ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಂತರ ಸಹಯೋಗ ಅಗತ್ಯ: ಕನ್ಯಾಡಿ ಶ್ರೀ

KannadaprabhaNewsNetwork |  
Published : Nov 27, 2025, 03:00 AM IST
32 | Kannada Prabha

ಸಾರಾಂಶ

ತಪೋಭೂಮಿ ಹರಿದ್ವಾರದ ಭೂಪತ್‌ವಾಲಾದಲ್ಲಿರುವ 1008 ಮಹಾಮಂಡಲೇಶ್ವರ ಕನ್ಯಾಡಿ ಶ್ರೀರಾಮ ಸಂಸ್ಥಾನಮ್ ನ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಸಾಧನಾ ಕುಟೀರದ 9 ನೇ ವಾರ್ಷಿಕೋತ್ಸವ ಪ್ರಯುಕ್ತ ಮಂಗಳವಾರ ಸಂತ ಸಮಾವೇಶ ಸಂಪನ್ನಗೊಂಡಿತು.

ದೀಪಕ್‌ ಅಳದಂಗಡಿ ಹರಿದ್ವಾರ

ಸ್ವಸ್ಥ ಸಮಾಜದ ನಿರ್ಮಾಣಕ್ಕೆ ದೇಶದ ಸಂತ, ಮಹಂತರಾದ ನಾವೆಲ್ಲರೂ ಏಕ ಮನಸ್ಸಿನಿಂದ ಮುಂದುವರಿಯಬೇಕಾದ ಅವಶ್ಯಕತೆ ಇದೆ ಎಂದು 1008 ಮಹಾಮಂಡಲೇಶ್ವರ ಕನ್ಯಾಡಿ ಶ್ರೀರಾಮ ಸಂಸ್ಥಾನಮ್ ನ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಹೇಳಿದ್ದಾರೆ.ಅವರು ತಪೋಭೂಮಿ ಹರಿದ್ವಾರದ ಭೂಪತ್‌ವಾಲಾದಲ್ಲಿರುವ ತಮ್ಮ ಸಾಧನಾ ಕುಟೀರದ 9 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಂಗಳವಾರ ಆಯೋಜಿಸಲಾದ ಸಂತ ಸಮಾವೇಶದಲ್ಲಿ ಆಶೀರ್ವಚನ ನೀಡಿದರು.

ಸ್ವಾಧ್ಯಾಯದಿಂದ ಮನಸ್ಸನ್ನು‌ ನಿಗ್ರಹಿಸಲು ಸಾಧ್ಯವಾಗುತ್ತದೆ. ಧರ್ಮ ಆಧಾರಿತ ಜೀವನ ನಮ್ಮನ್ನು ಸುಖದ ಕಡೆಗೆ ಕೊಂಡೊಯ್ಯುತ್ತದೆ. ಸಂತರ ಸಾಧನೆ, ತಪಸ್ಸು ಸನಾತನ ಪರಂಪರೆಗೆ ಪೂರಕ. ದೇಶದ ಸುಭಿಕ್ಷತೆಗೆ ಸಂತರು ಸದಾಕಾಲ ಚಿಂತಿಸಬೇಕು. ಭಗವಂತನ ಧ್ಯಾನ, ಚಿಂತನೆ ನಮ್ಮನ್ನು ಸದಾಕಾಲ ಕಾಪಾಡುತ್ತದಲ್ಲದೆ ಮನಸ್ಸನ್ನು ಪ್ರೇಮಮಯವಾಗಿಸುತ್ತದೆ ಎಂದರು.ರಾಜ್ಯದ ಮೀನುಗಾರಿಕಾ ಸಚಿವ ಮಂಕಾಳ್ ವೈದ್ಯ ಮಾತನಾಡಿ, ಕನ್ಯಾಡಿ ಶ್ರೀಗಳು ಸ್ಥಾಪನೆ ಮಾಡಿದ ಮಠಗಳು ನಮ್ಮವೇ ಎಂಬ ಭಾವನೆ ಬೆಳೆಸಿಕೊಂಡಾಗ ಮಾತ್ರ ಅವರ ತ್ಯಾಗಕ್ಕೆ ಬೆಲೆ ಸಿಗುತ್ತದೆ. ಹರಿದ್ವಾರದಲ್ಲಿ ಮಠ ಇರುವುದರಿಂದ ನಮಗೆ ದೇವಭೂಮಿಗೆ ಭೇಟಿ‌ ನೀಡಲು ಸಾಧ್ಯವಾಗುತ್ತಿದೆ. ಅಯೋಧ್ಯೆಯಲ್ಲಿ ವರ್ಷದೊಳಗೆ ಮಠ ಸ್ಥಾಪನೆಯಾಗುವ ವಿಶ್ವಾಸ ವ್ಯಕ್ತಪಡಿಸಿದ ಅವರು ತಿರುಪತಿಯಲ್ಲಿ ಮಠ ನಿರ್ಮಾಣಕ್ಕೆ ಕೈಜೋಡಿಸುವುದಾಗಿ ಆಶ್ವಾಸನೆಯಿತ್ತರು.

