ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲೆಯ ಎಲ್ಲಾ ರಕ್ತನಿಧಿ ಕೇಂದ್ರಗಳು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಬೇಕು ಜೊತೆಗೆ ಲೈಂಗಿಕ ಕಾರ್ಯಕರ್ತ ಸಮುದಾಯದಲ್ಲಿ ಎಚ್‌ಐವಿ ಕುರಿತು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ರಕ್ತ ಟಾಸ್ಕ್ಫೋರ್ಸ್ ಮೊದಲನೇ ತ್ರೈಮಾಸಿಕ ಸಮಿತಿ ಹಾಗೂ ಟಿಬಿ ಕೋಮಾರ್ಬಿಟಿ ಸಭೆಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಮೆಗ್ಗಾನ್ ಆಸ್ಪತ್ರೆಯಲ್ಲಿರುವ ಒಂದು ಸರ್ಕಾರಿ ರಕ್ತನಿಧಿ ಕೇಂದ್ರ ಸೇರಿದಂತೆ ಒಟ್ಟು 09 ರಕ್ತನಿಧಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಮೆಗ್ಗಾನ್ ಆಸ್ಪತ್ರೆಯಲ್ಲೇ ಪ್ರತಿ ಒಂದು ದಿನಕ್ಕೆ 60 ರಿಂದ 70 ಯೂನಿಟ್‌ಗಳಷ್ಟು ರಕ್ತ ಬೇಕಾಗುತ್ತದೆ. ಪ್ಯಾಕಡ್ ರೆಡ್ ಸೆಲ್ಸ್, ಪ್ಲೇಟ್‌ಲೇಟ್ಸ್‌ಗೆ ಹೆಚ್ಚಿನ ಬೇಡಿಕೆ ಇರುತ್ತದೆ ಎಂದರು.
2024-25 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 24090 ಯುನಿಟ್ ರಕ್ತವನ್ನು ರಕ್ತನಿಧಿ ಕೇಂದ್ರಗಳಲ್ಲಿ, 14106 ಯುನಿಟ್ ರಕ್ತವನ್ನು ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳಲ್ಲಿ ಸಂಗ್ರಹಿಸಲಾಗಿದ್ದು, ಒಟ್ಟು 422 ರಕ್ತದಾನ ಶಿಬಿರಗಳನ್ನು ಕೈಗೊಳ್ಳಲಾಗಿದೆ. ರಕ್ತನಿಧಿ ಕೇಂದ್ರಗಳು ಸಮನ್ವಯದೊಂದಿಗೆ ನಿಯಮಾನುಸಾರ ಕಾರ್ಯ ನಿರ್ವಹಿಸಬೇಕು. ರಕ್ತ ವ್ಯರ್ಥವಾಗದಂತೆ ಬಳಕೆ ಮಾಡಬೇಕು. ಖಾಸಗಿ ರಕ್ತ ಕೇಂದ್ರಗಳು ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಸಂಗ್ರಹವಾದ ರಕ್ತದಲ್ಲಿ ನಿಯಮಾನುಸಾರ ಪ್ರತಿ ತಿಂಗಳು ಜಿಲ್ಲಾ ಸರ್ಕಾರಿ ರಕ್ತ ಕೇಂದ್ರಕ್ಕೆ ಶೇ.25 ರಷ್ಟು ರಕ್ತವನ್ನು ನೀಡಬೇಕೆಂದು ತಿಳಿಸಿದರು.ಕಳೆದ ಸಾಲಿನಲ್ಲಿ ಜಿಲ್ಲಾಸ್ಪತ್ರೆಯ ಸರ್ಕಾರಿ ರಕ್ತನಿಧಿ ಕೇಂದ್ರದಿಂದ 160 ಶಿಬಿರ ಸೇರಿದಂತೆ ಇತರೆ ರಕ್ತ ಕೇಂದ್ರಗಳು 422 ರಕ್ತದಾನ ಶಿಬಿರ ಏರ್ಪಡಿಸಿದ್ದು, ಇನ್ನೂ ಹೆಚ್ಚು ಶಿಬಿರಗಳನ್ನು ಕೈಗೊಂಡು ಹೆಚ್ಚಿನ ರಕ್ತದಾನವಾಗುವಂತೆ ಗಮನ ಹರಿಸಬೇಕು. ರಕ್ತದ ಯೂನಿಟ್‌ಗಳಿಗೆ ನಿಗದಿಪಡಿಸಿರುವ ದರದ ಮಾಹಿತಿಯನ್ನು ಮತ್ತು ರಕ್ತದ ಯುನಿಟ್‌ಗಳ ಲಭ್ಯತೆಯ ಮಾಹಿತಿಯನ್ನು ರಕ್ತ ಕೇಂದ್ರದ ಮುಂಭಾಗ ಪ್ರಕಟಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ನಾಗೇಶ್ ಬಿ.