ಐತಿಹಾಸಿಕ ದಾಖಲೆಗಳ ಸಂಗ್ರಹ ಮತ್ತು ಸಂರಕ್ಷಣೆ ನಮ್ಮ ಕರ್ತವ್ಯ: ಡಾ. ಅಜಿತ ಪ್ರಸಾದ

KannadaprabhaNewsNetwork |  
Published : Jan 09, 2024, 02:00 AM ISTUpdated : Jan 09, 2024, 05:48 PM IST
8ಡಿಡಬ್ಲೂಡಿ4ಜೆ.ಎಸ್.ಎಸ್. ಕಾಲೇಜು ಹಾಗೂ ಪ್ರಾದೇಶಿಕ ಪತ್ರಗಾರ ಇಲಾಖೆ ಜಂಟಿಯಾಗಿ ಹಮ್ಮಿಕೊಂಡಿದ್ದ ಒಂದು ದಿನದ ಪತ್ರಗಾರ ಕೂಟ ಮತ್ತು ಉಪನ್ಯಾಸ ಮಾಲೆ ಕಾರ್ಯಕ್ರಮದ ಉದ್ಘಾಟನೆ.  | Kannada Prabha

ಸಾರಾಂಶ

ಐತಿಹಾಸಿಕ ದಾಖಲೆಗಳ ಸಂಗ್ರಹ ಮತ್ತು ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ಆ ಮೂಲಕ ಆ ದಾಖಲೆಗಳಿಂದ ಲಭ್ಯವಾಗುವ ಐತಿಹಾಸಿಕ, ಮಹತ್ವಪೂರ್ಣ ಘಟನೆಗಳ ಮಾಹಿತಿಯನ್ನು ಇಂದಿನ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕೆಂದು ಜೆಎಸ್ಸೆಸ್‌ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಐತಿಹಾಸಿಕ ದಾಖಲೆಗಳ ಸಂಗ್ರಹ ಮತ್ತು ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ಆ ಮೂಲಕ ಆ ದಾಖಲೆಗಳಿಂದ ಲಭ್ಯವಾಗುವ ಐತಿಹಾಸಿಕ, ಮಹತ್ವಪೂರ್ಣ ಘಟನೆಗಳ ಮಾಹಿತಿಯನ್ನು ಇಂದಿನ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕೆಂದು ಜೆಎಸ್ಸೆಸ್‌ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.

ನಗರದ ಜೆ.ಎಸ್.ಎಸ್. ಕಾಲೇಜು ಹಾಗೂ ಪ್ರಾದೇಶಿಕ ಪತ್ರಗಾರ ಇಲಾಖೆ ಜಂಟಿಯಾಗಿ ಹಮ್ಮಿಕೊಂಡಿದ್ದ ಒಂದು ದಿನದ ಪತ್ರಗಾರ ಕೂಟ ಮತ್ತು ಉಪನ್ಯಾಸ ಮಾಲೆಯನ್ನು ಉದ್ಘಾಟಿಸಿ ಮಾತನಾಡಿದರು.

ಐತಿಹಾಸಿಕ ದಾಖಲೆಗಳು ಅತ್ಯಮೂಲ್ಯ ಮಾಹಿತಿ ನೀಡುವ ಮೂಲಕ ಒಂದು ವಿಷಯದ ಪರಿಪೂರ್ಣ ಚರಿತ್ರೆಯನ್ನು ಕಟ್ಟುವಲ್ಲಿ ಮತ್ತು ಅಧ್ಯಯನ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹೀಗಾಗಿ, ಇಂದಿನ ವಿದ್ಯಾರ್ಥಿಗಳು ತಾಳೆಗರಿ, ದಾಖಲೆ ಪತ್ರ ಮುಂತಾದವುಗಳನ್ನು ಸಂರಕ್ಷಿಸುವುದರೊಂದಿಗೆ ಅವುಗಳ ಅಧ್ಯಯನದಲ್ಲಿ ತೊಡಗಬೇಕು ಎಂದು ಹೇಳಿದರು.

ಕಾಳಿದಾಸ ಕವಿಯ ಕಾವ್ಯವಾದ ಮೇಘದೂತ ಸಹ ಐತಿಹಾಸಿಕ ಸ್ಥಳಗಳ ದಾಖಲೆ ನೀಡುವ ಗ್ರಂಥವಾಗಿದೆ. ಇಂತಹ ಅಮೂಲ್ಯ ಸಂಗತಿಗಳ ಬಗ್ಗೆ ಮಾಹಿತಿ ನೀಡುವ ದಾಖಲೆಗಳ ಸಂರಕ್ಷಣೆ ಮತ್ತು ಅಧ್ಯಯನಕ್ಕಾಗಿಯೇ ಧಾರವಾಡದಲ್ಲಿ ಪತ್ರಗಾರ ಇಲಾಖೆ ಸ್ಥಾಪನೆಯಾಗಿದೆ ಎಂದರು.

