, ಹೆಚ್.ವಿ.ನಾಗರಾಜು, ಅಂಜನಾ, ವೀಣಾ ಇತರರಿದ್ದರು.-----ನಾಳೆಯಿಂದ ಕಬ್ಬು ಅರೆಯುವಿಕೆಗೆ ಅಧಿಕೃತ ಚಾಲನೆಮಂಡ್ಯ:ಮೈಷುಗರ್ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವಿಕೆಯನ್ನು ಬುಧವಾರ (ಜು.16)ದಿಂದ ಆರಂಭಿಸಲಾಗುವುದು ಎಂದು ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ಹೇಳಿದರು. ಈ ಸಾಲಿನಲ್ಲಿ 4.50 ಲಕ್ಷ ಟನ್ ಕಬ್ಬು ಒಪ್ಪಿಗೆಯಾಗಿದೆ. ಒಪ್ಪಿಗೆ ಕಬ್ಬನ್ನು ಮಾತ್ರ ಅರೆಯಲಾಗುವುದು. ಕಬ್ಬು ಕಟಾವಿಗೆ 23 ತಂಡಗಳನ್ನು ಕರೆತರಲಾಗಿದೆ. ಬುಧವಾರದಿಂದ ನಿರಂತರವಾಗಿ ಕಬ್ಬು ನುರಿಸಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು. ಜೇಷ್ಠತೆ ಆಧಾರದ ಮೇಲೆ ಕಬ್ಬನ್ನು ನುರಿಸಲಾಗುವುದು. ಎಲ್ಲೂ ಗೊಂದಲಕ್ಕೆ ಅವಕಾಶವಿಲ್ಲ. ಯಶಸ್ವಿಯಾಗಿ ಈ ಸಾಲಿನಲ್ಲಿ ಕನಿಷ್ಠ 4 ಲಕ್ಷ ಟನ್ ಕಬ್ಬನ್ನು ಅರೆಯುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

14ಕೆಎಂಎನ್‌ಡಿ-೧೩ಮೈಷುಗರ್ ಕಾರ್ಖಾನೆಯ ಯಾರ್ಡ್‌ನಲ್ಲಿ ಕಬ್ಬು ತಂದಿರುವ ರೈತರ ಬಳಿ ರೈತ ಮುಖಂಡರು ಚರ್ಚಿಸುತ್ತಿರುವುದು.೧೪ಕೆಎಂಎನ್‌ಡಿ-೧೪ರೈತ ಮುಖಂಡರೇ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆಗೆ ಪ್ರಾಯೋಗಿಕ ಚಾಲನೆ ನೀಡಿದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು