ಪರವಾನಗಿ ನವೀಕರಣ, ಕಂದಾಯ ವಸೂಲಿ ಆಂದೋಲನಕ್ಕೆ ಚಾಲನೆ ನೀಡಿದ ಭಂಡಾರಿ ಶ್ರೀನಿವಾಸ್
ಕನ್ನಡಪ್ರಭ ವಾರ್ತೆ ಕಡೂರುಪಟ್ಟಣದ ಪುರಸಭೆಯ 23 ವಾರ್ಡ್‍ಗಳಲ್ಲಿ ವಾಣಿಜ್ಯ ಮಳಿಗೆ, ಹೋಟೆಲ್, ಅಂಗಡಿ, ಮಹಲ್‍ಗಳ ಪರವಾನಗಿ ನವೀಕರಣ ಮತ್ತು ಕಂದಾಯ ವಸೂಲಿಗೆ ವಿಶೇಷ ತಂಡಗಳನ್ನು ರಚಿಸಿ ಬೃಹತ್ ಆಂದೋಲನಕ್ಕೆ ಚಾಲನೆ ನೀಡಲಾಗುತ್ತಿದೆ. ಸಾರ್ವಜನಿಕರು ಅಂಗಡಿ, ಹೋಟೆಲ್ ಮಾಲೀಕರು, ವಾಣಿಜ್ಯೋದ್ಯಮಿಗಳು ಹಾಗೂ ವ್ಯಾಪಾರಿಗಳು ಸಕಾಲದಲ್ಲಿ ಪುರಸಭೆಗೆ ಕಂದಾಯ ಕಟ್ಟುವ ಮೂಲಕ ಪಟ್ಟಣದ ಅಭಿವೃದ್ಧಿಗೆ ಕೈಜೋಡಿಸಬೇಕು. ಎಂದು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.
ಸೋಮವಾರ ಪಟ್ಟಣದಲ್ಲಿ ಪುರಸಭೆ ಅಧಿಕಾರಿ ಸಿಬ್ಬಂದಿಯೊಂದಿಗೆ ಪ್ರಾವಿಜನ್ ಸ್ಟೋರ್ ಗಳ ವಾಣಿಜ್ಯ ವ್ಯಾಪಾರಿಗಳಿಗೆ ಪರವಾನಗಿ ನೀಡುವ ಮೂಲಕ ಕಂದಾಯ ವಸೂಲಿ ಬೃಹತ್ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ, ಪುರಸಭೆ ಆಡಳಿತ ಕಂದಾಯ ವಸೂಲಿ ಹಾಗೂ ಲೈಸೆನ್ಸ್ ನವೀಕರಣಕ್ಕೆ ಒತ್ತು ನೀಡಿ, ಆದಾಯ ಹೆಚ್ಚಿಸಲು ಆಂದೋಲನ ಹಮ್ಮಿಕೊಂಡಿದೆ ಎಂದು ತಿಳಿಸಿದರು.ನಮ್ಮ ಅಧಿಕಾರಿಗಳು, ಸಿಬ್ಬಂದಿ ತಂಡಗಳು ಮನೆ ಕಂದಾಯ, ನೀರಿನ ಕಂದಾಯ, ವಾಣಿಜ್ಯ ಮಳಿಗೆಗಳ ನವೀಕರಣ ಸೇರಿದಂತೆ ಶುಲ್ಕ ವಸೂಲಾತಿಗೆ ಮೊದಲ ಅದ್ಯತೆ ನೀಡಿದ್ದು, ಸಾರ್ವಜನಿಕರು ತಪ್ಪದೆ ಬಾಕಿ ಉಳಿಸಿಕೊಂಡಿರುವ ಹಣವನ್ನು ಕಟ್ಟಿ ಎಂದು ಅಧ್ಯಕ್ಷರು ಮನವಿ ಮಾಡಿದರು.
ತಿಂಗಳೊಂದಕ್ಕೆ ಕನಿಷ್ಠ ₹25 ಲಕ್ಷ ಹಣ ಪುರಸಭೆ ಸಿಬ್ಬಂದಿ ವರ್ಗ, ಸ್ವಚ್ಛತೆಗೆ ವೆಚ್ಚವಾಗುತ್ತಿದೆ. ಪಟ್ಟಣ ದಿನೇ ದಿನೇ ಬೆಳೆಯುತ್ತಿದ್ದು, ಸಾರ್ವಜನಿಕರು ಪುರಸಭೆ ಅಭಿವೃದ್ಧಿಗೆ ಕಾಲ ಕಾಲಕ್ಕೆ ಸರಿಯಾಗಿ ಕಂದಾಯ ಕಟ್ಟುವ ಮೂಲಕ ಸಹಕಾರ ನೀಡಬೇಕು. ಪುರಸಭೆಗೆ ಸಂಬಂಧಿಸಿದಂತೆ ನಿಮ್ಮ ಸಮಸ್ಯೆಗಳಿದ್ದರೆ ಪುರಸಭೆಗೆ ಬಂದು ಮಾಹಿತಿ ನೀಡಿದರೆ ಬಗೆಹರಿಸಲು ಪ್ರಯತ್ನ ಮಾಡುತ್ತೇವೆ. ಸಿಬ್ಬಂದಿಯೊಂದಿಗೆ ಸ್ನೇಹದಿಂದ ವರ್ತಿಸಬೇಕು ಎಂದು ಕೋರಿದರು.ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ಪರಿಸರ ಇಂಜಿನಿಯರ್ ಶ್ರೇಯಸ್, ಆರೋಗ್ಯಾಧಿಕಾರಿ ಮಂಜುನಾಥ್, ಶ್ರೀನಿ ವಾಸಮೂರ್ತಿ, ಬಿ.ಜಿ. ತಿಮ್ಮಯ್ಯ, ಪ್ರೇಮಾ, ಅನಿತಾ ಮತ್ತು ಮಂಜಪ್ಪ ತಂಡಗಳು ವಾರ್ಡ್‍ಗಳಿಗೆ ತೆರಳಿ ಸಾರ್ವಜನಿಕರಿಗೆ ಆಂದೋಲನದ ಉದ್ದೇಶ ತಿಳಿಸಿದರು.