ಮಂಜುನಾಥ ಕೆ.ಎಂ.
ವಿಶ್ವ ಪಾರಂಪರಿಕ ತಾಣದಲ್ಲಿ ಜರುಗಿದ ಮೂರು ದಿನಗಳ ಉತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹರಿದು ಬಂದ ಜನರು ಸಾಂಸ್ಕೃತಿಕ ವೇದಿಕೆಗಳ ಮುಂದೆ ಜಮಾಯಿಸಿ ಜನೋತ್ಸವದ ವಾತಾವರಣ ಇಮ್ಮಡಿಗೊಳಿಸಿದರು.
ಸಾಹಸ ಕ್ರೀಡೆಗಳು, ಎತ್ತುಗಳ ಸ್ಪರ್ಧೆ, ಫಲಪುಷ್ಪ ಪ್ರದರ್ಶನ, ಬೋಟಿಂಗ್, ಮತ್ಸ್ಯಮೇಳ, ವಸ್ತು ಪ್ರದರ್ಶನಗಳಲ್ಲಿ ಜನರು ಪಾಲ್ಗೊಂಡು ಉತ್ಸವದ ಸಡಗರದಲ್ಲಿ ಮಿಂದೆದ್ದರು. ವಿರೂಪಾಕ್ಷೇಶ್ವರ ದೇವಸ್ಥಾನ ಆವರಣದಲ್ಲಿ ಮೂರು ದಿನಗಳ ಕಾಲ ಜರುಗಿದ ವಿಚಾರ ಸಂಕಿರಣ, ಕವಿಗೋಷ್ಠಿಗಳಲ್ಲಿ ಜಿಲ್ಲೆ ಹಾಗೂ ಹೊರ ಜಿಲ್ಲೆಗಳ ಕವಿ, ಸಾಹಿತಿ, ಲೇಖಕರು ಭಾಗವಹಿಸಿದ್ದರು.ಉತ್ಸವದಲ್ಲಿ ಇದೇ ಮೊದಲ ಬಾರಿಗೆ ಡ್ರೋನ್ ಶೋ ಹಮ್ಮಿಕೊಳ್ಳಲಾಗಿತ್ತು. ಹಂಪಿಯ ಪ್ರಮುಖ ಸ್ಮಾರಕಗಳು ಜತೆಗೆ ಮುಖ್ಯಮಂತ್ರಿಗಳು, ಸಚಿವರು, ಸರ್ಕಾರದ ಗ್ಯಾರಂಟಿ ಯೋಜನೆಗಳು ಕೂಡ ಡ್ರೋನ್ ಶೋದಲ್ಲಿ ಅನಾವರಣಗೊಂಡವು. ಮೂರು ದಿನಗಳ ಉತ್ಸವದಲ್ಲಿ ಸುಮಾರು ಮೂರು ಲಕ್ಷ ಜನ ಭಾಗವಹಿಸಿರಬಹುದು ಎಂದು ಅಂದಾಜಿಸಲಾಗಿದೆ. ಜನ ಭಾಗವಹಿಸುವಿಕೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚು ಸೀಮಿತಗೊಂಡಿತ್ತು ಎಂಬುದು ಗಮನಾರ್ಹ.
ಈ ಬಾರಿಯ ಉತ್ಸವದಲ್ಲಿ ೬ ವೇದಿಕೆಗಳನ್ನು ನಿರ್ಮಿಸಲಾಗಿತ್ತು. ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಬೇಕು ಎಂಬ ದೃಷ್ಟಿಯಿಂದ ಬಳ್ಳಾರಿ-ವಿಜಯನಗರ ಜಿಲ್ಲೆಗಳ ನೂರಾರು ಕಲಾವಿದರಿಗೆ ಉತ್ಸವದಲ್ಲಿ ಕಾರ‍್ಯಕ್ರಮ ನೀಡಲು ಅವಕಾಶ ನೀಡಲಾಗಿತ್ತು. ಚಿತ್ರನಟರು, ಟಿವಿ ಕಲಾವಿದರ ಕಾರ‍್ಯಕ್ರಮಗಳನ್ನು ಮುಖ್ಯವೇದಿಕೆಗೆ ಸೀಮಿತಗೊಳಿಸಲಾಗಿತ್ತು. ಹೀಗಾಗಿ ಮುಖ್ಯವೇದಿಕೆಯತ್ತ ಹೆಚ್ಚಿನ ಸಂಖ್ಯೆಯ ಜನರು ಆಗಮಿಸಿದ್ದರಿಂದ ಜನಸ್ತೋಮ ಕಂಡು ಬಂತು. ನಟ ಶಿವರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ನಟಿ ಸಪ್ತಮಿಗೌಡ, ಸಂಜನಾ ಆನಂದ್, ಹಾಸ್ಯ ಕಲಾವಿದ ಗಿಲ್ಲಿ, ಕಿರುತೆರೆ ನಟಿ ಕಾವ್ಯಾ, ಖ್ಯಾತ ಗಾಯಕ ಹರಿಹರನ್ ಸೇರಿದಂತೆ ಅನೇಕ ಪ್ರಮುಖ ಕಲಾವಿದರು ಉತ್ಸವದ ಕಾರ‍್ಯಕ್ರಮದಲ್ಲಿ ಪಾಲ್ಗೊಂಡು ಪ್ರೇಕ್ಷಕರನ್ನು ರಂಜಿಸಿದರು. ಮೂರು ದಿನಗಳ ಉತ್ಸವಕ್ಕೆ ಬಂದ ಜನರನ್ನು ನಿಯಂತ್ರಿಸಲು ಪೊಲೀಸರು ಹೆಣಗಾಡಿದರು.
ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಶಾಸಕ ಎಚ್.ಆರ್. ಗವಿಯಪ್ಪ, ಹಂಪಿ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು. ಕಮಲಾಪುರ ಕೆರೆಯ ಸುತ್ತ ರಿಂಗ್ ರಸ್ತೆ ನಿರ್ಮಿಸಿ, ಪ್ರವಾಸೋದ್ಯಮಕ್ಕೆ ಪೂರಕ ವಾತಾವರಣ ನಿರ್ಮಿಸಲಾಗುವುದು. ಕೆರೆಯ ಸುಂದರೀಕರಣಗೊಳಿಸಲಾಗುವುದು. ಆಕರ್ಷಕ ಪ್ರವಾಸೋದ್ಯಮ ತಾಣವನ್ನಾಗಿಸಲು ಬೇಕಾದ ಎಲ್ಲ ಸೌಕರ‍್ಯಗಳನ್ನು ಕಲ್ಪಿಸಲು ಈಗಾಗಲೇ ಕ್ರಮ ವಹಿಸಲಾಗಿದೆ. ₹೧೦ ಕೋಟಿ ವೆಚ್ಚದಲ್ಲಿ ಫುಡ್ ಕೋರ್ಟ್ ನಿರ್ಮಿಸಲು ಈಗಾಗಲೇ ಸರ್ಕಾರದ ಅನುಮೋದನೆ ಪಡೆಯಲಾಗಿದೆ. ಹಂಪಿ ಪರಿಸರದಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಯೋಜನೆ ರೂಪಿಸಿ ಕೋರಿಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಎಸ್ಪಿ ಎಸ್. ಜಾಹ್ನವಿ, ಜಿಪಂ ಸಿಇಒ ಅಕ್ರಮ ಷಾ, ಎಡಿಸಿ ಬಾಲಕೃಷ್ಣಪ್ಪ ಮತ್ತಿತರರಿದ್ದರು.