ಸುಣ್ಣ ತಯಾರಿಸುವ ಕುಟುಂಬಗಳ ಮುಖದಲ್ಲಿ ಬಣ್ಣದ ನಗು!

KannadaprabhaNewsNetwork |  
Published : Jan 11, 2024, 01:31 AM ISTUpdated : Jan 11, 2024, 01:31 PM IST
ತಾಪಂ ಇಒ ಭೇಟಿ ಮಾಡಿರುವುದು | Kannada Prabha

ಸಾರಾಂಶ

ಸುಣ್ಣ ತಯಾರಿಕೆ ಕುಟುಂಬಗಳ ಮಹಿಳೆಯರಿಗೆ ಸಂಜೀವಿನಿ ಒಕ್ಕೂಟದಿಂದ ಸಾಲ ಸಿಗುತ್ತಿದೆ. ಇದರಿಂದ ಅವರ ಆರ್ಥಿಕ ಸಂಕಷ್ಟ ಪರಿಹಾರಕ್ಕೆ ಸಹಕಾರಿಯಾಗಿದ್ದು, ಸುಣ್ಣ ತಯಾರಿಕೆಯನ್ನೇ ನೆಚ್ಚಿಕೊಂಡಿದ್ದ ಕುಂಟುಬಗಳ ಮುಖದಲ್ಲಿ ಮಂದಹಾಸ ಮೂಡಿಸುತ್ತಿದೆ.

ಎಸ್.ಎಂ.ಸೈಯದ್ ಗಜೇಂದ್ರಗಡ

ರಾಸಾಯನಿಕ ಸುಣ್ಣ, ಬಣ್ಣಗಳ ಅಬ್ಬರಕ್ಕೆ ಸಿಲುಕಿ ಸಂಕಷ್ಟಕ್ಕೆ ಒಳಗಾಗಿದ್ದ ಸುಣ್ಣ ತಯಾರಿಕೆ ಕುಟುಂಬಗಳ ಮಹಿಳೆಯರಿಗೆ ಸಂಜೀವಿನಿ ಒಕ್ಕೂಟದಿಂದ ಸಾಲ ಸಿಗುತ್ತಿದೆ. ಇದರಿಂದ ಅವರ ಆರ್ಥಿಕ ಸಂಕಷ್ಟ ಪರಿಹಾರಕ್ಕೆ ಸಹಕಾರಿಯಾಗಿದ್ದು, ಸುಣ್ಣ ತಯಾರಿಕೆಯನ್ನೇ ನೆಚ್ಚಿಕೊಂಡಿದ್ದ ಕುಂಟುಬಗಳ ಮುಖದಲ್ಲಿ ಮಂದಹಾಸ ಮೂಡಿಸುತ್ತಿದೆ.

ತಾಲೂಕಿನ ರಾಜೂರು ಗ್ರಾಮದಲ್ಲಿ ಅನೇಕ ತಲೆಮಾರುಗಳಿಂದ ಗುಡಿ ಕೈಗಾರಿಕೆಯಾದ ಸುಣ್ಣ ತಯಾರಿಸುವ ಕಸುಬನ್ನು ನೆಚ್ಚಿಕೊಂಡು ಅನೇಕ ಕುಟುಂಬಗಳು ಜೀವನ ಸಾಗಿಸುತ್ತಿವೆ. ಆದರೆ ಆಧುನಿಕ ಭರಾಟೆಯಿಂದ ಸುಣ್ಣದ ಬೇಡಿಕೆ ಕಡಿಮೆಯಾಗಿದ್ದು, ಸುಣ್ಣ ತಯಾರು ಹಾಗೂ ಮಾರಾಟ ಮಾಡುವ ಕುಟುಂಬಗಳ ಜೀವನವು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿತ್ತು. 

ಸರ್ಕಾರ ಸ್ವ-ಸಹಾಯ ಸಂಘಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿ ಗುಡಿ ಕೈಗಾರಿಕೆ ಉತ್ತೇಜನಕ್ಕೆ ಮುಂದಾಗಿರುವುದು ಪ್ರಶಂಸೆಗೆ ಪಾತ್ರವಾಗಿದೆ.

