ಕನ್ನಡಪ್ರಭ ವಾರ್ತೆ ಬೆಂಗಳೂರು
ಕಾಮದಹನದ ಮಾರನೆಯ ದಿನವಾದ ಶುಕ್ರವಾರ ರಾಜ್ಯಾದ್ಯಂತ ಜನರು ಸಡಗರ, ಸಂಭ್ರಮದಿಂದ ಹೋಳಿ ಆಚರಿಸಿ, ಬಣ್ಣ, ಬಣ್ಣಗಳಲ್ಲಿ ಮಿಂದೆದ್ದರು. ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಹೋಳಿ ರಂಗೇರಿತ್ತು. ಆದರೆ, ವಿದೇಶಿರ ಮೇಲೆ ರೇಪ್ ಪ್ರಕರಣದ ಹಿನ್ನೆಲೆಯಲ್ಲಿ ಗಂಗಾವತಿ ಸಮೀಪದ ಸಾಣಾಪುರ ಸುತ್ತಮುತ್ತ ರೆಸಾರ್ಟ್‌ಗಳನ್ನು ಬಂದ್ ಮಾಡಲಾಗಿದ್ದು, ಹೋಳಿಯ ಸಂಭ್ರಮಾಚರಣೆ ಕಂಡು ಬರಲಿಲ್ಲ. ಈ ಮಧ್ಯೆ, ರಾಯಚೂರು ತಾಲೂಕಲ್ಲಿ ಹೋಳಿ ಆಚರಣೆ ಬಳಿಕ ಸ್ನಾನಕ್ಕೆ ಹೋಗಿದ್ದ ಇಬ್ಬರು ವ್ಯಕ್ತಿಗಳು ನೀರು ಪಾಲಾಗಿದ್ದರೆ, ಗದಗಿನ ಸುವರ್ಣಗಿರಿ ತಾಂಡಾದಲ್ಲಿ ರಾಸಾಯನಿಕಯುಕ್ತ ಬಣ್ಣ ಎರಚಾಟದಲ್ಲಿ 4ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದಾರೆ.ಹೋಳಿ ಅಂಗವಾಗಿ ಜನ ವಾಟರ್ ಗನ್, ಪಿಚಕಾರಿ, ವಾಟರ್ ಬಲೂನ್‌ಗಳಲ್ಲಿ ಬಣ್ಣದ ನೀರನ್ನು ತುಂಬಿ, ಪರಿಚಯಸ್ಥರು, ದಾರಿಹೋಕರಿಗೆ ಬಣ್ಣದ ನೀರು ಸಿಡಿಸುತ್ತಾ, ಹ್ಯಾಪಿ ಹೋಳಿ ಎನ್ನುತ್ತಾ ಸಂಭ್ರಮಿಸುತ್ತಿದ್ದುದು ಎಲ್ಲೆಡೆ ಕಂಡು ಬಂತು. ದಾವಣಗೆರೆಯ ಕೆಲವೆಡೆ ಮೊಟ್ಟೆ, ಟೊಮೆಟೋ, ಸೊಪ್ಪುಗಳನ್ನು ಎರಚಾಡಿ ಜನ ಪರಿಸರಸ್ನೇಹಿ ಹೋಳಿ ಆಚರಿಸಿದರು. ಬೀದರ್ ಜಿಲ್ಲೆ ಔರಾದ್ ತಾಲೂಕಿನ ಸ್ವಗ್ರಾಮದಲ್ಲಿ ಶಾಸಕ ಪ್ರಭು ಚವ್ಹಾಣ ಹೋಳಿಯಲ್ಲಿ ಮಿಂದೆದ್ದರು. ಔರಾದ್ ತಾಲೂಕಿನ ಯನಗುಂದಾ ಗ್ರಾಮದ ನಾಟಿ ವೈದ್ಯ ಬಸವರಾಜ ಘುಳೆ ಅವರ ಜಮೀನಿನಲ್ಲಿ ಹೋಳಿ ನಿಮಿತ್ತ ಮಡ್ ಬಾತ್ ಆಯೋಜಿಸಲಾಗಿತ್ತು. ಚಿಕ್ಕಮಗಳೂರಿನ ದತ್ತಪೀಠದ ಹೊರವಲಯದಲ್ಲಿ ಇದೇ ಮೊದಲ ಬಾರಿಗೆ ಹೋಳಿ ಆಚರಣೆ ನಡೆಯಿತು. ಆದರೆ, ಗುಹೆಯೊಳಗೆ ವಿಐಪಿ ದ್ವಾರದ ಪ್ರವೇಶಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ.
ಗದಗ ಜಿಲ್ಲೆ ಲಕ್ಷ್ಮೇಶ್ವರ ಸಮೀಪದ ಸುವರ್ಣಗಿರಿ ತಾಂಡಾದಿಂದ ಪಟ್ಟಣದ ಉಮಾ ವಿದ್ಯಾಲಯಕ್ಕೆ ಪರೀಕ್ಷೆ ಬರೆಯಲು ಬಸ್ ಮೂಲಕ ಆಗಮಿಸುತ್ತಿದ್ದ ಹೈಸ್ಕೂಲ್ ವಿದ್ಯಾರ್ಥಿನಿಯರ ಮೇಲೆ ಅದೇ ಗ್ರಾಮದ ಯುವಕರು ಸಗಣಿ, ಮೊಟ್ಟೆ, ಗೊಬ್ಬರ ಮತ್ತು ರಾಸಾಯನಿಕ ಮಿಶ್ರಿತ ಬಣ್ಣ ಎರಚಿದ್ದರಿಂದ 4ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಉಸಿರಾಟ ಸಮಸ್ಯೆಯಿಂದ ಅಸ್ವಸ್ಥರಾಗಿ, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರು.ರಾಯಚೂರು ತಾಲೂಕಿನ ಸುಲ್ತಾನಪುರದಲ್ಲಿ ಹೋಳಿ ಆಚರಣೆ ಬಳಿಕ ಗ್ರಾಮದ ಹೊರವಲಯದ ಹೊಂಡದಲ್ಲಿ ಸ್ನಾನಕ್ಕೆ ಇಳಿದ ಸೋಮನಗೌಡ (45) ನೀರುಪಾಲಾಗಿದ್ದಾರೆ. ಇದೇ ವೇಳೆ, ತಾಲೂಕಿನ ಗಿಲ್ಲೆಸೂಗುರು ಚೆಕ್ ಪೋಸ್ಟ್ ಬಳಿ ರಾಜೊಳ್ಳಿಬಂಡಾ ತಿರುವು ಯೋಜನೆ ಕಾಲುವೆಯಲ್ಲಿ ಸ್ನಾನಕ್ಕೆ ಹೋದ ಮಹಾದೇವ (30) ನೀರಲ್ಲಿ ಕೊಚ್ಚಿಹೋಗಿದ್ದಾರೆ.