ಪಿ ಮಾತನಾಡಿ, ಜಿಲ್ಲಾ ಏಡ್ಸ್ ನಿಯಂತ್ರಣ ಕಾರ್ಯಕ್ರಮದಡಿ ನಿಯಮಿತವಾಗಿ ಹೆಚ್‌ಐವಿ ಪರೀಕ್ಷೆಗಳನ್ನು ನಡೆಸಿ ಪಾಸಿಟಿವ್ ಬಂದಿರುವವರಿಗೆ ಎಆರ್‌ಟಿ ಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ. ಹಾಗೂ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಮಾಡಲಾಗುತ್ತಿದೆ. 2024-25 ರಲ್ಲಿ 249 ಜನಕ್ಕೆ ಹೆಚ್‌ಐವಿ ಪಾಸಿಟಿವ್ ಇದ್ದು, 245 ಜನರು ಎಆರ್‌ಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಮರಣ ಹೊಂದಿದ್ದಾರೆ. ಪ್ರಸವಪೂರ್ವ ಚಿಕಿತ್ಸೆ ಪಡೆಯುವ ಎಎನ್‌ಸಿ ವಿಭಾಗದಲ್ಲಿ 8 ಗರ್ಭಿಣಿಯರಲ್ಲಿ ಹೆಚ್‌ಐವಿ ಪಾಸಿಟಿವ್ ಕಂಡುಬಂದಿದ್ದು ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.ಕ್ಷಯ ಪತ್ತೆಗಾಗಿ ನಿಯಮಿತವಾಗಿ ಪರೀಕ್ಷೆಗಳು, ಸಕ್ರಿಯ ಪತ್ತೆ ಚಟುವಟಿಕೆಗಳು ನಡೆಯುತ್ತಿದ್ದು, 2024-25 ರಲ್ಲಿ 611 ಜನರಲ್ಲಿ ಕ್ಷಯ ರೋಗ ಪತ್ತೆಯಾಗಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿಗಳು, ಏಡ್ಸ್ ರೋಗದ ಕುರಿತು ಮಹಿಳಾ, ಪುರುಷ, ಇತರೆ ಲೈಂಗಿಕ ಕಾರ್ಯಕರ್ತರಲ್ಲಿ ಇಲಾಖೆ ಸೇರಿದಂತೆ ಎನ್‌ಜಿಓ ಗಳು ವೈಯಕ್ತಿಕವಾಗಿ ಅವರನ್ನು ಭೇಟಿ ಮಾಡಿ ಹಾಗೂ ಅವರು ಇರುವ ಸ್ಥಳಕ್ಕೆ ತೆರಳಿ ಜಾಗೃತಿ ಮೂಡಿಸಬೇಕು. ಅರಿವು ಆಂದೋಲನವನ್ನು ಕೈಗೊಳ್ಳಬೇಕು. ಹಾಗೂ ಎಲ್ಲ ತಾಲೂಕುಗಳಲ್ಲಿ ಕ್ಷಯ ರೋಗ ಪತ್ತೆ ಪರೀಕ್ಷೆಗಳನ್ನು ಮಾಡಬೇಕು ಎಂದು ಸೂಚನೆ ನೀಡಿದರು.ಜಿಲ್ಲೆಯಲ್ಲಿ ನಮ್ಮ ಕ್ಲಿನಿಕ್ ತೆರೆಯಲು ಸೂಕ್ತ ಸ್ಥಳಾವಕಾಶ, ಇತರೆ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲಿಸಿ ಶೀಘ್ರದಲ್ಲೇ ಕ್ಲಿನಿಕ್‌ಗಳನ್ನು ಪ್ರಾರಂಭಿಸಲು ಕ್ರಮ ವಹಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಡಿಹೆಚ್‌ಓ ಮಾತನಾಡಿ, ರಕ್ತನಿಧಿ ಕೇಂದ್ರಗಳ ಪ್ರಗತಿ ವಿವರ ನೀಡಿದರು. ಆರ್‌ಸಿಎಚ್‌ಓ ಡಾ. ಮಲ್ಲಪ್ಪ, ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ, ರಕ್ತನಿಧಿ ಕೇಂದ್ರಗಳ ಮುಖ್ಯಸ್ಥರು, ಎನ್‌ಜಿಓ ಗಳ ಮುಖ್ಯಸ್ಥರು, ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.