ತಾಲೂಕಿನ ಐತಿಹಾಸಿಕ ರಾಜೂರ ಗ್ರಾಮ ಸುಣ್ಣ ತಯಾರಿಕೆಯಲ್ಲಿ ಅಗ್ರಸ್ಥಾನದಲ್ಲಿದ್ದು, ೨೦೦ ಸುಣ್ಣದ ಭಟ್ಟಿ (ಸುಣ್ಣ ತಯಾರಿಕಾ ಕೇಂದ್ರ)ಗಳಿದ್ದು, ೧೫೦ ಕ್ಕೂ ಹೆಚ್ಚು ಕುಟುಂಬಗಳು ಸುಣ್ಣ ತಯಾರಿಕೆಯಿಂದ ಬದುಕು ಕಟ್ಟಿಕೊಂಡಿವೆ. 

ಹೀಗಾಗಿ ರಾಜೂರ ಗ್ರಾಮದಲ್ಲಿ ಸಿದ್ದಗೊಳ್ಳುವ ಸುಣ್ಣಕ್ಕೆ ಈ ಭಾಗದಲ್ಲಿ ಎಲ್ಲಿಲ್ಲದ ಬೇಡಿಕೆಯಿದ್ದು, ಕುಟುಂಬ ಸದಸ್ಯೆರೆಲ್ಲ ಸಾಮೂಹಿಕ ಪರಿಶ್ರಮದಿಂದ ಹಗಲು ರಾತ್ರಿ ಎನ್ನದೆ ಉತ್ಸುಕತೆಯಿಂದ ಸುಣ್ಣ ತಯಾರಿಸಿ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಿ ಸುಣ್ಣ ಮಾರಾಟ ಮಾಡುತ್ತಿದ್ದರು.

ಪರಿಶ್ರಮಕ್ಕೆ ತಕ್ಕ ಆದಾಯವೂ ಸುಣ್ಣಗಾರರ ಜೇಬು ಸೇರುತ್ತಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಬಣ್ಣಗಳ ಅಬ್ಬರದಿಂದ ಸುಣ್ಣಕ್ಕೆ ಬೇಡಿಕೆ ಇಲ್ಲದಂತಾಗಿ ಸುಣ್ಣ ತಯಾರಿಕೆ ಕುಟುಂಬಗಳಿಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿತ್ತು.

ನ್ಯಾಷನಲ್ ರೂರಲ್ ಲೈವಲಿಹುಡ್ ಮಿಷನ್ (ಎನ್‌ಆರ್‌ಎಲ್‌ಎಂ) ತಾಲೂಕು ಘಟಕದಿಂದ ಸುಣ್ಣ ತಯಾರಿಕೆ ಮಾಡುವ ೨೫-೩೦ ಮಹಿಳೆಯರನ್ನು ಸೇರಿಸಿ ಶ್ರೀದೇವಿ ಸ್ತ್ರೀ ಶಕ್ತಿ ಸಂಘ ಎಂಬ ಶಿರೋನಾಮೆಯಲ್ಲಿ ಸಂಘಟನೆ ರಚಿಸಿದ್ದು, ಈಗಾಗಲೇ ಸುಮಾರು ₹ ೮ ರಿಂದ ೧೦ ಲಕ್ಷ ಸಾಲ ಪಡೆದುಕೊಂಡು ಸುಣ್ಣ ತಯಾರಿಕೆ ಘಟಕ ನಡೆಸುತ್ತಿದ್ದಾರೆ. 

ಗುಡಿ ಕೈಗಾರಿಕೆಗಳನ್ನೇ ನೆಚ್ಚಿಕೊಂಡ ಕುಟುಂಬಗಳ ಜೀವನೋಪಾಯಕ್ಕಾಗಿ ಹಾಗೂ ಸ್ತ್ರೀ ಶಕ್ತಿ ಸಂಘಗಳ ಉತ್ತೇನಜಕ್ಕಾಗಿ ಸಂಜೀವಿನಿ ಒಕ್ಕೂಟದಿಂದ ಸಾಲ ನೀಡುವ ಮೂಲಕ ಸುಣ್ಣ ತಯಾರಿಕೆ ಆಶ್ರಯಿಸಿಕೊಂಡ ಕುಟುಂಬಗಳಿಗೆ ಸುಸ್ಥಿರ ಬದುಕು ಕಟ್ಟಿಕೊಡುವಲ್ಲಿ ಸಂಜೀವಿನಿ ಒಕ್ಕೂಟ ಹೊಸ ಭರವಸೆ ಮೂಡಿಸಿದೆ.

