ಬಳ್ಳಾರಿ: ಸುಗ್ಗಿಯ ಹಬ್ಬವಾದ ಮಕರ ಸಂಕ್ರಾಂತಿ ಜಿಲ್ಲಾದ್ಯಂತ ಸಡಗರ ಸಂಭ್ರಮದಿಂದ ಜರುಗಿತು.
ನಗರದ ಅಧಿದೇವತೆ ಶ್ರೀಕನಕ ದುರ್ಗಮ್ಮ ದೇವಸ್ಥಾನ, ಕೋಟೆ ಮಲ್ಲೇಶ್ವರಸ್ವಾಮಿ ದೇವಸ್ಥಾನ ಸೇರಿದಂತೆ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಜರುಗಿದವು. ಬೆಳಗ್ಗೆಯಿಂದಲೇ ಭಕ್ತರು ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದರು. ಸಂಕ್ರಾಂತಿ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ವಿಶೇಷ ಅರ್ಚನೆ ಹಾಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಸೂರ್ಯನು ಮಕರ ರಾಶಿಗೆ ತೆರಳುವುದೆಂದರೆ ಉತ್ತರಾಯಣ ಪರ್ವ ಕಾಲ ಪ್ರಾರಂಭವಾಯಿತು ಎಂಬುವುದು ಜನರ ನಂಬಿಕೆಯಾಗಿದೆ. ಈ ಪುಣ್ಯಕಾಲದಲ್ಲಿ ದೇವರ ದರ್ಶನದಿಂದ ಒಳಿತಾಗುತ್ತದೆ ಎಂಬ ಭಾವನೆಯೊಂದಿಗೆ ಜನರು ದೇವಸ್ಥಾನಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಿರುವುದು ಕಂಡು ಬಂತು.ಮನ ಸೆಳೆದ ರಂಗೋಲಿಯ ಚಿತ್ತಾರ
ಗ್ರಾಮೀಣ ಭಾಗದಲ್ಲಿ ಹಬ್ಬದ ಸಂಭ್ರಮ
ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲೂ ಸಂಕ್ರಾಂತಿ ಹಬ್ಬದ ಸಡಗರ ಕಂಡು ಬಂತು. ಕೃಷಿಕರು ಎತ್ತುಗಳಿಗೆ ವಿಶೇಷವಾಗಿ ಅಲಂಕರಿಸಿ ಪೂಜೆ ಸಲ್ಲಿಸಿದರು. ಸಂಜೆ ಗ್ರಾಮೀಣ ಕ್ರೀಡಾಕೂಟಗಳು ನಡೆದವು. ಯುವಕರು ಹಾಗೂ ಮಹಿಳೆಯರು ಕ್ರೀಡಾಕೂಟದಲ್ಲಿ ಉತ್ಸಾಹದಿಂದ ತೊಡಗಿಸಿಕೊಂಡಿದ್ದರು. ಸಂಜೆ ಗಾಳಿಪಟ ಹಾರಿಸುವ ಸ್ಪರ್ಧೆಗಳು ನಡೆದವು. ಮಕ್ಕಳು ಹಾಗೂ ಮಹಿಳೆಯರು ಗಾಳಿಪಟ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಸಂಜೆ ವಿವಿಧ ದೇವಸ್ಥಾನಗಳಲ್ಲಿ ಸಂಕ್ರಾಂತಿ ದೀಪೋತ್ಸವ ಕಾರ್ಯಕ್ರಮ ಜರುಗಿದವು.ಸೂರ್ಯನು ಮಕರರಾಶಿಯನ್ನು ಪ್ರವೇಶಿಸುವ ದಿನವಾದ ಮಕರ ಸಂಕ್ರಾಂತಿ ದಿನ ಅತ್ಯಂತ ಶುಭದಾಯಕ ದಿನ ಎಂದೇ ಭಾವಿಸಲಾಗುತ್ತಿದ್ದು, ಈ ದಿನದಂದು ಮಾಡುವ ದಾನಕ್ಕೆ ಹೆಚ್ಚಿನ ಮಹತ್ವವಿದೆ. ಧನುರ್ಮಾಸ ಮುಕ್ತಾಯಗೊಂಡಿದ್ದರಿಂದ ಶುಭ ಕಾರ್ಯಗಳಿಗೆ ಸಂಕ್ರಾಂತಿ ದಿನದಂದು ಚಾಲನೆ ಸಿಗಲಿದೆ.