ಕನ್ನಡಪ್ರಭ ವಾರ್ತೆ ಸಕಲೇಶಪುರ
ಯಾವುದೇ ಅಡ್ಡಪರಿಣಾಮವಿಲ್ಲದೆ ಬಣ್ಣ ಹಾಗೂ ವಿವಿಧ ಬಗೆಯ ಧಾನ್ಯಗಳನ್ನು ಬಳಸಿ ಬೀಜ ಥೆರಪಿಯ ಮೂಲಕ ರೋಗಗಳನ್ನು ಗುಣಪಡಿಸಿ, ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸಾಧ್ಯ ಎಂದು ಬಸವ ಅಕಾಡೆಮಿಯ ಹೀಲರ್ ಸಾ.ಸು ವಿಶ್ವನಾಥ್ ಹೇಳಿದರು.ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಬಸವ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಮಾತನಾಡಿ, ಬಣ್ಣಗಳ ಮಾಯಾಲೋಕ, ಅಂಗೈಯಲ್ಲಿ ಆರೋಗ್ಯ ಎನ್ನುವುದು ಅಕಾಡೆಮಿಯ ಧ್ಯೇಯವಾಗಿದೆ. ಇಂದಿನ ಜನರು ಔಷಧಿಗಳ ಮೇಲೆ ಅವಲಂಬಿತರಾಗಿ ತಮ್ಮ ದೇಹದ ರಕ್ಷಣಾಶಕ್ತಿಯನ್ನು (ಇಮ್ಯೂನಿಟಿ) ಕಡಿಮೆ ಮಾಡಿಕೊಂಡಿದ್ದಾರೆ. ಗುಳಿಗೆಯಿಲ್ಲದ ಚಿಕಿತ್ಸೆಯ ಮೂಲಕ ದೇಹದ ಇಮ್ಯೂನಿಟಿಯನ್ನು ಹೆಚ್ಚಿಸಬಹುದು.
ರಾಜ್ಯಾದ್ಯಂತ ಬಣ್ಣ ಥೆರಪಿಯ ಕುರಿತು ಜಾಗೃತಿ ಮೂಡಿಸಲು ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಮೈಗ್ರೇನ್, ಹೃದಯ ಸಂಬಂಧಿತ ಸಮಸ್ಯೆ, ಥೈರಾಯ್ಡ್ ಸೇರಿದಂತೆ ಹಲವು ಗಂಭೀರ ಕಾಯಿಲೆಗಳಿಗೆ ಸಹ ಈ ವಿಧಾನದಿಂದ ಪರಿಹಾರ ದೊರೆಯುತ್ತಿದೆ ಎಂದರು.ಅಕಾಡೆಮಿಯ ಹೀಲರ್ ಚಾಂದಿನಿ ಪರಮೇಶ್ ಮಾತನಾಡಿ, ಇಂದಿನ ಜನರು ಔಷಧಿ ಸೇವನೆಯ ಮೂಲಕ ಮಾತ್ರ ಆರೋಗ್ಯ ಸಾಧಿಸಬಹುದು ಎಂಬ ನಂಬಿಕೆ ಹೊಂದಿದ್ದಾರೆ. ಆದರೆ ಪ್ರಾಚೀನ ಭಾರತೀಯ ವೈದ್ಯ ಪದ್ಧತಿಯಲ್ಲಿ ಬಣ್ಣ ಮತ್ತು ಆಕ್ಯುಪ್ರೆಶರ್ ಮೂಲಕವೂ ಆರೋಗ್ಯ ಸುಧಾರಣೆ ಸಾಧ್ಯ. ಅಕಾಡೆಮಿಯ ಸಂಸ್ಥಾಪಕ ಬಸವರಾಜ್ ಕಳೆದ ೧೫ ವರ್ಷಗಳಿಂದ ಈ ವಿಷಯದಲ್ಲಿ ಸಂಶೋಧನೆ ನಡೆಸಿ, ಜನರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಡುತ್ತಿದ್ದಾರೆ ಎಂದು ಹೇಳಿದರು.
ಪಲ್ಸ್ ಟೆಕ್ನಾಲಜಿಯ ಮೂಲಕ ದೇಹದ ವ್ಯತ್ಯಾಸಗಳು, ವಾತ-ಪಿತ್ತ-ಕಫದ ಅಸಮತೋಲನ ಹಾಗೂ ಅಂಗಾಂಗಗಳ ದುರ್ಬಲತೆಗಳನ್ನು ಗುರುತಿಸಲು ಸಾಧ್ಯ. ಜೊತೆಗೆ ಆಹಾರ ಕ್ರಮ, ದಿನಚರಿ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ತರಲು ಮಾರ್ಗದರ್ಶನ ನೀಡಲಾಗುತ್ತದೆ ಎಂದರು.ಸಕಲೇಶಪುರದಲ್ಲಿ ಮೊದಲ ಬಾರಿಗೆ ಆಯೋಜಿಸಲಾದ ಈ ಶಿಬಿರದ ಉಪಯೋಗವನ್ನು ಸುಮಾರು ೯೦೦ ಮಂದಿ ಪಡೆದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ನೇತ್ರಾವತಿ, ಶಾಸಕ ಸಿಮೆಂಟ್ ಮಂಜು ಪತ್ನಿ ಪ್ರತಿಭಾ, ಹೀಲರ್‌ಗಳಾದ ಸುಬ್ರಮಣ್ಯ, ಯೋಗೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.