ಒಂದು ಟ್ರ‍್ಯಾಕ್ಟರ್ ಸುಣ್ಣದ ಕಲ್ಲು ಖರೀದಿಗೆ ₹ ೬ ಸಾವಿರ (ಟ್ರ‍್ಯಾಕ್ಟರ್ ಬಾಡಿಗೆ ಸೇರಿ), ಸುಣ್ಣದ ಕಲ್ಲಿನಷ್ಟೇ ಅಗತ್ಯವಾದ ಇದ್ದಿಲಿಗೆ ಚೀಲವೊಂದಕ್ಕೆ ₹೨೫೦ ನೀಡಬೇಕಿದೆ. ಒಂದು ಟ್ರ‍್ಯಾಕ್ಟರ್ ಸುಣ್ಣದ ಕಲ್ಲಿಗೆ ₹ ೨೫೦ ದರದ ೨೫ ಚೀಲ ಇದ್ದಿಲು ಬೆರೆಸಿ, ಸುಣ್ಣ ತಯಾರಿಕಾ ಘಟಕ (ಭಟ್ಟಿ) ದಲ್ಲಿ ಕನಿಷ್ಟ ೮ ರಿಂದ ೧೦ಗಂಟೆಗಳ ಕಾಲ ಬೇಯಿಸಿದಾಗ ಉತ್ತಮ ಸುಣ್ಣ ತಯಾರಾಗುತ್ತದೆ. 

ಒಂದು ಟ್ರ‍್ಯಾಕ್ಟರ್ ಸುಣ್ಣದ ಕಲ್ಲು ಹಾಗೂ ೨೫ ಚೀಲ ಇದ್ದಿಲು ಸೇರಿಸಿ ೧೮ ಕ್ವಿಂಟಲ್ ಸುಣ್ಣ ತಯಾರು ಮಾಡಲಾಗುತ್ತದೆ. ಇಷ್ಟಕ್ಕೆ ಸುಮಾರು ₹11-12 ಸಾವಿರ ವೆಚ್ಚವಾಗುತ್ತಿದ್ದು, ಕ್ವಿಂಟಲ್‌ ಸುಣ್ಣಕ್ಕೆ ₹1 ಸಾವಿರ ದರವಿದೆ.

ಕೆನರಾ ಬ್ಯಾಂಕ್ ನೆರವು: ರಾಜೂರ ಗ್ರಾಮದ ಸುಣ್ಣಗಾರರ ಪರಿಶ್ರಮದ ಬದುಕಿಗೆ ಸ್ಥಳೀಯ ಕೆನರಾ ಬ್ಯಾಂಕ್ ನೆರವಾಗಿದೆ. ೫೦ ಜನ ಸುಣ್ಣಗಾರರಿಗೆ ತಲಾ ₹ ೩೦ಸಾವಿರ ಸೌಲಭ್ಯ ನೀಡಿ ಅಳಿವಿನಂಚಿನ್ಲಲಿದ್ದ ಸುಣ್ಣ ತಯಾರಿಕೆಗೆ ನೆರವಾಗಿದೆ.

ಗುಡಿ ಕೈಗಾರಿಕೆ ಉತ್ತೇಜನಕ್ಕಾಗಿ ಸರ್ಕಾರವು ಸಾಲ ಸೌಲಭ್ಯ ನೀಡುತ್ತಿದೆ. ರಾಜೂರ ಗ್ರಾಮದ ಸುಣ್ಣ ತಯಾರಿಕೆ ಕುಟುಂಬಗಳನ್ನು ಗುರುತಿಸಿ ಸರ್ಕಾರವು ಸ್ತ್ರೀ ಶಕ್ತಿ ಸಂಜೀವಿನಿ ಒಕ್ಕೂಟದ ಮೂಲಕ ಪ್ರಾಯೋಗಿಕವಾಗಿ ರಾಜೂರ ಗ್ರಾಮದಲ್ಲಿನ ಸುಣ್ಣ ತಯಾರಿಕೆ ಕುಟುಂಬಗಳಿಗೆ ಸಾಲ ಸೌಲಭ್ಯ ನೀಡಿದ್ದು ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ವಿಸ್ತರಿಸಲಾಗುವುದು ಎಂದು ಗಜೇಂದ್ರಗಡ ತಾಪಂ ಇಒ ಡಾ. ಡಿ. ಮೋಹನ ತಿಳಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