ಧಾರವಾಡ ಪ್ರಾದೇಶಿಕ ಪತ್ರಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಮಂಜುಳಾ ಯಲಿಗಾರ, ದಾಖಲೆಗಳ ಸಂರಕ್ಷಣೆ, ಅವುಗಳ ಮಹತ್ವ, ಸಂರಕ್ಷಣಾ ವಿಧಾನ, ಸ್ಥಳೀಯ ಇತಿಹಾಸ ಕಲೆ ಹಾಕಬೇಕು. ಮೌಖಿಕ ಇತಿಹಾಸ ಕಡೆಗೂ ನಾವಿಂದು ಹೆಜ್ಜೆಹಾಕಬೇಕಾಗಿದೆ. ನಾವಾಡುವ ಒಂದೊಂದು ಪದವೂ ಒಂದೊಂದು ಇತಿಹಾಸವನ್ನು ಹೇಳುತ್ತದೆ. 

ಹೀಗಾಗಿ, ಇಂದಿನ ಪೀಳಿಗೆ ಐತಿಹಾಸಿಕ ದಾಖಲೆಗಳ ಸಂರಕ್ಷಣೆಗೆ ಮುಂದಾಬೇಕು. ಆಗ ಮಾತ್ರ ಮುಂದಿನ ಪೀಳಿಗೆಗೆ ಇತಿಹಾಸದ ಪರಿಪೂರ್ಣ ಮಾಹಿತಿ ಲಭ್ಯವಾಗುವುದು. ವಿದ್ಯಾರ್ಥಿಗಳು ತಮಗೆ ಸಿಕ್ಕ ದಾಖಲೆಗಳ ಸಂರಕ್ಷಣೆಯಲ್ಲಿ ತೊಡಗಬೇಕು ಎಂದರು.

ಆಧುನಿಕ ಭಾರತದ ಇತಿಹಾಸ ಕುರಿತು ವಿವಿಧ ಘಟನಾವಳಿಗಳ ದಾಖಲೆಗಳ ಕುರಿತು ಸಾಕಷ್ಟು ಅಧ್ಯಯನ ಆಗಿದೆ. ಇದರಿಂದ ಇತಿಹಾಸಗಾರರಿಗೆ ಹೊಸ ಹೊಸ ಅಭಿಪ್ರಾಯಗಳು ಮೂಡಿವೆ. 1857ರ ದಂಗೆ ಬ್ರಿಟಿಷ ಇತಿಹಾಸಕಾರರು ಇದನ್ನು ಸಿಪಾಯಿ ದಂಗೆ ಎಂದರು. ಕಮ್ಯುನಿಷ್ಟವಾದಿಗಳು ಇದ್ದವರು ಇಲ್ಲದವರ ನಡುವೆ ಘರ್ಷಣೆ ಎಂದರು. 

ಬಿ.ಡಿ. ಸಾವರ್ಕರ ಇದನ್ನು ಪ್ರಥಮ ಸ್ವಾತಂತ್ರ‍್ಯ ಯುದ್ಧ ಎಂದು ಕರೆದರು. ಹೀಗೆ ಭಿನ್ನಾಭಿಪ್ರಾಯಗಳು ಬೆಳೆದು ಪ್ರಸ್ತುತ ಆರ್.ಸಿ.ಮುಜುಂದಾರ ಅವರು ಇದನ್ನು ಸಿಪಾಯಿ ದಂಗೆಗಿಂತ ಹೆಚ್ಚು ಆದರೆ ಸ್ವಾತಂತ್ರ‍್ಯ ಯುದ್ಧ ಆಗಿಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ. ಎಂದು ಇತಿಹಾಸ ತಜ್ಞರು, ನಿವೃತ್ತ ಪ್ರಾಚಾರ್ಯರೂ ಆದ ಡಾ. ಸಿ.ಎಸ್. ಹಸಬಿ ಅವರು ಉಪನ್ಯಾಸ ನೀಡಿದರು.

ಪ್ರಾಚೀನ ಭಾರತದ ಇತಿಹಾಸ ಕಟ್ಟುವಲ್ಲಿ ಸಹಕಾರಿಯಾದ ಶಾಸನ, ತಾಳೆಗರಿ, ಪ್ರಾಚೀನ ದೇವಾಲಯಗಳು, ಸ್ಮಾರಕಗಳು ಇತರ ದಾಖಲೆಗಳ ಕುರಿತಂತೆ ಧಾರವಾಡ ಕರ್ನಾಟಕ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಜಗದೀಶ ಕಿವುಡನ್ನವರ ಎರಡನೇ ಉಪನ್ಯಾಸ ನೀಡಿದರು.

ಡಾ. ಆರ್. ವಿ. ಚಿಟಗುಪ್ಪಿ ಸ್ವಾಗತಿಸಿದರು. ಡಾ. ಶಿವಾನಂದ ಟವಳಿ ಪರಿಚಯಿಸಿದರು, ಪ್ರೊ. ಮಹಾಂತ ದೇಸಾಯಿ ನಿರೂಪಿಸಿದರು. ಪ್ರೊ. ಮಹಾಂತ ದೇಸಾಯಿ, ಪ್ರೊ. ಬಿ.ಜಿ. ಕುಂಬಾರ, ಮಹಾವೀರ ಉಪಾಧ್ಯೆ, ಮಹಾಂತೇಶ ರವಾಟಿ, ವೈಶಾಲಿ ಕುಂದಗೋಳ ಇದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