ಶಾಸಕ ಹರೀಶ್ ಪೂಂಜ ಅವರು, ಹಿಂದೆ ಆದಿ ಶಂಕರಾಚಾರ್ಯರು ದೇಶದಾದ್ಯಂತ ಮಠಗಳನ್ನು ಸ್ಥಾಪಿಸಿರುವುದು ಇತಿಹಾಸ. ಅದೇ ರೀತಿ ಬ್ರಹ್ಮಾನಂದ ಶ್ರೀಗಳು ಅಭಿನವ ಶಂಕರರಾಗಿದ್ದಾರೆ. ಆಧ್ಯಾತ್ಮ ಚಿಂತನೆ ನಮ್ಮನ್ನು ಧನಾತ್ಮಕತೆಯತ್ತ ಕೊಂಡೊಯ್ಯುತ್ತದೆ. ನಮ್ಮ ಒಳ್ಳೆಯ ಕೆಲಸಗಳು ನಮ್ಮ ನಂತರವೂ ಉಳಿಯುತ್ತವೆಯೇ ಹೊರತು ಆಸ್ತಿ ಸಂಪತ್ತುಗಳಲ್ಲ ಎಂದರು.

ಮಹಂತರಾದ ವಿದ್ಯಾನಂದ ಸರಸ್ವತೀ ಮಹಾರಾಜ್, ಮಹೇಶ್‌ಪುರಿಜೀ, ಲಲಿತಾನಂದ ಗಿರೀಜೀ‌ಮಹಾರಾಜ್, ಇಂದ್ರಾನಂದ ಸರಸ್ವತೀ ಮಹಾರಾಜ್, ಗಗನದೇವ ಮಹಾರಾಜ್, ಸಹಜಾನಂದ ಸರಸ್ವತೀ ಮಹಾರಾಜ್, ಧೀರೇಂದ್ರ ಪುರಿ ಮಹಾರಾಜ್ ಹೀಗೆ 25 ಕ್ಕೂ ಹೆಚ್ಚು ಸಂತರು ವಿರಾಜಮಾನರಾಗಿದ್ದರು.ಮಹಂತ ದೇವಾನಂದ ಮಹಾರಾಜ್ ಅಧ್ಯಕ್ಷತೆ ವಹಿಸಿದ್ದರು.ಉತ್ತರಾಖಂಡದ ಶಾಸಕ ಬಿಜೆಪಿ ಮಾಜಿ ಅಧ್ಯಕ್ಷ ಮದನ್ ಕೌಶಿಕ್, ಶಾಸಕರಾದ ಹರೀಶ್ ಪೂಂಜ, ಭೀಮಣ್ಣ ನಾಯಿಕ, ಬೆಹರಿನ್ ಶ್ರೀರಾಮ ಕ್ಷೇತ್ರ ಸಮಿತಿ ಅಧ್ಯಕ್ಷ, ಜಯಶಂಕರ್ ವಿಶ್ವಾನಾಥ್, ಗಲ್ಫ್ ಫೌಂಡೇಶನ್ ಅಧ್ಯಕ್ಷ ಹರೀಶ್ ಪೂಜಾರಿ, ಉದ್ಯಮಿಗಳಾದ ಬಾಬು ಪೂಜಾರಿ, ಕಿರಣ್‌ಚಂದ್ರ ಪುಷ್ಪಗಿರಿ, ಕಿರಣ್‌ಕುಮಾರ್ ಕೊಡಿಕಲ್, ಅನಿರುದ್ಧ ಭಾಟಿಯಾ, ದ.ಕ.,ಉಡುಪಿ, ಉ.ಕ.ದಿಂದ 150 ಕ್ಕೂ ಹೆಚ್ಚು ಶ್ರೀಗಳ ಶಿಷ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಗೌರೀಶಂಕರ್ ಕಾರ್ಯಕ್ರಮ ನಿರ್ವಹಿಸಿದರು.ಇದಕ್ಕೂ ಮೊದಲು ಮಠದಲ್ಲಿ ಗಣಹವನ ನೆರವೇರಿತು. ಭಜನ್ ಸಂಕೀರ್ತನೆ, ಸಂಜೆ ಹರ್ ಕೀ ಪೌಡಿಯ ಬ್ರಹ್ಮಕುಂಡದಲ್ಲಿ ಕನ್ಯಾಡಿ ಸ್ವಾಮೀಜಿಯವರ ವತಿಯಿಂದ ಗಂಗಾರತಿ ಸಂಪನ್ನಗೊಂಡಿತು.

PREV

Recommended Stories

ಡಿಕೆಶಿ ಭೇಟಿಯಾದ್ರೂ ಸಿದ್ದುಗೇ ನಮ್ಮ ಬೆಂಬಲ: ಜಾರಕಿಹೊಳಿ
2028ಕ್ಕೆ ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಸತೀಶ್‌ ಜತೆ ಚರ್ಚೆ : ಡಿಕೆ